Gadag News: ಗದಗದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ; ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಕಳಚಿಬಿದ್ದು 20ಕ್ಕೂ ಹೆಚ್ಚು ಮಂದಿಗೆ ಗಾಯ
ಗದಗ ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಏಕಾಏಕಿ ಕಳಚಿ ಬಿದ್ದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ. ಮಕ್ಕಳು, ಮಹಿಳೆಯರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಕುಸಿದಿರುವುದು. -
ಗದಗ: ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ ಸಂಭವಿಸಿದೆ. ಡ್ಯಾನ್ಸಿಂಗ್ ಫ್ಲೈ ಜೋಕಾಲಿಯ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಸದ್ಯ ಗಾಯಾಳುಗಳನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಡ್ಯಾನ್ಸಿಂಗ್ ಫ್ಲೈ ಜೋಕಾಲಿ ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಜೋಕಾಲಿಯಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ.
IPL Betting Racket: ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬುಕ್ಕಿ ಬಂಧನ
ಮಕ್ಕಳು, ಮಹಿಳೆಯರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ತುಂಬಾ ಭಯಾನಕವಾಗಿತ್ತು. ಕೆಲವರು ರಕ್ತದ ಗಾಯಗಳೊಂದಿಗೆ ನರಳುತ್ತಿದ್ದರು. ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ತರಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಈ ಘಟನೆಗೆ ತೋಂಟದಾರ್ಯ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.