ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಹಾಸನದ SDM ಆರ್ಯುವೇದ ಕಾಲೇಜಿನ ವಿದ್ಯಾರ್ಥಿನಿಯರು
Viral News: ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸರೋಗ ವಿಭಾಗದ ಮೂವರು ಸ್ನಾತಕೋತ್ತರ ವಿದ್ಯಾರ್ಥಿನಿಯರು ಆಂಧ್ರಪ್ರದೇಶದ ವಿಜಯವಾಡ ಬಳಿ ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿಗೆ ತುರ್ತು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.
ಸಂಗ್ರಹ ಚಿತ್ರ -
ಹಾಸನ: ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸರೋಗ ವಿಭಾಗದ ಮೂವರು ಸ್ನಾತಕೋತ್ತರ ವಿದ್ಯಾರ್ಥಿನಿಯರು ಆಂಧ್ರಪ್ರದೇಶದ ವಿಜಯವಾಡ ಬಳಿ ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿಗೆ ತುರ್ತು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.
ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಹಾಸನದಿಂದ ವಾರಣಾಸಿಗೆ ಡಾ. ರಶ್ಮಿ ಬಿಲಗಿ, ಡಾ. ಶಾಹಿನ್ ಎಂ. ಮತ್ತು ಡಾ. ಲತಾಶ್ರೀ ಎನ್ ಎಂಬ ಪಿಜಿ ವೈದ್ಯರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಾಶಯದಲ್ಲಿನ ನೀರು ಹೊರಬರುತ್ತಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗದ ಕಾರಣ ಮೂವರು ವೈದ್ಯರು ಆಕೆಗೆ ಸಹಾಯ ಮಾಡಲು ಮುಂದಾದರು.
ಹೆರಿಗೆಯ ಸಮಯದಲ್ಲಿ ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿರುವುದನ್ನು ವೈದ್ಯರು ಕಂಡುಕೊಂಡರು. ಹೆರಿಗೆಗೂ ಮುನ್ನ ಮಗುವಿನ ತಲೆಯ ಮೇಲಿದ್ದ ಬಳ್ಳಿಯನ್ನು ಎಚ್ಚರಿಕೆಯಿಂದ ಸಡಿಲಗೊಳಿಸಲಾಗಿತ್ತು. ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂದು ವೈದ್ಯರು ಹೇಳಿದರು.
ಪ್ರತ್ಯೇಕ ಘಟನೆಯಲ್ಲಿ, ಈ ಹಿಂದೆ ಮಾಡಿಸಿಕೊಂಡಿದ್ದ ಸಿ-ಸೆಕ್ಷನ್(ಸಿಜೆರಿಯನ್) ಹೆರಿಗೆಯಿಂದ ಹೆದರಿದ್ದ ಗರ್ಭಿಣಿಯೋರ್ವಳು ಎರಡನೇ ಹೆರಿಗೆ ಸಂದರ್ಭ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ತಿರುಪ್ಪುರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಸಾಮಾಜಿಕ ಜಾಲತಾಣ ಯೂಟ್ಯೂಬ್ನಲ್ಲಿನ ವಿಡಿಯೋ ವೀಕ್ಷಿಸಿ ಎರಡನೇ ಹೆರಿಗೆಯನ್ನು ಮನೆಯಲ್ಲೇ ಮಾಡಿಸಿಕೊಂಡ ಪರಿಣಾಮ 32 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ.
ಮೊದಲ ಹೆರಿಗೆಯಲ್ಲಿ ಸಿ ಸೆಕ್ಷನ್ ಡೆಲಿವರಿ ಆಗಿತ್ತು. ಅದರಿಂದ ಆಕೆ ಹೆದರಿದ್ದಳು. ಈ ಬಾರಿ ಭಯಬಿದ್ದು ಆಸ್ಪತ್ರೆಗೆ ಹೋಗಲು ನಿರಾಕರಿಸಿದಳು ಎಂದು ಮೃತಳ ಕುಟುಂಬಸ್ಥರು ಹೇಳಿದ್ದಾರೆ.
ಜೂನ್ 24 ರಂದು ಪುಂಜೈ ಥಲವೈಪಳಯಂ ಗ್ರಾಮದ ಮನೆಯಲ್ಲೇ ಎರಡನೇ ಬಾರಿಗೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ಬಳಿಕ ಹೆಚ್ಚಿನ ರಕ್ತಸ್ರಾವವಾಗಿತ್ತು. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಪೆರುಂದುರೈ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಗಿತ್ತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಯಿಮತ್ತೂರಿನಲ್ಲಿ ರುವ ರಾಯಲ್ ಕೇರ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಕೆಯನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದ್ರೆ ಭಾನುವಾರ (ಜೂ. 28) ರಂದು ಚಿಕಿತ್ಸೆ ಫಲಕಾರಿಯಾಗದೇ 32 ವರ್ಷದ ಶಶಿಕಲಾ ಮೃತಪಟ್ಟಿದ್ದಾಳೆ.