Google AI Hub: ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಗೂಗಲ್ ಹೂಡಿಕೆ ಕೈತಪ್ಪಿದೆ: ಬೊಮ್ಮಾಯಿ
Basavaraj Bommai: ಪ್ರತಿಷ್ಠಿತ ಸಂಸ್ಥೆ ಅಮೆರಿಕದ ಹೊರಗಡೆ 1.23 ಲಕ್ಷ ಕೋಟಿ ಬಂಡವಾಳ ಹೂಡುವ ಸಂಸ್ಥೆ ರಾಜ್ಯಕ್ಕೆ ಬರಬೇಕಿತ್ತು, ಅದು ಬಾರದಿರುವುದು ದುರ್ದೈವದ ಸಂಗತಿ. ಕಾರಣ ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಎಲ್ಲದಕ್ಕೂ ದರ ಪಟ್ಟಿ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

-

ಹಾವೇರಿ: ರಾಜ್ಯ ಸರ್ಕಾರದ (State Congress Government) ಬೇಜವಾಬ್ದಾರಿ ತನದಿಂದ ಪ್ರತಿಷ್ಠಿತ ಗೂಗಲ್ ಕಂಪನಿ (Google AI Hub) ನಮ್ಮ ರಾಜ್ಯಬಿಟ್ಟು ಆಂಧ್ರಪ್ರದೇಶಕ್ಕೆ ಹೋಗುವಂತಾಗಿದೆ. ಸರ್ಕಾರ ಪ್ರಗತಿಪರವಾಗಿದ್ದರೆ ನಮ್ಮ ರಾಜ್ಯ ಬಿಟ್ಟು ಯೋಜನೆಗಳು ಹೋಗುವುದಿಲ್ಲ. ಈಗಿನ ಸರ್ಕಾರ ನೀವು ಹೋಗುವುದಿದ್ದರೆ ಹೋಗಿ ಅಂತ ಬೇಜವಾಬ್ದಾರಿ ತೋರುತ್ತಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಷ್ಠಿತ ಸಂಸ್ಥೆ ಅಮೆರಿಕದ ಹೊರಗಡೆ 1.23 ಲಕ್ಷ ಕೋಟಿ ಬಂಡವಾಳ ಹೂಡುವ ಸಂಸ್ಥೆ ರಾಜ್ಯಕ್ಕೆ ಬರಬೇಕಿತ್ತು, ಅದು ಬರದಿರುವುದು ದುರ್ದೈವದ ಸಂಗತಿ, ಕಾರಣ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಎಲ್ಲದಕ್ಕೂ ದರ ಪಟ್ಟಿ ಸಿದ್ಧವಾಗಿದೆ. ಮೂಲ ಸೌಕರ್ಯ ಕುಸಿದು ಬಿದ್ದಿದೆ. ಇಲ್ಲಿ ಸಾಮಾಜಿಕವಾಗಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಪ್ರಕರಣ ಹೆಚ್ಚಾಗಿದೆ. ಹೀಗಾಗಿ ಆಂಧ್ರದಲ್ಲಿ ಅಷ್ಟೊಂದು ಮಾನವ ಸಂಪನ್ಮೂಲ ಅವಕಾಶ ಇಲ್ಲದಿದ್ದರೂ ಆ ರಾಜ್ಯಕ್ಕೆ ಗೂಗಲ್ ಹೋಯಿತು ಎಂದಿದ್ದಾರೆ.
ನಾವಿದ್ದಾಗ ಫಾಕ್ಸ್‌ಕಾನ್ ಕಂಪನಿಯನ್ನು ಆಂಧ್ರ ಪ್ರದೇಶ, ತಮಿಳುನಾಡು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ನಾವು ಎಲ್ಲ ರೀತಿಯ ಸೌಕರ್ಯ ಕೊಟ್ಟು ಅದನ್ನು ಉಳಿಸಿಕೊಂಡಿದ್ದೆವು. ಅದು ಸುಮಾರು ಒಂದು ಲಕ್ಷ ಕೋಟಿ ಬಂಡವಾಳ ಹೂಡಿದೆ. ಈಗಾಗಲೇ 30 ಸಾವಿರ ಜನ ಉದ್ಯೋಗ ಪಡೆದಿದ್ದಾರೆ.
ಸರ್ಕಾರ ಪ್ರಗತಿಪರವಾಗಿದ್ದರೆ ನಮ್ಮ ರಾಜ್ಯ ಬಿಟ್ಟು ಯೋಜನೆಗಳು ಹೋಗುವುದಿಲ್ಲ. ಈಗಿನ ಸರ್ಕಾರ ನೀವು ಹೋಗೊದಿದ್ದರೆ ಹೋಗಿ ಅಂತ ಬೇಜವಾಬ್ದಾರಿಯಿಂದ ಮಾತನಾಡುವುದು. ಸಿಎಂ ಹಾಗೂ ಸಚಿವರು ಇದರ ಬಗ್ಗೆ ತಲೆ ಕೆಡಸಿಕೊಳ್ಳದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಸಂಘಕ್ಕೆ ಅಂಕುಶ
ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸರ್ಕಾರ ನಿಷೇಧ ಹೇರಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲ ನಗರ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಯಂ ಸೇವಕರು ಸೇರುತ್ತಿದ್ದಾರೆ. ಇದರಿಂದ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಆಧಾರಿತ ರಾಜಕಾರಣ ಮಾಡುತ್ತಿದೆ. ಅಲ್ಲಿ ಪಿಎಫ್‌ಐ, ಎಸ್‌ಡಿಪಿಐ ಇದೆ. ಅವರು ಕೂಡ ಈ ಥರದ ಚಟುವಟಿಕೆ ಮಾಡುತ್ತಾರೆ. ಕಾನೂನು ವಿರುದ್ಧ ಕೆಲಸ ಮಾಡುತ್ತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದಾಗ ನಾವು ಹತೋಟಿಗೆ ತಂದು ಮುನ್ನೂರು ಜನರನ್ನು ಒಳಗೆ ಹಾಕಿದ್ದೆವು. ಆ ಎಲ್ಲ ಸಮಾಜಘಾತಕ ಶಕ್ತಿಗಳಿಗೆ ರಕ್ಷಣೆ ಕೊಡಲು ಸರ್ಕಾರ ಈ ಕೆಲಸ ಮಾಡುತ್ತಿದೆ ಅದನ್ನು ಮರೆ ಮಾಚಲು ಆರ್‌ಎಸ್‌ಎಸ್ ಮೇಲೆ ದಾಳಿ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಯಾವಾಗಲೂ ಬಗ್ಗಿಲ್ಲ ಇದೆಲ್ಲ ನೋಡಿದರೆ ಮತ್ತೆ ಎಮರ್ಜೆನ್ಸಿ ಬರುತ್ತಿದೆ ಎನಿಸುತ್ತಿದೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಗಿಫ್ಟ್: ಬೆಂಗಳೂರು-ಹುಬ್ಬಳ್ಳಿಗೆ ಸೂಪರ್ ಫಾಸ್ಟ್ ವಿಶೇಷ ರೈಲು
ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು, ಸರ್ಕಾರದ ಬಳಿ ದುಡ್ಡಿಲ್ಲ ಅನ್ನುವ ಬದಲು ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಕಡಿಮೆ ಮಾಡಿ ತಮ್ಮ ಹಣಕಾಸಿನ ದುಸ್ಥಿತಿ ಮುಚ್ಚಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.