B Sriramulu: ಸಿದ್ದರಾಮಯ್ಯ ಸಿಎಂ ಕುರ್ಚಿ ಖಾಲಿಯಾಗುತ್ತೆ-ಇದು 6ನೇ ಗ್ಯಾರಂಟಿ; ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯ
ʼʼಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆಯೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತದೆಯೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆ. ಅದು ಗ್ಯಾರಂಟಿ'ʼ-ಇದು ಶ್ರೀರಾಮುಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪರಿ.

-

ಗದಗ, ಅ. 11: ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ ನಡೆದು ಸಿದ್ದರಾಮಯ್ಯ (CM Siddaramaiah) ಮುಖ್ಯಮಂತ್ರಿ (Chief Minister) ಪಟ್ಟದಿಂದ ಕೆಳಗೆ ಇಳಿಯುತ್ತಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ರಾಜಕೀಯ ಪಡಸಾಲೆಯಲ್ಲಿ ಈ ಕುರಿತಾದ ಗುಸುಗುಸು ಚರ್ಚೆ ನಡೆಯುತ್ತಿದೆ. ಇದೀಗ ಮಾಜಿ ಸಚಿವ, ಬಿಜೆಪಿ ನಾಯಕ ಬಿ. ಶ್ರೀರಾಮುಲು (B Sriramulu) ಕೂಡ ಇದನ್ನೇ ಹೇಳಿದ್ದಾರೆ. ʼʼಕಾಂಗ್ರೆಸ್ ನಾಯಕರೇ ಹೇಳಿದಂತೆ ಮುಂದಿನ ತಿಂಗಳು ಕ್ರಾಂತಿಯಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆʼʼ ಎಂದು ಭವಿಷ್ಯ ನುಡಿದಿದ್ದಾರೆ.
ಗದಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪಟ್ಟ ಅಲುಗಾಡುತ್ತಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Chief minister: ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡಿದ್ದ ನಾಯಕರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್
ಶ್ರೀರಾಮುಲು ಹೇಳಿದ್ದೇನು?
ʼʼಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆಯೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತದೆಯೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತದೆ. ಅದು ಗ್ಯಾರಂಟಿ'ʼ ಎಂದು ಹೇಳಿದ್ದಾರೆ.
ʼʼರಾಜಕಾರಣಿಗಳಿಗೆ ಗೌರವ ಬಹಳ ಮುಖ್ಯ. ಆದರೆ ಮುಖ್ಯಮಂತ್ರಿ ನಮಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ ಎಂದು ಶಾಸಕರು ಹೇಳಿದ್ದಾರೆ. ಜತೆಗೆ ಅನುದಾನವನ್ನೂ ಬಿಡುಗಡೆ ಮಾಡಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯ ಅವರಿಗೆ ಶಾಸಕರ ಮೇಲೆ ಪ್ರೀತಿ ಬಂದಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎನ್ನುವ ಕಾರಣಕ್ಕೆ ಪ್ರೀತಿ ಬಂದಿದೆಯೋ ಗೊತ್ತಿಲ್ಲ. ಒಟ್ಟು ಪ್ರೀತಿ ಮಾತ್ರ ಬಂದಿದೆʼ' ಎಂದು ವ್ಯಂಗ್ಯವಾಡಿದ್ದಾರೆ.
ʼʼಅದರ ಭಾಗವಾಗಿ ದಿಢೀರ್ ಔತಣ ಕೂಟ ಏರ್ಪಡಿಸಿದ್ದಾರೆ. ಅ. 13ರಂದು ಆಯೋಜಿಸಿರುವ ಔತಣಕೂಟಕ್ಕೆ ಬರಬೇಕು ಎಂದು ಸಿಎಂ ಆದೇಶ ಹೊರಡಿಸಿದ್ದಾರೆ. ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಸಿಎಂ ಔತಣಕೂಟದಲ್ಲಿ ಇವೆಲ್ಲ ಚರ್ಚೆ ಆಗುವ ಸಾಧ್ಯತೆ ಇದೆ. ಅದೇನೆ ಇರಲಿ ನೂರಕ್ಕೆ ನೂರರಷ್ಟು ಕ್ರಾಂತಿ ಆಗೇ ಆಗುತ್ತದೆ ಎಂಬುದು ಬಿಜೆಪಿ ವಾದ'ʼ ಎಂದು ಹೇಳಿದ್ದಾರೆ.
ʼʼಔತಣಕೂಟಕ್ಕೆ ಕ್ಯಾಬಿನೆಟ್ ಸಚಿವರು ತಪ್ಪಿಸಬಾರದೆಂದು ಆದೇಶ ಹೊರಡಿಸಲಾಗಿದೆ. ಬರಲ್ಲ ಎಂದರೆ ಸಚಿವ ಸಂಪುಟದಿಂದ ತಗೆದು ಹಾಕುತ್ತೇನೆಂದು ಬ್ಲಾಕ್ ಮೇಲ್ ಮಾಡಿದ್ದಾರಂತೆ. ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿಗಳ ಜತೆಗೆ ಈಗ 6ನೇ ಗ್ಯಾರಂಟಿ ಸೇರ್ಪಡೆಯಾಗಿದೆ. ಅದುವೇ ಸಿದ್ದರಾಮಯ್ಯ ಅವರ ಅಧಿಕಾರ ಹೋಗುವುದುʼ' ಎಂದು ಹೇಳಿದ್ದಾರೆ.
ಬಿಹಾರ ಚುನಾವಣೆ ಬಳಿಕ ಸಂಪುಟ ಪುನಾರಚನೆ?
ಹಾವೇರಿ: ಈ ಮಧ್ಯೆ ಸಂಪುಟ ಪುನಾರಚನೆ ಬಗ್ಗೆಯೂ ಮಾತುಕತೆ ಕೇಳಿ ಬರುತ್ತಿದೆ. ಹಲವು ಆಕಾಂಕ್ಷಿಗಳು ತಮಗೂ ಸಚಿವ ಸ್ಥಾನ ಸಿಗಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ. ʼʼಬಿಹಾರ ಚುನಾವಣೆ ಬಳಿಕ ಸಂಪುಟ ಪುನಾರಚನೆಗೆ ಚಿಂತನೆ ನಡೆದಿದೆ. ಕೆಲ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು. ಹೊಸಬರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆʼʼ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ಶನಿವಾರ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಅವರು ಮಾತನಾಡಿದರು. ʼʼಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದುʼʼ ಎಂದು ಹೇಳಿದ್ದಾರೆ. ʼʼಕಳೆದ 43 ವರ್ಷಗಳಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಸಂಪುಟ ಪುನಾರಚನೆ ವೇಳೆ ನನಗೆ ಅವಕಾಶ ಸಿಗುವ ವಿಶ್ವಾಸವಿದೆʼʼ ಎಂದಿದ್ದಾರೆ.