Dharwad Akashvani: 'ಧಾರವಾಡ ಆಕಾಶವಾಣಿ ಕೇಂದ್ರ' ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ ಆದೇಶ: ಜೋಶಿ ಮನವಿಗೆ ಸ್ಪಂದನೆ
Pralhad Joshi: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿದ್ದು, ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಪ್ರಸಾರ ಭಾರತಿಗೆ ಆದೇಶಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಏ.22: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದ್ದು, ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ ಧಾರವಾಡದಲ್ಲಿಯೇ ಮುಂದುವರಿಯಲಿದೆ. ಧಾರವಾಡ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಮನವಿ ಮೇರೆಗೆ ಪ್ರಸಾರ ಭಾರತಿ ಈ ಕ್ರಮಕ್ಕೆ ಮುಂದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿರುವ ಜನಪ್ರಿಯ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಸಚಿವರು ಕೇಂದ್ರದ ಗಮನ ಸೆಳೆದಿದ್ದರು.
ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರ ನಿರ್ಣಯಿಸಿತ್ತು. ಈ ಸಂಬಂಧ ಉತ್ತರ ಕರ್ನಾಟಕದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ, ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಹ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಪರ್ಕಿಸಿ ಆಕಾಶವಾಣಿ ಕೇಂದ್ರವನ್ನು ಧಾರವಾಡದಲ್ಲೇ ಮುಂದುವರಿಸುವಂತೆ ಕೋರಿದ್ದರು. ಧಾರವಾಡ ಪ್ರಸಾರ ಭಾರತೀಯ ಕೇಂದ್ರದ ಕಾರ್ಯವ್ಯಾಪ್ತಿ ಮತ್ತು ಅದನ್ನು ಧಾರವಾಡದಲ್ಲಿಯೇ ಮುಂದುವರಿಸುವ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಪ್ರಧಾನಿ ಮೋದಿ ವಿರುದ್ಧ ಲಘು ಹೇಳಿಕೆ; ಖರ್ಗೆ ಕ್ಷಮೆಯಾಚಿಸಲಿ ಎಂದು ಜೋಶಿ ಆಗ್ರಹ
ಜೋಶಿ ಮನವಿಗೆ ಅಶ್ವಿನಿ ವೈಷ್ಣವ್ ಸ್ಪಂದನೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿದ್ದು, ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಪ್ರಸಾರ ಭಾರತಿಗೆ ಆದೇಶಿಸಿದ್ದಾರೆ. ಪ್ರಯುಕ್ತ ಸಚಿವ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಶ್ವಿನಿ ವೈಷ್ಣವ ಅವರಿಗೆ ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.