Sudha Murthy: ತಾವು ಕಲಿತ ಶಾಲೆಗೆ 4 ಕೋಟಿ ರೂ. ವೆಚ್ಚ ಮಾಡಿ ಮರುಜೀವ ನೀಡಿದ ಸುಧಾ ಮೂರ್ತಿ
Hubballi: ‘ನಾನು ಇಲ್ಲಿ ಏಳು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ಶಾಲೆ ಶಿಥಿಲಗೊಂಡಿರುವುದು ಕಂಡು ಬೇಜಾರಾಯಿತು. ನಾನು ಓದಿದ ಶಾಲೆ ಉಳಿಸಿಕೊಳ್ಳಬೇಕೆಂದು ನವೀಕರಣ ಮಾಡಿಸಿದ್ದೇನೆ. ನಾನು ದುಡ್ಡಿನ ಮುಖ ನೋಡಲಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆʼ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
-
ಹರೀಶ್ ಕೇರ
Oct 29, 2025 8:49 AM
ಹುಬ್ಬಳ್ಳಿ, ಅ.28: ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ (Sudha Murty) ತಾವು ಕಲಿತ ಶಾಲೆಯ (School) ಪುನರುಜ್ಜೀವನಕ್ಕೆ ಕ್ರಮ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ವ್ಯಯಿಸಿ ಶಾಲೆಯ ನವೀಕರಣ ಮಾಡಿಸಿದ್ದಾರೆ. ತಾವು ಕಲಿತ ಹುಬ್ಬಳ್ಳಿಯ ಜ್ಞಾನ ಭಾರತಿ (Hubballi Jnana Bharati school) ಶಾಲೆಯಲ್ಲಿ ಈಗ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
4 ಕೋಟಿ ರೂ. ವೆಚ್ಚದಲ್ಲಿ ಜ್ಞಾನ ಭಾರತಿ ಶಾಲೆ ನವೀಕರಣ
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ನ್ಯೂ ಎಜ್ಯುಕೇಶನ್ ಸೊಸೈಟಿಯ ಜ್ಞಾನ ಭಾರತಿ ಶಾಲೆಯನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. 115 ವರ್ಷ ಇತಿಹಾಸ ಹೊಂದಿರುವ ಜ್ಞಾನ ಭಾರತಿ ಶಾಲೆಯಲ್ಲಿ ಸುಧಾ ಮೂರ್ತಿ 5 ನೇ ತರಗತಿಯಿಂದ 11 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಜೊತೆಗೆ ಅವರ ಸಹೋದರಿ ಸುನಂದಾ ಕುಲಕರ್ಣಿ ಕೂಡಾ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸುಧಾ ಮೂರ್ತಿ ತಾಯಿ ಕೂಡಾ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರಂತೆ!
ಒಂದು ಸಮಯದಲ್ಲಿ ಇಡೀ ಹುಬ್ಬಳ್ಳಿಯಲ್ಲಿ ಸುಪ್ರಸಿದ್ದವಾಗಿದ್ದ ಜ್ಞಾನ ಭಾರತಿ ಕನ್ನಡ ಮಾಧ್ಯಮ ಶಾಲೆ ನಂತರದ ದಿನದಲ್ಲಿ ತನ್ನ ವೈಭವವನ್ನು ಕಳೆದುಕೊಂಡಿತ್ತು. ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಹಿಂದೆ ಬಿದ್ದಿತ್ತು. ಜೊತೆಗೆ ಶಾಲೆಯ ಕಟ್ಟಡ ಬೀಳುವ ಹಂತ ತಲುಪಿತ್ತು. ಕೆಲ ವರ್ಷಗಳ ಹಿಂದೆ ಸುಧಾ ಮೂರ್ತಿಯವರು, ತಾವು ಕಲಿತ ಶಾಲೆ ಹೇಗಿದೆ ಎಂದು ನೋಡಲು ಆಗಮಿಸಿದ್ದರು. ಬೀಳುವ ಹಂತಕ್ಕೆ ಬಂದ ಕಟ್ಟಡವನ್ನು ಗಮನಿಸಿದ್ದಾರೆ. ಮೂಲಸೌರ್ಕಯಗಳೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ನೋಡಿದ ಸುಧಾ ಮೂರ್ತಿ ಅವರು ಶಾಲೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ನವೀಕರಣ ಮಾಡಿಸಿದ್ದಾರೆ.
ಆರಂಭದಲ್ಲಿ ಕನ್ನಡ ಮಾಧ್ಯಮಲ್ಲಿದ್ದ ಶಾಲೆ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತನೆ ಹೊಂದಿತ್ತು. ಇದೀಗ ಸ್ಟೇಟ್ ಬೋರ್ಡ್ನಿಂದ ಸಿಬಿಎಸ್ಇ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಸೋಮವಾರ (ಅಕ್ಟೋಬರ್ 28) ಆಗಮಿಸಿದ್ದ ಸುಧಾ ಮೂರ್ತಿ, ನವೀಕರಣ ಕಟ್ಟಡ ಉದ್ಘಾಟನೆ, ಸಿಬಿಎಸ್ಇ ಮಾನ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Sudha Murthy: ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲು ಸುಧಾ ಮೂರ್ತಿ- ನಾರಾಯಣ ಮೂರ್ತಿ ದಂಪತಿ ನಿರಾಕರಣೆ
‘ನಾನು ಇಲ್ಲಿ ಏಳು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ಶಾಲೆ ಶಿಥಿಲಗೊಂಡಿರುವುದು ಕಂಡು ಬೇಜಾರಾಯಿತು. ನಾನು ಓದಿದ ಶಾಲೆ ಉಳಿಸಿಕೊಳ್ಳಬೇಕೆಂದು ನವೀಕರಣ ಮಾಡಿಸಿದ್ದೇನೆ. ನಾನು ದುಡ್ಡಿನ ಮುಖ ನೋಡಲಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆʼ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಶಾಲೆಯಲ್ಲಿ ಒಂದು ಕಾಲಕ್ಕೆ 1400 ಮಕ್ಕಳ ಸಂಖ್ಯೆ ಇತ್ತು. ಆದರೆ, ಈಗ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ಸಿಬಿಎಸ್ಇ ಮಾನ್ಯತೆ ಒದಗಿಸಿಕೊಟ್ಟು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವೀಕೃತ ಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ
ನವೀಕೃತ ಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಮಿಸ್ಟ್ರಿ ಲ್ಯಾಬ್, ಅತ್ಯಾಧುನಿಕ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಕನ್ನಡ ಮಾಧ್ಯಮದ ಕಾರಣದಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಿಬಿಎಸ್ ಮಾನ್ಯತೆ ಪಡೆದು ಕೇಂದ್ರ ಪಠ್ಯ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ನೇತೃತ್ವದಲ್ಲಿ ಮಾರ್ಗದರ್ಶಕ ಮಂಡಳಿಯನ್ನೂ ರಚಿಸಲಾಗಿದೆ. ಶಿಕ್ಷಕರಿಗೆ ತಿಂಗಳಿಗೆ ಎರಡು ದಿನಗಳ ಕಾಲ ತರಬೇತಿ ಹಮ್ಮಕೊಳ್ಳುವ ಮೂಲಕ ಕಲಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಪದ್ಧತಿ ಜಾರಿಗೆ ತರಲಾಗಿದೆ.
ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಶಾಲೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದಿರುವ ಗುರುರಾಜ ಕರ್ಜಗಿ, ನವೀಕೃತ ಕಟ್ಟಡದಲ್ಲಿ ಲ್ಯಾಬ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ನಮ್ಮ ಮಕ್ಕಳಿಗೆ ಜಗತ್ತಿನ ಜ್ಞಾನ ಕೊಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಕರನ್ನು ತಯಾರಿ ಮಾಡುತ್ತಿದ್ದೇವೆ. ಮಕ್ಕಳು ಶಿಕ್ಷಕರನ್ನು ಇಷ್ಟಪಟ್ಟರೆ ಶಿಕ್ಷಣವನ್ನು ಇಷ್ಟಪಡುತ್ತಾರೆ. ಅನ್ನ ಮತ್ತು ಜ್ಞಾನ ಎಂದು ಸಹ ಮಾರಾಟ ಆಗಬಾರದು ಎಂದು ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.