Hasanamba Utsava 2025: ಹಾಸನಾಂಬ ಉತ್ಸವದಲ್ಲಿ ಕೆಂಡ ಹಾಯ್ದು ಗಮನ ಸೆಳೆದ ಡಿಸಿ ಲತಾಕುಮಾರಿ
Hasanamba temple: ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿದೆ. ಇಂದು, ಅಕ್ಟೋಬರ್ 23ರ ಮಧ್ಯಾಹ್ನ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಕಳೆದ 13 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

-

ಹಾಸನ, ಅ.23: ಹಾಸನಾಂಬ ಉತ್ಸವದ (Hasanamba Utsava 2025) ಸಮಾರೋಪದಲ್ಲಿ ಗುರುವಾರ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಭಕ್ತಿಯಿಂದ ಕೆಂಡ ಹಾಯ್ದು ಗಮನ ಸೆಳೆದರು. ಕೆಂಡೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ, ಕೆಂಡ ಹಾಯ್ದು ಭಕ್ತಿಯನ್ನು ಮೆರೆದರು. ಈ ವೇಳೆ ಭಕ್ತರ ಜತೆಗೆ ಡಿಸಿ ಲತಾಕುಮಾರಿ ಕೂಡ ಕೆಂಡ ಹಾಯ್ದಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿ ಲತಾಕುಮಾರಿ ಅವರು, ನನಗೂ ಕೂಡ ಕೆಂಡ ಹಾಯಬೇಕು ಎಂದು ಮನಸ್ಸಾಯಿತು. ನಾನು ಹಿಂದೆಂದೂ ಕೆಂಡ ಹಾಯ್ದಿರಲಿಲ್ಲ. ಈ ವರ್ಷದ ಹಾಸನಾಂಬೆ ಉತ್ಸವ ಕೊನೆಯಾಗಿದೆ. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಲಿದೆ ಎಂದು ಹೇಳಿದರು.
ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿದೆ. ಇಂದು, ಅಕ್ಟೋಬರ್ 23ರ ಮಧ್ಯಾಹ್ನ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಕಳೆದ 13 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದು, ದೇಗುಲದ ಆದಾಯ 25 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಹಾಸನಾಂಬೆ ದರ್ಶನ ಮುಕ್ತಾಯ
ಸಚಿವ ಕೃಷ್ಣಭೈರೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 2025 ನೇ ವರ್ಷದ ಹಾಸನಾಂಬೆ ದರ್ಶನ ಮುಕ್ತಾಯ ಆಗಿದೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದಿದ್ದು, ಉಳಿದಂತೆ ಸ್ಥಳೀಯರಿಗೆ ರಾತ್ರಿ ಕೂಡ ದರ್ಶನ ಆಗಿದೆ. ಶಾಸ್ತ್ರದ ಪ್ರಕಾರ ಇಂದು ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ. ಎಲ್ಲ ಸಹಕಾರದಿಂದ, ಶಾಸಕರು, ಸಂಸದರ ಸಹಕಾರ ಹಾಗೂ ಜಿಲ್ಲಾಡಳಿತ ಸಹಕಾರದಿಂದ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ನಡೆದಿದೆ. ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸನಾಂಬೆ ಉತ್ಸವ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದ ಸಚಿವರು, ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಅತ್ಯಂತ ಯಶಸ್ವಿಯಾಗಿ ದರ್ಶನ ನಡೆದಿದೆ. ಸಾಮಾನ್ಯ ಜನರಿಗೆ ನೂಕು ನುಗ್ಗಲು ಇಲ್ಲದೆ ಸರಳವಾಗಿ ಭಕ್ತರ ದರ್ಶನ ಆಗಿದೆ. ಇದು ನಮಗೆ ಅತೀವ ಸಂತೋಷ ನೀಡಿದೆ. ಎಲ್ಲಾ ಜನರು ನಗುನಗುತ್ತಾ ದರ್ಶನ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಬಂದಿದ್ದಾರೆ. ಹಾಸನದ ಕೀರ್ತಿ ಎಲ್ಲೆಡೆ ಪ್ರಜ್ಚಲಿಸಿದೆ ಎಂದು ಅವರು ತಿಳಿಸಿದರು.
ಈ ವರ್ಷ 26,13,000 ಭಕ್ತರು ದರ್ಶನ ಮಾಡಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದಿಂದ 2,18,20,000 ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕಿಂದ ಆದಾಯ ಕೂಡ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.