ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದಾನೆ: ಸಮೀರ್ ಮುಲ್ಲಾ ವಿರುದ್ಧ ಸಂತ್ರಸ್ತ ಯುವತಿ ಆರೋಪ!
Hubballi love jihad Case: ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿರುವ ಸಂತ್ರಸ್ತ ಯುವತಿ, ಸಮೀರ್ ತನಗೆ ಮತ್ತು ಬರಿಸುವ ಪಾನೀಯ ಕೊಟ್ಟು ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ವಿಡಿಯೊ ಕೂಡ ಮಾಡಿಕೊಂಡಿದ್ದಾನೆ. ಇನ್ನೂ ಹಲವು ಯುವತಿಯರನ್ನು ಆತ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾಳೆ.
ಆರೋಪಿ ಯುವಕ ಸಮೀರ್ ಮುಲ್ಲಾ ಮತ್ತು ಸಂತ್ರಸ್ತ ಯುವತಿ. -
ಹುಬ್ಬಳ್ಳಿ: ನಗರದ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ (Hubballi love jihad Case) ಸಂಬಂಧಿಸಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಹಿಂದೂ ಯುವತಿಯೊಂದಿಗೆ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮನೆಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿ, ಆತನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಜಿಮ್ ಟ್ರೈನರ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ.
ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿರುವ ಸಂತ್ರಸ್ತ ಯುವತಿ, ಸಮೀರ್ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ, ಅವರಿಂದ ಸಮೀರ್ ಪರಿಚಯವಾಗಿತ್ತು. ತೈಸೀಮ್ ಜತೆಗೆ ಸ್ನೇಹಿತೆಯಾಗಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಬರ್ತ್‌ಡೇ ಪಾರ್ಟಿ, ವೀಕೆಂಡ್ ಪಾರ್ಟಿಗೆ ಒಟ್ಟಿಗೆ ಹೋಗಿದ್ದೆವು. ಆಗ ಸಮೀರ್ ಸಹ ಬಂದಿದ್ದ. ಇದಾದ ಮೇಲೆ ಸಮೀರ್ ಆತ್ಮೀಯನಾಗಿದ್ದ. ನಂತರ ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆಗ ಮತ್ತು ಬರಿಸುವ ಪಾನೀಯ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದನ್ನು ವಿಡಿಯೊ ಕೂಡ ಮಾಡಿಕೊಂಡಿದ್ದ.
ಅದಾದ ನಂತರ ವಿಡಿಯೊ ಬಗ್ಗೆ ಗೊತ್ತಾಗಿ ಪ್ರಶ್ನಿಸಿದಾಗ ಯಾರಿಗೂ ವಿಡಿಯೊ ತೋರಿಸಲ್ಲ ಎಂದು ಹೇಳಿದ್ದ. ಈ ರೀತಿ ಬಹಳ ಹುಡುಗಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಸಮೀರ್ ಮುಲ್ಲಾ ಮೊಬೈಲ್ನಲ್ಲಿ ಹಲವು ಯುವತಿಯರ ಫೋಟೊಗಳು!
ಇನ್ನು ಸಮೀರ್ ಮುಲ್ಲಾ ಪೊಲೀಸರ ವಶದಲ್ಲಿದ್ದು, ಆತನ ಮೊಬೈಲ್ನಲ್ಲಿ ಹಲವು ಹಿಂದೂ ಯುವತಿಯರ ಫೋಟೊಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪ್ರೆಗ್ನೆನ್ಸಿ ಟ್ಯಾಬ್ಲೆಟ್‌ಗಳು ಮತ್ತು ಸ್ಕ್ಯಾನಿಂಗ್ ರಿಪೋರ್ಟ್‌ನ ಫೋಟೊಗಳು ಸಹ ಇವೆ ಎನ್ನಲಾಗಿದೆ.
ಯುವತಿ ತಾಯಿ ಆಕ್ರೋಶ
ಜಿಮ್ ಟ್ರೈನರ್ ಸಮೀರ್ನನ್ನ ಮಗಳ ತಲೆ ಕೆಡಿಸಿದ್ದಾನೆ. ನನ್ನ ಮಗಳನ್ನು ಹಿಪ್ನೋಟೈಸ್ ಮಾಡಲಾಗಿದೆ. ನನ್ನ ಮಗಳಿಗೂ ಸಮೀರ್‌ಗೂ ಯಾವುದೇ ಸಂಬಂಧ ಇಲ್ಲ. ಕಳೆದ ನಾಲ್ಕೈದು ದಿನದಿಂದ ನನ್ನ ಮಗಳಿಗೆ ಸಮೀರ್ ಮತ್ತು ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ. ಇಂದು ನಮ್ಮನ್ನು ಸುಟ್ಟ ಹಾಕಲು ಸಮೀರ್ ಕುಟುಂಬ ಬಂದಿದೆ. ಪೆಟ್ರೋಲ್, ಹಾಕಿ ಸ್ಟಿಕ್, ತಲವಾರು ತೆಗೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತರು ಹೇಳಿದ್ದೇನು?
ಪ್ರಕರಣದ ಬಗ್ಗೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಕಮಿಷನರ್ ಎನ್ ಶಶಿಕುಮಾರ್ ಅವರು ಮಾತನಾಡಿದ್ದು, ಮೊದಲು ಯುವತಿ ಕುಟುಂಬಸ್ಥರು ಯುವಕನ ಮನೆಗೆ ಹೋಗಿ ನಮ್ಮ ಮನೆ ಯುವತಿ ಜತೆ ಓಡಾಡುತ್ತಿದ್ದೀಯಾ ಎಂದು ಗಲಾಟೆ ಮಾಡಿದ್ದು, ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ಬಳಿಕ ನಮ್ಮ ಹುಡುಗನನ್ನು ಎಲ್ಲಿ ಕರೆದುಕೊಂಡು ಹೋಗಿದ್ದೀರಾ ಎಂದು ಯುವಕನ ಕಡೆಯವರು ಕೂಡ ಯುವತಿ ಮನೆ ಬಳಿ ಹೋಗಿ ಜಗಳ ಮಾಡಿದ್ದಾರೆ. ಅಲ್ಲಿ ಒಬ್ಬರಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಸದ್ಯ ಕೆಲವರನ್ನು ವಶಕ್ಕೆ ಪಡೆದಿದ್ದು, ದೂರ ದಾಖಲಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಆರೋಪ ತಳ್ಳಿ ಹಾಕಿದ ಸಮೀರ್ ಸಹೋದರಿ
ಮತ್ತೊಂದೆಡೆ ಸಮೀರ್ ಸಹೋದರಿ ತೈಸೀಮ್ ಮುಲ್ಲಾ ಆರೋಪವನ್ನು ತಳ್ಳಿಹಾಕಿದ್ದಾರೆ. ಇದು ಲವ್ ಜಿಹಾದ್ ಅಲ್ಲ. ಅವರಿಬ್ಬರೂ ಕಳೆದ ಮೂರು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದರು ಹೇಳಿದ್ದಾರೆ. ನೂರು ಜನ ಬಂದು ನನ್ನ ತಮ್ಮನನ್ನು ಹೊಡೆದು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಯುವತಿಯ ಹೇಳಿಕೆ ಹೊರಬರುತ್ತಿದ್ದಂತೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.