Food poison: ಈರುಳ್ಳಿ ದೋಸೆ ತಿಂದು ಕಾಲೇಜು ಹಾಸ್ಟೆಲ್‌ನ 30 ವಿದ್ಯಾರ್ಥಿಗಳು ಆಸ್ಪತ್ರೆ ಪಾಲು
Kolar news: ತಡರಾತ್ರಿಯಲ್ಲಿ ಈರುಳ್ಳಿ ದೋಸೆ, ಇಡ್ಲಿ ಮತ್ತು ಚಟ್ನಿ ಸೇವಿಸಿದ ನಂತರ ವಿದ್ಯಾರ್ಥಿಗಳು ವಾಂತಿ ಮತ್ತು ಭೇದಿಯಿಂದ ಬಳಲಿದ್ದು, ಅವರನ್ನು ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.


ಕೋಲಾರ: ಕೋಲಾರ (Kolar) ತಾಲೂಕಿನ ಬಸವನತ್ತದ ಬಳಿಯಿರುವ ವಿದ್ಯಾಜ್ಯೋತಿ ಕಾಲೇಜಿನ ಹಾಸ್ಟೆಲ್‌ನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು (College Students) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ವಾಂತಿ, ಭೇದಿಯಿಂದ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫುಡ್ ಪಾಯಿಸನ್ (Food poison) ಆಗಿದೆ ಎಂದು ಶಂಕಿಸಲಾಗಿದೆ.
ತಡರಾತ್ರಿಯಲ್ಲಿ ಈರುಳ್ಳಿ ದೋಸೆ, ಇಡ್ಲಿ ಮತ್ತು ಚಟ್ನಿ ಸೇವಿಸಿದ ನಂತರ ವಿದ್ಯಾರ್ಥಿಗಳು ವಾಂತಿ ಮತ್ತು ಭೇದಿಯಿಂದ ಬಳಲಿದ್ದು, ಅವರನ್ನು ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟು 50 ವಿದ್ಯಾರ್ಥಿಗಳು ರಾತ್ರಿ ಊಟ ಮಾಡಿದ್ದಾರೆ. ಊಟದಲ್ಲಿ ಈರುಳ್ಳಿ ದೋಸೆ, ಇಡ್ಲಿ ಮತ್ತು ಚಟ್ನಿಯನ್ನು ಸೇವಿಸಿದ್ದು, ತಡರಾತ್ರಿಯಿಂದಲೇ ಕೆಲವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತು. ಬೆಳಗಿನ ಜಾವದ ವೇಳೆಗೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೀವ್ರವಾದ ವಾಂತಿ, ಬೇದಿ ಮತ್ತು ಹೊಟ್ಟೆನೋವಿನ ಲಕ್ಷಣಗಳು ಕಂಡುಬಂದವು.
ಕೂಡಲೇ ಹಾಸ್ಟೆಲ್ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿತು. ಜಿಲ್ಲಾಸ್ಪತ್ರೆಯ ವೈದ್ಯರು ವಿದ್ಯಾರ್ಥಿಗಳಿಗೆ ತಕ್ಷಣದ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಈ ಘಟನೆಯು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆಹಾರದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಆಹಾರದ ಗುಣಮಟ್ಟದಿಂದಾಗಿ ವಿದ್ಯಾರ್ಥಿಗಳಿಗೆ ಫುಡ್ಪಾಯಿಸನ್ ಆಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಸದ್ಯ ಎಲ್ಲಾ ವಿದ್ಯಾರ್ಥಿಗಳ ಸ್ಥಿತಿ ಈಗ ಸ್ಥಿರವಾಗಿದ್ದು, ಗಂಭೀರವಾದ ಆರೋಗ್ಯ ಸಮಸ್ಯೆ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಆದರೆ, ಈ ಘಟನೆಯಿಂದ ವಿದ್ಯಾರ್ಥಿಗಳ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಹಲವಾರು ಪೋಷಕರು ಆಸ್ಪತ್ರೆಗೆ ಧಾವಿಸಿ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯು ಈ ಘಟನೆಯ ಕುರಿತು ತನಿಖೆ ಆರಂಭಿಸಿದೆ. ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಕಲುಷಿತಗೊಂಡಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಾಸ್ಟೆಲ್‌ನ ಆಹಾರ ತಯಾರಿಕೆ ಮತ್ತು ಸಂಗ್ರಹಣೆಯ ಪ್ರಕ್ರಿಯೆಯ ಕುರಿತು ಆಹಾರ ಸುರಕ್ಷತಾ ಇಲಾಖೆಯಿಂದ ತಪಾಸಣೆ ನಡೆಯಲಿದೆ.
ವಿದ್ಯಾಜ್ಯೋತಿ ಕಾಲೇಜು ಕೋಲಾರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಈ ಘಟನೆಯ ಬಗ್ಗೆ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದೆ. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.
ಇದನ್ನೂ ಓದಿ: Food Poison: ಮಳವಳ್ಳಿಯಲ್ಲಿ ವಿಷಾಹಾರಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ, ಸಾವಿನ ಸಂಖ್ಯೆ 2ಕ್ಕೆ