ಪಿಎಚ್‌ಡಿ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಧಾರವಾಡ ವಿವಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ
Dharwad university professor Case: ಧಾರವಾಡ ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜ ತಂಗುದೊರೈ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಿಎಚ್‌ಡಿ ಕೊಡಿಸುವ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಇತರ ವಿದ್ಯಾರ್ಥಿಗಳಿಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
-
ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಿಎಚ್‌ಡಿ ಕೊಡಿಸುವೆ, ಪ್ರಾಧ್ಯಾಪಕಿ ಮಾಡಿಸುತ್ತೇನೆ ಎಂದು ಆಮಿಷ ತೋರಿ ಸಂಶೋಧನಾ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ನೀನು ಪಿಎಚ್‌ಡಿ ಮುಗಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪಿಎಚ್‌ಡಿ ವಿದ್ಯಾರ್ಥಿ ವೇದವ್ಯಾಸ್ ಚೌಹಾಣ್ ಪ್ರತಿಕ್ರಿಯಿಸಿ, ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜ ತಂಗುದೊರೈ ಅವರಿಂದ ನಿರಂತರ ಕಿರುಕುಳ ಎದುರಿಸಿದ್ದೇನೆ. ನಮ್ಮ ಪ್ರೊಫೆಸರ್ ಈ ಹಿಂದೆ ವಿದ್ಯಾರ್ಥಿನಿಯೊಬ್ಬರ ಜತೆ ಸಂಬಂಧ ಹೊಂದಿದ್ದರು. ಪಿಎಚ್‌ಡಿ ಕೊಡಿಸುವ ಆಮಿಷ ತೋರಿ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ, ಆ ವಿದ್ಯಾರ್ಥಿನಿ ವ್ಯಾಸಂಗವನ್ನು ಅರ್ಧದಲ್ಲೇ ನಿಲ್ಲಿಸಿ ತೆರಳಿದ್ದಾರೆ. ಇದೀಗ ಆಕೆಯನ್ನು ಮತ್ತೆ ಕರೆಸುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಸಂಶೋಧನಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿದ್ಯಾರ್ಥಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಗಳಿಗೆ ದೂರು ಸಲ್ಲಿಸಿದ್ದು, ಕೆಲವು ಆಡಿಯೋ ಮತ್ತು ಇತರ ದಾಖಲೆಗಳನ್ನೂ ಒದಗಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಧ್ಯಾಪಕ ದೇವರಾಜ ತಂಗುದೊರೈ, “ಇದು ಅಕಾಡೆಮಿಕ್ ವಿಷಯವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಎಂದು ಹೇಳಿದ್ದಾರೆ.
ಬಕ್ರೀದ್ ಹಬ್ಬದ ವೇಳೆ ಗಲಾಟೆ ಪ್ರಕರಣ; ಬಿಜೆಪಿ ಶಾಸಕ ಶರಣು ಸಲಗರ್‌ಗೆ ಜಾಮೀನು ರಹಿತ ವಾರಂಟ್
ಪ್ರಕರಣ ಇದೀಗ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಆಡಳಿತ ತೀರ್ಮಾನ ಕೈಗೊಳ್ಳಬೇಕಿದೆ. ವಿದ್ಯಾರ್ಥಿ ಸಂಘಟನೆಗಳು ಪ್ರಕರಣದ ಸಮಗ್ರ ತನಿಖೆ ನಡೆಸಿ, ಪ್ರೊಫೆಸರ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿವೆ.