Dharmasthala Case: ಧರ್ಮಸ್ಥಳ ಗಲಾಟೆಗೆ ಸಂಬಂಧಿಸಿ 6 ಮಂದಿಯ ಬಂಧನ, ಜಾಮೀನು
ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ನಡೆದಿದ್ದ ಎರಡು ಗುಂಪುಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಆರು ಜನರನ್ನು ಬಂಧಿಸಿದ್ದಾರೆ. ಇವರಿಗೆ ಜಾಮೀನು ದೊರೆತಿದ್ದು, ಆ.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಧೀಶರು ಆದೇಶಿಸಿದ್ದಾರೆ.


ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಧರ್ಮಸ್ಥಳ (Dharmasthala Case) ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ಆ.6 ರಂದು ಸಂಜೆ 4 ಮಂದಿ ಯೂಟ್ಯೂಬರ್‌ಗಳ (Youtubers) ಮೇಲೆ ಹಲ್ಲೆ (Assault) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಆ.9ರಂದು ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಎಂಬವರನ್ನು ಬಂಧಿಸಿದ್ದು ಶನಿವಾರ ಸಂಜೆ ಬೆಳ್ತಂಗಡಿ (Belthangady) ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು, 6 ಮಂದಿಗೂ ಮಧ್ಯಂತರ ಜಾಮೀನು (Bail) ಮಂಜೂರು ಮಾಡಲಾಗಿದೆ.
ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ನಡೆದಿದ್ದ ಎರಡು ಗುಂಪುಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಇವರಿಗೆ ಜಾಮೀನು ದೊರೆತಿದ್ದು, ಆ.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಎರಡು ಗುಂಪುಗಳು ಅಕ್ರಮ ಕೂಟ ಸೇರಿ ಗಲಾಟೆ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೊಟೋ(BNS), 2023 (U) s-189(2),191(2),132,324(6),190) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ಧರ್ಮಸ್ಥಳದ ಪಾಂಗಳ ಕ್ರಾಸ್ ಗಂಪು ಘರ್ಷಣೆ ಉಂಟಾಗಿತ್ತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದರು. ಗಲಾಟೆಗೆ ಸಂಬಂಧಿಸಿ ಪೊಲೀಸರು 6 ಜನರನ್ನು ಬಂಧಿಸಿದ್ದು, ಇನ್ನುಳಿದ 27 ಜನರಿಗಾಗಿ ಹುಡುಕಾಟ ನಡೆಸಿದ್ದಾರೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅನಾಮಿಕ ತೋರಿಸಿದ ಸ್ಥಳದಲ್ಲಿ ಎಸ್‌ಐಟಿ ಶೋಧಕಾರ್ಯ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಯುತ್ತಿರುವ ಸ್ಥಳದಿಂದಲೇ ಮಾಧ್ಯಮಗಳು ನೇರ ವರದಿಯನ್ನು ಪ್ರಕಟಿಸುತ್ತಿವೆ. ಆದರೆ ಯೂಟ್ಯೂಬರ್‌ಗಳ ವರದಿ, ನಡೆ ಕುರಿತು ಧರ್ಮಸ್ಥಳದ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ನೂಕಾಟ, ತಳ್ಳಾಟ ನಡೆದು ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿತ್ತು. ನಂತರ ಗಾಯಾಳು ಯೂಟ್ಯೂಬರ್‌ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುಟ್ಯೂಬರ್‌ಗಳನ್ನು SDPI ಕಾರ್ಯಕರ್ತರು ಭೇಟಿ ಮಾಡಿದ್ದಾರೆ. ಧರ್ಮಸ್ಥಳ ಹೋರಾಟಗಾರರಿಗೂ SDPIಗೂ ಏನು ಸಂಬಂಧ? ಏನಿದರ ಮರ್ಮ? ಈ ಹೋರಾಟದಲ್ಲಿರುವವರನ್ನು ಸೂಕ್ಷ್ಮವಾಗಿ ಗಮನಿಸಿ. ಎಡಪಂಥೀಯರು, ನಗರ ನಕ್ಸಲರು, SDPI, ಜಿಹಾದಿ ಗ್ಯಾಂಗ್, ಕಾನೂನು ಕೈಗೆತ್ತಿಕೊಳ್ಳುವವರೇ ತುಂಬಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಎಸ್‌ಐಟಿ ತನಿಖೆ ಸ್ವಾಗತಾರ್ಹ, ಈ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಎಸ್‌ಐಟಿಯನ್ನು ಬಳಸಿಕೊಳ್ತಿದೆ. ಎಸ್‌ಐಟಿ ತನಿಖೆಯ ದಿಕ್ಕು ತಪ್ಪುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮಾನ ವ್ಯಕ್ತಪಡಿಸಿದ್ದಾರೆ.