ಕ್ರಷರ್ ಮಾಲೀಕರಿಂದ ಹಣ ಸುಲಿಗೆ; ಹಾಸನ ಜಿಲ್ಲಾಧಿಕಾರಿ, ಸಚಿವ ಶಿವಲಿಂಗೇಗೌಡ ವಿರುದ್ಧ ಹೆಚ್.ಡಿ.ಕೆ ಗಂಭೀರ ಆರೋಪ
ಕಲ್ಲು ಗಣಿಗಾರಿಕೆ (ಕ್ರಷರ್) ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ (ಅನ್ಯ ಸಂಕ್ರಮಣ) ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕೂಡ ಶಾಮೀಲಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಂಗ್ರಹ ಚಿತ್ರ -
ಹಾಸನ: ಕಲ್ಲು ಗಣಿಗಾರಿಕೆ (ಕ್ರಷರ್) ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ (ಅನ್ಯ ಸಂಕ್ರಮಣ) ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ (Haasan D.C) ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ (Minister Shivalinge Gowda) ಕೂಡ ಶಾಮೀಲಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಗಂಭೀರ ಆರೋಪ ಮಾಡಿದ್ದಾರೆ. ಹಾಸನಾಂಬೆಯ ದರ್ಶನ ಪಡೆದ ನಂತರ ಶಾಸಕ ಸ್ವರೂಪ ಪ್ರಕಾಶ್ ಅವರ ಮನೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಮಧ್ಯವರ್ತಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯೇ ನೇರವಾಗಿ ಕ್ರಷರ್ ಮಾಲೀಕರು ಹಾಗೂ ವಸತಿ ಬಡಾವಣೆಗಳ ಮಲಿಕರಿಂದ ಹಣ ಸುಲಿಗೆ ಮಾಡುತ್ತಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಎಂಬ ವ್ಯಕ್ತಿ ಹಣವನ್ನು ಸುಲಿಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕೊಡುತ್ತಿದ್ದಾರೆ ಎನ್ನಲಾದ ಅಂಶವು ಆ ವ್ಯಕ್ತಿಯ ವಾಟ್ಸಾಪ್ ಚಾಟ್ ಗಳ ಮೂಲಕ ಬಯಲಿಗೆ ಬಂದಿದೆ ಎಂದು ಸಚಿವರು ಹೇಳಿದರು. ಅಲ್ಲದೆ ಈ ಸಂದರ್ಭದಲ್ಲಿ ಶಶಿಕಿರಣ್ ಅವರ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೊಡ್ಡ ಮತದ ಹಣವನ್ನು ಕೊಟ್ಟು ಹಾಸನ ಜಿಲ್ಲಾಧಿಕಾರಿಯಾಗಿಯೇ ಅವರು ಮುಂದುವರೆದಿದ್ದಾರೆ ಎಂಬ ಬಗ್ಗೆಯೂ ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಕೂಡ ಶಾಮೀಲಾಗಿದ್ದಾರೆ ಆಗಿದ್ದಾರೆ ಎಂದು ಸಚಿವರು ದೂರಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಹಾಸನ ಜಿಲ್ಲಾಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಾಟ್ಸಾಪ್ ಚಾಟ್ ದಾಖಲೆಗಳನ್ನು ಪ್ರಾಮಾಣಿಕ ಅಧಿಕಾರಿಯೊಬ್ಬರು ನನಗೆ ನೀಡಿದ್ದಾರೆ. ಶಶಿಕಿರಣ್ ಎಂಬ ಬ್ರೋಕರ್ ಮೂಲಕ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂ. ಲಂಚದ ಚೌಕಾಸಿ ನಡೆಯುತ್ತಿದ್ದು, 60 ಲಕ್ಷ ರೂ. ಲಂಚದಲ್ಲಿ 50 ಲಕ್ಷ ರೂ. ಡಿಸಿಗೆ ಹಾಗೂ ಉಳಿದ ಹಣವನ್ನು ಡಿಸಿ ಮೇಡಂ ಆಪ್ತ ಸಹಾಯಕಿ ಸಹನಾ, ವಾಹನ ಚಾಲಕ, ಗನ್ ಮ್ಯಾನ್ ಮತ್ತು ಇತರ ಸಿಬ್ಬಂದಿಗೆ ಹಂಚಿಕೆಯಾಗುತ್ತಿದೆ. ಹಾಗೆಯೇ ಹಾಸನದ ಎಸಿ ಜಗದೀಶ್ ಅವರು 22 ಲಕ್ಷ ರೂ. ತಹಶೀಲ್ದಾರ್ ಗೀತಾ ಅವರು 13 ಲಕ್ಷ ಲಂಚ ಪಡೆದಿರುವ ಉಲ್ಲೇಖ ವಾಟ್ಸಾಪ್ ಚಾಟ್ ನಲ್ಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಮುಖ್ಯವಾಗಿ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡದಂತೆ ತಡೆಯಲು ಸಚಿವ ಶಿವಲಿಂಗೇಗೌಡರಿಗೆ ತಹಶೀಲ್ದಾರ್ ಸಂತೋಷ್ ಮೂಲಕ 75 ಲಕ್ಷ ರೂ. ನೀಡಲಾಗಿದೆ ಎಂಬ ಆಘಾತಕಾರಿ ವಿಷಯ ಕೂಡ ವಾಟ್ಸಾಪ್ ಚಾಟ್ ನಲ್ಲಿ ಬಹಿರಂಗವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಡಿಸಿ ಮನೆಯ ಪೊಲೀಸ್ ರೂಮ್ ನಲ್ಲಿಯೇ ಲಂಚದ ಹಣ
ಲಂಚದ ಹಣವನ್ನು ಸಿಸಿಟಿವಿ ಕಣ್ಣುತಪ್ಪಿಸಿ ಜಿಲ್ಲಾಧಿಕಾರಿ ನಿವಾಸದ ಗೇಟ್ ಬಳಿ ಇರುವ ಪೊಲೀಸ್ ರೂಮ್ ನಲ್ಲಿ ಇಡುವಂತೆ ವಾಟ್ಸಾಪ್ ಸಂದೇಶದಲ್ಲಿ ಸೂಚಿಸಲಾಗಿದೆ. ಆ ನಂತರ ಹಣ ಯಾರಿಗೆಲ್ಲ ತಲುಪಬೇಕೋ ಅವರಿಗೆಲ್ಲ ಮುಟ್ಟಿದೆ. ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಎಂದರೆ, ರೈತರ ಜಮೀನು ಕಡತಗಳಿಗೆ ಅವರ ಒಡವೆಗಳನ್ನು ಮಾರಿ 50 ಲಕ್ಷ ಲಂಚ ಕೊಡುವಂತಹ ದಾರುಣ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಟ್ರ್ಯಾಪ್ ಆಗಿ ಸಸ್ಪೆಂಡ್ ಆಗಿದ್ದ ಅಧಿಕಾರಿಯೇ ಮತ್ತೆ ಜಿಲ್ಲೆಗೆ ಬಂದು ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಸಚಿವರು ಹೇಳಿದರು.
ಯಾರೇ ಸರಕಾರಿ ನೌಕರರು 10 ರೂ. ಲಂಚ ಕೇಳಿದರೂ ತಮಗೆ ಕರೆ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಇಲ್ಲಿ ಇಡೀ ಜಿಲ್ಲಾಡಳಿತವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ಹೇಳಿ ಮುಖ್ಯಮಂತ್ರಿಗಳೇ, ಲಂಚ ಕೇಳುವ ಇಂತಹ ಅಧಿಕಾರಿಗಳ ವಿರುದ್ಧ ಯಾರಿಗೆ ದೂರು ಕೊಡಬೇಕು? ಯಾವ ಮೊಬೈಲ್ ನಂಬರ್ ಗೆ ಕರೆ ಮಾಡಬೇಕು ಎಂಬುದನ್ನು ಹೇಳಬೇಕು? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು. ತಕ್ಷಣವೇ ವಾಟ್ಸಾಪ್ ಚಾಟ್ ನಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಅಧಿಕಾರಿಗಳ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿದ ಕೇಂದ್ರ ಸಚಿವರು; ಯಾವುದೇ ಕಾರಣಕ್ಕೂ ಇಂತಹ ಭ್ರಷ್ಟ ಅಧಿಕಾರಿಗಳನ್ನು ಬಿಡಬಾರದು ಎಂದು ಅಗ್ರಹಿಸಿದರು.
ನಾನು ಈಗಷ್ಟೇ ತಾಯಿ ಹಾಸನಾಂಬೆಯ ದರ್ಶನ ಪಡೆದುಕೊಂಡು ಬಂದೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡುವುದು ಬೇಡ ಎಂದು ಭಾವಿಸಿದ್ದೆ. ಆದರೆ ಹೇಳಲೇಬೇಕಾದ ವಿಚಾರ. ಜಿಲ್ಲಾಡಳಿತ ಯಾವ ರೀತಿಯಲ್ಲಿ ಲಂಚಾವತಾರದಲ್ಲಿ ಮುಳುಗಿದೆ ಎಂಬುದನ್ನು ಈ ವಾಟ್ಸಪ್ ಚಾಟ್ ಹೇಳುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಹಾಸನಾಂಬೆ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ. ಹಾಸನಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಗಳು, ತಮ್ಮ ಕಾರ್ಯಕ್ರಮಗಳನ್ನು ಕೇವಲ ಪ್ರಚಾರದ ಘೋಷಣೆಗಳಿಗೆ ಮಾತ್ರ ಸೀಮಿತ ಮಾಡದೆ, ಜನರ ಬದುಕಿಗೆ ಒಳ್ಳೆಯದು ಮಾಡಿ ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಬೇಕು. ದೇಶದಾದ್ಯಂತ ಶೇ.46ರಷ್ಟು ಬಿತ್ತನೆ ವಿಫಲವಾಗಿದ್ದು, ರಾಜ್ಯದಲ್ಲಿ ಬರಗಾಲದಿಂದ ರೈತರ ಬೆಳೆಗಳು ಒಣಗುತ್ತಿದ್ದರೂ ಜಲಾಶಯಗಳಿಂದ ನೀರು ಹರಿಸುವಲ್ಲಿ ಸರ್ಕಾರ ಎಡವಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಒದಗಿಸುವಲ್ಲಿ ವಿಮಾ ಕಂಪನಿಗಳು ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಸಚಿವರು ಹೇಳಿದರು.
ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಹೈನುಗಾರಿಕೆ ಸಂಕಷ್ಟ
ರಾಜ್ಯ ಸರ್ಕಾರ ನಂದಿನಿ ಹಾಲಿನ ದರ, ತುಪ್ಪ, ಬೆಣ್ಣೆ, ಚೀಸ್, ಪನ್ನೀರ್ ಬೆಲೆಯನ್ನು ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರು ನಂದಿನಿ ಬಿಟ್ಟು ಖಾಸಗಿಯವರ ಬಳಿ ಹಾಲು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಮಳೆಯಿಲ್ಲದೆ ಜೋಳದ ಕಡ್ಡಿ ಬೆಲೆ 3800-4000 ರೂ. ಕ್ಕೆ ಏರಿಕೆಯಾಗಿದ್ದು, ಸರ್ಕಾರ ಹೆಚ್ಚಿಸಿದ 8 ರೂ. ರೈತರ ಪಶು ಆಹಾರದ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಅನ್ನಭಾಗ್ಯದ ಅಕ್ಕಿ ಕೇಂದ್ರದ್ದು, ಗ್ಯಾರಂಟಿ ಯೋಜನೆಗಳ ವೈಫಲ್ಯ:
ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 100 ರೂ. ದಾಟಿದ್ದು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಪುಕ್ಕಟೆ ಅಕ್ಕಿಯಿಂದಾಗಿ ರಾಜ್ಯ ಸರ್ಕಾರ ಉಸಿರಾಡುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿ, ಇದೀಗ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನೇ ತಾವು ನೀಡುತ್ತಿರುವುದಾಗಿ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ನೀಡದೆ 5000 ರೂ. ಕೋಟಿಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ ಎಂದು ಸಚಿವರು ದೂರಿದರು. ಮುಖ್ಯಮಂತ್ರಿಗಳು ಬಡ ಕೂಲಿಕಾರ್ಮಿಕ ಮಹಿಳೆಯರ ಬಳಿ ಹೋಗುವ ಬದಲು ಕೃಷ್ಣಾ ಕಚೇರಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗ ಆಗುವುದಿಲ್ಲ ಎಂದು ಸಚಿವರು ಹರಿಹಾಯ್ದಿದ್ದಾರೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ ದರ ಏರಿಕೆ ಜನರಿಗೆ ಹೊರೆ:
ಕಳೆದ ವರ್ಷ ಶಕ್ತಿ ಯೋಜನೆ ತಂದಾಗ ನಿರ್ವಹಣೆ ನೆಪವೊಡ್ಡಿ ಸಾರಿಗೆ ದರವನ್ನು ಶೇ.33ರಷ್ಟು ಏರಿಕೆ ಮಾಡಿದ್ದ ಸರ್ಕಾರ, ಈಗ ಡೀಸೆಲ್ ದರ ಏರಿಕೆಯಾಗಿದೆ ಎಂಬ ಕುಂಟುನೆಪ ಹೇಳಿ ಮತ್ತೆ ಶೇ.33ರಿಂದ 44ರಷ್ಟು ದರ ಹೆಚ್ಚಳ ಮಾಡಿದೆ. ಸಾರಿಗೆ ನಿಗಮಗಳು 10,000 ಕೋಟಿ ಸಾಲದ ಸುಳಿಯಲ್ಲಿದ್ದು, ಇದರ ಹೊರೆಯನ್ನು ಪ್ರತಿದಿನ ಪ್ರಯಾಣಿಸುವ ರೈತರು, ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಗಾರ್ಮೆಂಟ್ಸ್ ನೌಕರರ ಮೇಲೆ ಹೇರಲಾಗುತ್ತಿದೆ. ಕಂದಾಯ ಹಾಗೂ ಅಬಕಾರಿ ಇಲಾಖೆಯಲ್ಲಿ 40,000 ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಿ ಜನರ ರಕ್ತ ಹೀರಲಾಗುತ್ತಿದೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಶಾಸಕ ಸ್ವರೂಪ ಪ್ರಕಾಶ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವರು ಹಿರಿಯ ಮುಖಂಡರು ಹಾಜರಿದ್ದರು.