ಭಾರತೀಯ ನೌಕಾಪಡೆಯ ಸಾಹಸ: ಕಡಲ್ಗಳ್ಳರ ವಶದಲ್ಲಿದ್ದ ಇರಾನಿನ ಹಡಗು, 20 ಸಿಬ್ಬಂದಿ ರಕ್ಷಣೆ
ಅರೇಬಿಯನ್ ಸಮುದ್ರದಲ್ಲಿ ಸೋಮಾಲಿ ಕಡಲ್ಗಳ್ಳರ ವಿರುದ್ಧ ಮತ್ತೊಂದು ಭರ್ಜರಿ ಯಶಸ್ಸು ಗಳಿಸಿರುವ ಭಾರತೀಯ ನೌಕಾಪಡೆಯು, ಅಪಹರಣಕ್ಕೊಳಗಾಗಿದ್ದ ಇರಾನಿನ ಮೀನುಗಾರಿಕಾ ಹಡಗು ಮತ್ತು ಅದರಲ್ಲಿದ್ದ 20 ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಿದೆ. ಮುಂಬೈನಿಂದ ಪಶ್ಚಿಮಕ್ಕೆ ಸುಮಾರು 3,000 ಕಿಲೋಮೀಟರ್ ದೂರದಲ್ಲಿರುವ ಅರೇಬಿಯನ್ ಸಮುದ್ರದ ಆಳದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಸಂಗ್ರಹ ಚಿತ್ರ -
ಮುಂಬೈ: ಅರೇಬಿಯನ್ ಸಮುದ್ರದಲ್ಲಿ ಸೋಮಾಲಿ ಕಡಲ್ಗಳ್ಳರ ವಿರುದ್ಧ ಮತ್ತೊಂದು ಭರ್ಜರಿ ಯಶಸ್ಸುಗಳಿಸಿರುವ ಭಾರತೀಯ ನೌಕಾಪಡೆಯು, (Indian Navy) ಅಪಹರಣಕ್ಕೊಳಗಾಗಿದ್ದ ಇರಾನಿನ ಮೀನುಗಾರಿಕಾ ಹಡಗು ( Iranian Fishing Vessel ) ಮತ್ತು ಅದರಲ್ಲಿದ್ದ 20 ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಿದೆ. ಅಜಿನಿ ಎಂದು ಗುರುತಿಸಲಾದ ಈ ಹಡಗನ್ನು ಅಕ್ಟೋಬರ್ 29 ರಂದು ಸೊಮಾಲಿಯಾದ ಈಶಾನ್ಯ ಕರಾವಳಿಯಲ್ಲಿ, ಬಂದರ್ ಬೇಲಾ ಮತ್ತು ಹಫುನ್ ಕರಾವಳಿ ಪಟ್ಟಣಗಳ ನಡುವೆ ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡರು.
ಮುಂಬೈನಿಂದ ಪಶ್ಚಿಮಕ್ಕೆ ಸುಮಾರು 3,000 ಕಿಲೋಮೀಟರ್ ದೂರದಲ್ಲಿರುವ ಅರೇಬಿಯನ್ ಸಮುದ್ರದ ಆಳದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ ಐಎನ್ಎಸ್ ಕೋಲ್ಕತ್ತಾ (INS Kolkata) ಈ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು. ಇದಕ್ಕೆ ಪೂರಕವಾಗಿ ಭಾರತೀಯ ವಾಯುಪಡೆಯ (IAF) ಸಿ-17 ವಿಮಾನವು ನೌಕಾಪಡೆಯ ವಿಶೇಷ ಕಮಾಂಡೋಗಳನ್ನು (ಮಾರ್ಕೋಸ್) ನಿಖರವಾಗಿ ಸಾಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದೆ.
ಭಾರತೀಯ ಸಶಸ್ತ್ರ ಪಡೆಗಳ ತೀವ್ರ ಒತ್ತಡಕ್ಕೆ ಮಣಿದ ಕಡಲ್ಗಳ್ಳರು ಹಡಗನ್ನು ಬಿಟ್ಟು ಶರಣಾಗಿದ್ದಾರೆ. ಹಡಗಿನಲ್ಲಿದ್ದ ಎಲ್ಲಾ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಈ ಅತ್ಯುತ್ತಮ ಸಮನ್ವಯ ಹಾಗೂ ಧೈರ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಯಾವುದೇ ಕಡಲ ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ಕಡಲ್ಗಳ್ಳತನವನ್ನು ತಡೆಗಟ್ಟಲು ಭಾರತೀಯ ಸಶಸ್ತ್ರ ಪಡೆಗಳು ಸದಾ ಸನ್ನದ್ಧವಾಗಿವೆ ಎಂಬುದನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಸೋಮಾಲಿ ಕಡಲ್ಗಳ್ಳರು ಈ ಇರಾನಿನ ಮೀನುಗಾರಿಕಾ ಹಡಗನ್ನು ಅಪಹರಿಸಲು ಮುಖ್ಯ ಕಾರಣ ಅದನ್ನು 'ಮದರ್ ಶಿಪ್' ಆಗಿ ಬಳಸಿಕೊಳ್ಳಲು ಎಂದು ತಿಳಿದು ಬಂದಿದೆ. ಕಡಲ್ಗಳ್ಳರ ಬಳಿ ಇರುವ ಸಣ್ಣ ಸ್ಪೀಡ್ಬೋಟ್ಗಳು (ವೇಗದ ದೋಣಿಗಳು) ಸಮುದ್ರದ ಆಳದವರೆಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಇಂತಹ ಮಧ್ಯಮ ಗಾತ್ರದ ಮೀನುಗಾರಿಕಾ ಹಡಗುಗಳನ್ನು ಅಪಹರಿಸಿ, ಅವುಗಳ ಮೂಲಕ ಅಂತರರಾಷ್ಟ್ರೀಯ ಸರಕು ಸಾಗಣೆ ಮತ್ತು ತೈಲ ಹಡಗುಗಳು ಚಲಿಸುವ ಪ್ರಮುಖ ಮಾರ್ಗಗಳತ್ತ ಸಾಗುತ್ತಾರೆ. 'ಅಜಿನಿ' ಹಡಗು ಕರಾವಳಿಗೆ ಹತ್ತಿರವಾಗಿ ಮೀನುಗಾರಿಕೆ ನಡೆಸುತ್ತಿತ್ತು. ಹಡಗಿನಲ್ಲಿದ್ದ ಕರಾವಳಿ ಭದ್ರತಾ ಸಿಬ್ಬಂದಿಗಿಂತ ಕಡಲ್ಗಳ್ಳರ ಸಂಖ್ಯೆ ಹೆಚ್ಚಾಗಿದ್ದರಿಂದ, ಅವರು ಸುಲಭವಾಗಿ ಹಡಗನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.