ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ; ವಿಜಯ್‌ ಮಲ್ಯ ಆಕ್ರೋಶ

ದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಸಿ ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಬುಧವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಉದ್ಯಮಿ ವಿಜಯ್‌ ಮಲ್ಯ ಸತೀಶ್‌ ಜಾರಕಿಹೊಳಿ ಪರ ಮಾತನಾಡಿದ್ದಾರೆ.

ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ; ವಿಜಯ್‌ ಮಲ್ಯ ಆಕ್ರೋಶ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 12, 2026 9:22 AM

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಸಿ ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಮನೆ ಮೇಲೆ ಬುಧವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಾರಕಿಹೊಳಿ ಅವರ ಬೆಳಗಾವಿ ಹಾಗೂ ಬೆಂಗಳೂರು ಮನೆ, ಕಚೇರಿ, ಅವರ ಬಾಮೈದ, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ. ಮಂಜುನಾಥ್ ಸೇರಿದಂತೆ ಅವರ ಆಪ್ತರ ಮನೆ ಸೇರಿದಂತೆ 18 ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಜಪ್ತಿ ಮಾಡಿದ ವಿವರಗಳನ್ನು ಇಡಿ ಬಿಡುಗಡೆ ಮಾಡಿದ ಬೆನ್ನಲ್ಲೇ ಸತೀಶ್‌ ಪರ ಮಾತನಾಡಿರುವ ಉದ್ಯಮಿ ವಿಜಯ್‌ ಮಲ್ಯ ಅವರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿರುವ ಮಲ್ಯ, ಸಿಬಿಐ ಮತ್ತು ಇ.ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಸತ್ಯ ತಿಳಿದುಕೊಳ್ಳಲು ಬಯಸುವವರಿಗೆ, ಸಿಬಿಐ ಮತ್ತು ಇ.ಡಿ ಸೃಷ್ಟಿಸಿರುವ ಸುಳ್ಳುಗಳು ಹಾಗೂ ಆಧಾರರಹಿತ ಆರೋಪಗಳನ್ನು ನಿಧಾನವಾಗಿ ಬಹಿರಂಗಪಡಿಸುತ್ತೇನೆ. ಈ ಸಂಸ್ಥೆಗಳು ವಂಚನೆಯಲ್ಲಿ ಪರಿಣತರು' ಎಂದು ಅವರು ಹೇಳಿದ್ದಾರೆ.



'ಸುಳ್ಳು ಆರೋಪಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ನಾನು ದೃಢವಾಗಿ ನಿಂತಿದ್ದೇನೆ. ಎಂದಿಗೂ ಕೈಚೆಲ್ಲುವುದನ್ನು ನಂಬುವುದಿಲ್ಲ. ಆದರೆ ಈ ತನಿಖಾ ಸಂಸ್ಥೆಗಳಿಂದ ತಪ್ಪಾಗಿ ಗುರಿಯಾಗಿರುವ ಇತರ ಸಂತ್ರಸ್ತರ ಬಗ್ಗೆ ನನಗೆ ವಿಷಾದವಿದೆ. ಈ ಸಂಸ್ಥೆಗಳು ಏನು ಮಾಡುತ್ತವೆ ಎಂಬುದು ಸಾರ್ವಜನಿಕವಾಗಿ ತಿಳಿದಿರುವ ವಿಚಾರ' ಎಂದು ಮಲ್ಯ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಅವರು, 'ಇ.ಡಿ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಚಾರ್ಜ್‌ಶೀಟ್ ಇಲ್ಲ, ವಿಚಾರಣೆ ಇಲ್ಲ. ಸಾರ್ವಜನಿಕವಾಗಿ ಕೇವಲ ವ್ಯಕ್ತಿತ್ವ ಹರಣ ಮಾಡಲಾಗುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗಾಗುವುದಿಲ್ಲ. ನೀವೇ ಯೋಚಿಸಿ' ಎಂದು ಹೇಳಿದ್ದಾರೆ. 'ನ್ಯಾಯಯುತ ವಿಚಾರಣೆ ನಡೆಯದೇ ಇರುವಾಗ ಯಾವುದೇ ದೇಶದಲ್ಲಿ ತನಿಖಾ ಸಂಸ್ಥೆಯೊಂದು ಈ ರೀತಿಯಾಗಿ ತನ್ನ ಕ್ರಮಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆಯೇ? ಇದು ನಾಚಿಕೆಗೇಡಿನ ಸಂಗತಿ' ಎಂದು ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತೀಶ್‌ ಜಾರಕಿಹೊಳಿ ಮನೆಯೊಳಗೆ ಸಿಕ್ಕಿದ್ದೇನು?

ಸತೀಶ್ ಜಾರಕಿಹೊಳಿ ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ನಿವಾಸದಲ್ಲಿ 1.2 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರೊಂದಿಗೆ ದಾಳಿಯಲ್ಲಿ ಒಟ್ಟು 3 ಕೋಟಿ ರೂ. ಹಣ, ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿದೆ. ಸತೀಶ್ ಜಾರಕಿಹೊಳಿ ಅವರ ಗೋಕಾಕ್ ನಿವಾಸದಲ್ಲಿ ಸಿಕ್ಕ ಹಣ ವಶಕ್ಕೆ ಪಡೆಯಲು ಅಧಿಕಾರಿಗಳು ಬೊಲೇರೋ ವಾಹನದಲ್ಲಿ ಎರಡು ಟ್ರಂಕ್ ಕೂಡ ತಂದಿದ್ದಾರೆ. ಸಚಿವರ ಸಿಎ ಪ್ರದೀಪ್ ಕುಮಾರ್ ಇಂಡಿ, ಸೈದಪ್ಪ ಗದಾಡಿ ಅವರನ್ನು ಕರೆಸಿಕೊಂಡು ಮಾಹಿತಿಯನ್ನೂ ಪಡೆದಿದ್ದಾರೆ ಎನ್ನಲಾಗಿದೆ.