Monsoon Session: ಮುನಿರತ್ನ ಹಣ ಕೊಟ್ಟರೆ, ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಲು ಸಿದ್ಧ: ಡಿಸಿಎಂ ಡಿಕೆಶಿ
Namma Metro: ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂದು ಈ ನಿಲ್ದಾಣ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ಶಾಸಕ ಮುನಿರತ್ನ ಅವರು ಸದನದಲ್ಲಿ ಪ್ರಶ್ನಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿದ್ದಾರೆ.


ಬೆಂಗಳೂರು: ಶಾಸಕ ಮುನಿರತ್ನ ಅವರು ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪನಿ ಎಂದೇ ಹೆಸರಿಡಲು ಸಿದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ (Monsoon Session) ಮಂಗಳವಾರ ಬಿಜೆಪಿ ಶಾಸಕ ಮುನಿರತ್ನ ಅವರು ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂದು ಈ ನಿಲ್ದಾಣ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನೆ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದು ಪರಿಕಲ್ಪನೆ ಇದೆ. ಕೆಲವು ಸಂಸ್ಥೆಗಳ ಸಿಎಸ್ಆರ್ ನಿಧಿ ಬಳಸಿಕೊಂಡು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಸಂಸ್ಥೆ ಹೆಸರಿಡಲು ಅವಕಾಶ ಮಾಡಿಕೊಡುತ್ತೇವೆ. ಅದರಂತೆ ಇನ್ಫೋಸಿಸ್, ಡೆಲ್ಟಾ ಕಂಪನಿಗಳ ಹೆಸರಿಡಲಾಗಿದೆ. ಈ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನ್ನೆ ಪ್ರಶಂಸೆ ಮಾಡಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಇದ್ದರು. ಇನ್ಫೋಸಿಸ್ ಅವರು 200 ಕೋಟಿ ರೂ. ಕೊಟ್ಟಿದ್ದು, ಮೆಟ್ರೋ ನಿಲ್ದಾಣಕ್ಕೆ ಆ ಸಂಸ್ಥೆ ಹೆಸರು ಇಡಲಾಗಿದೆ. ಡೆಲ್ಟಾ ಅವರು ಕೂಡ ನೀಡಿದ್ದಾರೆ. ಎಲ್ಲಾ ಸರ್ಕಾರಗಳು ಇದನ್ನು ಮಾಡಿಕೊಂಡು ಬಂದಿವೆ. ಪಾಪ, ಮುನಿರತ್ನ ಅವರಿಗೆ ಸೇರಿದ 70-80 ಎಕರೆ ಜಮೀನು ಅಲ್ಲಿದೆ. ಅವರ ಜಮೀನಿನ ಪಕ್ಕ ಅವರಿಗೆ ಮೆಟ್ರೋ ನಿಲ್ದಾಣ ಬೇಕಾಗಿದೆ. ಹೀಗಾಗಿ ಈ ಪ್ರಶ್ನೆ ಎತ್ತಿದ್ದಾರೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಮುನಿರತ್ನ , ಡಿಸಿಎಂ ಶಿವಕುಮಾರ್ ಅವರು ಬಿಲ್ಡರ್‌ಗೆ ಕರೆ ಮಾಡಿ 24 ತಾಸಿನಲ್ಲಿ ಹಣ ಕಟ್ಟುತ್ತೀಯಾ ಇಲ್ಲವಾ ಎಂದು ಎಂಬೆಸಿ ಬಿಲ್ಡರ್ ಸಂಸ್ಥೆಯವರಿಗೆ ಕೇಳಿದರೆ ಸಾಕು. ಅವರು ಹಣ ಕಟ್ಟುತ್ತಾರೆ. ಬೆಂಗಳೂರಿನಲ್ಲಿ ಬಿಲ್ಡರ್‌ಗಳು ಕೇವಲ ಶಿವಕುಮಾರ್ ಅವರ ಮಾತನ್ನಷ್ಟೇ ಕೇಳುತ್ತಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಮನುಷ್ಯನಿಗೆ ಸ್ವಾರ್ಥ ಇರುವುದು ಸಹಜ. ಇದು ತಪ್ಪಲ್ಲ. ನನಗೂ ಇದೆ, ಅವರಿಗೂ ಇದೆ. ಆ ಭಾಗದಲ್ಲಿ ಎಂಬೆಸಿ ಅವರದ್ದು ಸುಮಾರು 250 ಎಕರೆ ಜಮೀನಿದೆ. ಅವರು ಮೆಟ್ರೋ ನಿಲ್ದಾಣಕ್ಕೆ ತಮ್ಮ ಹೆಸರು ಬರಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. 140 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುವ ಮೆಟ್ರೋ ನಿಲ್ದಾಣಕ್ಕೆ 120 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಅದರಲ್ಲಿ ಕೇವಲ 1 ಕೋಟಿ ರೂ. ಮಾತ್ರ ನೀಡಿದ್ದಾರೆ. ಆ ಭಾಗದಲ್ಲಿ ಮುನಿರತ್ನ ಅವರದ್ದು 70-80 ಎಕರೆ ಜಮೀನಿದೆ, ಹೀಗಾಗಿ ಮುನಿರತ್ನ ಹಣ ಕೊಟ್ಟು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಮುನಿರತ್ನ ಅವರ ಹೆಸರೇ ಇಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಈಗಾಗಲೇ ಎಂಬೆಸಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಂಬೆಸಿ ಅವರು 1 ಕೋಟಿ ಕೊಟ್ಟಿದ್ದು, ಬಾಕಿ 119 ಕೋಟಿ ನೀಡಲಿ ಎಂದು ಉಪಮುಖ್ಯಮಂತ್ರಿಗಳು ಅವರು ಧಮ್ಕಿ ಹಾಕಲಿ ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ ಎಂದರು.
ಇದಕ್ಕೆ ತಿರುಗೇಟು ನೀಡಿದ ಶಿವಕುಮಾರ್, ನಾನೇಕೆ ಧಮ್ಕಿ ಹಾಕಲಿ? ಬೇಕಾದರೆ ಒಪ್ಪಂದ ರದ್ದುಗೊಳಿಸೋಣ, ಮುನಿರತ್ನ ಹಣ ಕೊಟ್ಟರೆ ʼಮುನಿರತ್ನ ಅಂಡ್ ಕಂಪನಿʼ ಅಂತಲೇ ಹೆಸರಿಡೋಣ” ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | DK Shivakumar: ಪ್ರಧಾನಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ನನ್ನ ಸ್ವಂತ ಹಣದಿಂದ ಖರೀದಿಸಿದ್ದು: ಡಿಸಿಎಂ ಡಿಕೆಶಿ ಸ್ಪಷ್ಟನೆ
ಈ ಮೆಟ್ರೋ ನಿಲ್ದಾಣದ ಬಗ್ಗೆ ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡರು ನನ್ನ ಜೊತೆ ಚರ್ಚಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಕ್ಷೇತ್ರದ ಬಗ್ಗೆ ಅವರು ಹೇಳಿರುವ ಮಾತನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ಕೃಷ್ಣ ಬೈರೇಗೌಡ ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ” ಎಂದು ತಿರುಗೇಟು ನೀಡಿದರು.