ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಂಜನೇಯ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಘಟನೆ ಖಂಡಿಸಿ ಶಿಗ್ಗಾವಿಯಲ್ಲಿ ಸ್ವಯಂಪ್ರೇರಿತ ಬಂದ್

ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಪ್ರಮುಖ ಏಳು ವೃತ್ತಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದವು. ಆಟೋಗಳು ಸೇರಿದಂತೆ ಹಲವು ವಾಹನಗಳ ಸಂಚಾರವೂ ಕಡಿಮೆಯಾಗಿತ್ತು. ಬಂದ್‌ಗೆ ಅನುಮತಿ ನಿರಾಕರಿಸಿರುವುದು ಹಾಗೂ ವಿವಿಧ ಸಂಘಟನೆಗಳಿಗೆ ನೋಟಿಸ್ ನೀಡಿರುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾವಿಯಲ್ಲಿ ಸ್ವಯಂಪ್ರೇರಿತ ಬಂದ್

-

Prabhakara R
Prabhakara R Aug 26, 2026 9:08 PM

ಶಿಗ್ಗಾವಿ: ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಖಂಡಿಸಿ ಶಿಗ್ಗಾವಿಯಲ್ಲಿ ಇಂದು ಸ್ವಯಂಪ್ರೇರಿತ ಬಂದ್ (Shiggavi bandh) ನಡೆದಿದೆ. ಘಟನೆಯಿಂದ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಆದರೆ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಬಂದ್‌ಗೆ ಅನುಮತಿ ನೀಡಲಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳ ಕರೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ಏಳು ವೃತ್ತಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದವು. ಆಟೋಗಳು ಸೇರಿದಂತೆ ಹಲವು ವಾಹನಗಳ ಸಂಚಾರವೂ ಕಡಿಮೆಯಾಗಿತ್ತು. ಆದರೆ ಕೆಲ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಹೂವು ಹಾಗೂ ಹಣ್ಣಿನ ಅಂಗಡಿಗಳನ್ನು ತೆರೆದಿದ್ದರು.

ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಮೂಲದ ಮೊಹಮ್ಮದ್ ಎಂಬ ವ್ಯಕ್ತಿಯ ವಿರುದ್ಧ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಕಾನೂನು ಕ್ರಮದ ಕುರಿತು ಪೊಲೀಸರು ಅಧಿಕೃತವಾಗಿ ನೀಡುವ ಮಾಹಿತಿ ಆಧಾರವಾಗಿರಲಿದೆ.

ಬಂದ್‌ಗೆ ಅನುಮತಿ ನಿರಾಕರಿಸಿರುವುದು ಹಾಗೂ ವಿವಿಧ ಸಂಘಟನೆಗಳಿಗೆ ನೋಟಿಸ್ ನೀಡಿರುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧವೂ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂಪರ ಸಂಘಟನೆಗಳ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಶಿಗ್ಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಸೇರಿದಂತೆ ಪೊಲೀಸ್ ಇಲಾಖೆಯ ಕ್ರಮಗಳ ಬಗ್ಗೆ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು ಎನ್ನಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದ ಆರೋಪಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳನ್ನು ದೃಢಪಡಿಸದೆ ಸತ್ಯವೆಂದು ಪರಿಗಣಿಸಬಾರದು. ಪ್ರಕರಣದ ಕುರಿತು ಪೊಲೀಸ್ ಇಲಾಖೆ ನೀಡುವ ಅಧಿಕೃತ ಮಾಹಿತಿ ಅಂತಿಮ ಆಧಾರವಾಗಲಿದೆ.