Drugs Case: ಡ್ರಗ್ಸ್ ಸಾಗಾಟ ಆರೋಪ; ಕಾಂಗ್ರೆಸ್ ಮುಖಂಡನ ಬಂಧನ
ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ (Drugs Case) ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ (Lingaraj Kanni) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ.


ಕಲಬುರ್ಗಿ: ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ (Lingaraj Kanni) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಅಲ್ಲಿನ ಕಲ್ಯಾಣ ಠಾಣೆ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ. ಎನ್ಡಿಪಿಎಸ್ ಕಾಯ್ದೆ ಅಡಿ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಲಿಂಗರಾಜ್ ಕಣ್ಣಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಪ್ರತ್ಯೇಕ ಘಟನೆಯಲ್ಲಿ, ಇತ್ತೀಚೆಗೆ ತಮ್ಮ ಫ್ಲಾಟ್ನಲ್ಲಿಯೇ ಪ್ರಯೋಗಾಲಯ ನಿರ್ಮಾಣ ಮಾಡಿ ಮೆಫೆಡ್ರೋನ್ ಎಂಡಿ ಡ್ರಗ್ಸ್ ತಯಾರಿಸುತ್ತಿದ್ದ ಇಬ್ಬರು ವಿಜ್ಞಾನ ಶಿಕ್ಷಕರನ್ನು ಎನ್ಸಿಬಿ ಬಂಧಿಸಿದೆ. ಈ ಇಬ್ಬರು ಕಳೆದೆರಡು ತಿಂಗಳಲ್ಲಿ ಸುಮಾರು 12 ಕೋಟಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಬಂಧಿತರಿಂದ 780 ಗ್ರಾಂ ಎಂಡಿ ಡ್ರಗ್ಸ್ ಹಾಗೂ ವಿವಿಧ ರಾಸಾಯನಿಕ ಮತ್ತು ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಲ್ಲಿ ಓರ್ವ ಶಿಕ್ಷಕ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊರ್ವ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಗರ ಮುಖ್ಯಭಾಗದಲ್ಲಿರುವ ಫ್ಲಾಟ್ನಲ್ಲೇ ಇವರು ಡ್ರಗ್ಸ್ ತಯಾರಿಸುತ್ತಿದ್ದರು. ಈ ಕುರಿತು ಯಾರಿಗೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಕಳೆದೆರಡು ತಿಂಗಳಲ್ಲಿ ಇಬ್ಬರು ಸುಮಾರು 5 ಕೆಜಿ ಡ್ರಗ್ಸ್ ತಯಾರಿಸಿದ್ದು, ಇದರ ಮೌಲ್ಯ 15 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ 12 ಕೋಟಿಯ ಡ್ರಗ್ಸ್ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಶಿಕ್ಷಕರನ್ನು ಎನ್ಡಿಪಿಎಸ್ ಕಾಯ್ದೆ ಅನ್ವಯ ಬಂಧಿಸಲಾಗಿದೆ. ಶ್ರೀ ಗಂಗಾನಗರದ ರೈಸಿಂಗ್ ನಗರದ ನಿವಾಸಿ ಹಂಸರಾಜ್ ಭಾರ್ಗವ ಅವರ ಮಗ ಮನೋಜ್ ಮತ್ತು ಸಾಧುವಾಲಿಯ ನಿವಾಸಿ ರಾಜುರಾಮ್ ಬಿಷ್ಣೋಯ್ ಅವರ ಮಗ ಇಂದ್ರಜಿತ್ ಬಂಧಿತ ಆರೋಪಿಗಳಾಗಿದ್ದಾರೆ. ಮನೋಜ್ ಮುಕ್ಲಾವಾ 2020 ರಿಂದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇಂದ್ರಜಿತ್ ಎಂಡಿ ಪಬ್ಲಿಕ್ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರಾಗಿದ್ದಾರೆ.