Sharanabasappa Appa: ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ
Kalaburagi News: ಕಲಬುರಗಿಯ ಶರಣ ಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಗುರುವಾರ (ಆಗಸ್ಟ್ 14) ಲಿಂಗೈಕ್ಯರಾದರು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕಲಬುರಗಿ: ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೇಷ್ಠ ಸಂತ, ಜ್ಞಾನ ದಾಸೋಹಿ, ಕರ್ನಾಟಕದ ಮದನ್ ಮೋಹನ ಮಾಳವೀಯ, ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ, ಜ್ಞಾನ ರತ್ನ ಮಹಾದಾಸೋಹಿ ಶ್ರೀ ಡಾ. ಶರಣಬಸವಪ್ಪ ಅಪ್ಪ (Dr. Sharanabasappa Appa) (91) ಗುರುವಾರ (ಆಗಸ್ಟ್ 14) ಶಿವೈಕ್ಯರಾದರು. ಇದರೊಂದಿಗೆ ನಾಡಿನ ಶರಣರ ದಾಸೋಹ ಪರಂಪರೆಯ ಜ್ಞಾನದ ಕೊಂಡಿಯೊಂದು ಕಳಚಿದಂತಾಗಿದೆ (Kalaburagi News). ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾದರು.
ಧರ್ಮಪತ್ನಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಗಂಗಾಂಬಿಕಾತಾಯಿ, ತೇಜಸ್ವಿನಿ ತಾಯಿ, ಉಮಾ ತಾಯಿ, ಗೋದು ತಾಯಿ, ಶಿವಾನಿ, ಕೋಮಲಾದೇವಿ ಹಾಗೂ ಮಹೇಶ್ವರಿ ಎಂಬ ಪುತ್ರಿಯರು ಸೇರಿ ಲಕ್ಷಾಂತರ ಭಕ್ತರನ್ನು ಅಗಲಿದ್ದಾರೆ.
ಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಜು. 25ರಂದು ರಾತ್ರಿ ಉಸಿರಾಟದ ಸೋಂಕಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿರಂತರವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ದಾಸೋಹ ಮನೆಯಲ್ಲಿಯೇ ರಾತ್ರಿ 9.23 ಗಂಟೆ ಸುಮಾರಿಗೆ ಶರಣರು ಪಾದ ಸೇರಿದರು.
ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ… pic.twitter.com/xjKkBuXAj7
— B.S.Yediyurappa (@BSYBJP) August 14, 2025
ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅಂತಿಮ ಇಚ್ಛೆಯಂತೆ, ಅಪ್ಪಾಜಿ ಅವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಕರೆದೊಯ್ಯಲಾಯಿತು. ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕಿಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಮಾಡಿ, ದಾಸೋಹ ಮನೆ ಪ್ರವೇಶಿಸಿದ ನಂತರ 9.23 ಗಂಟೆ ಸುಮಾರಿಗೆ ಡಾ.ಅಪ್ಪ ಲಿಂಗೈಕ್ಯರಾದರು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Prabhakar Kalyani: ಕಾಂತಾರ ಚಿತ್ರದ ನಟ, ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ನಿಧನ
ವಿದ್ಯಾ ಭಂಡಾರಿ ಡಾ. ಅಪ್ಪಾ
ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಶರಣಬಸವೇಶ್ವರ ಮಹಾದಾಸೋಹ ಪೀಠದ 7ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಗೋದುತಾಯಿ ದಂಪತಿ ಪುತ್ರರಾಗಿ 1935ರ ನ.14ರಂದು ಜನಿಸಿದರು. ಅಧ್ಯಾತ್ಮಿಕ, ದಾಸೋಹ ವಾತಾವರಣದಲ್ಲಿ ಬೆಳೆದರು. 200 ವರ್ಷಗಳ ಮಹಾದಾಸೋಹ ಇತಿಹಾಸ ಇರುವ ಶ್ರೀ ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನ ಪೀಠಾಧಿಪತಿಗಳಾಗಿ 1983ರಲ್ಲಿ ಪೀಠಾರೋಹಣಗೈದರು. 45 ವರ್ಷಗಳಲ್ಲಿ ನಾಡಿನ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಮಾನ್ಯ ಜನರ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಗುಣಮಟ್ಟ ಉನ್ನತಿಗೆ ಶ್ರಮಿಸಿದರು.
ಪಾರಂಪರಿಕವಾಗಿ ನಡೆದ ದಾಸೋಹ ಪರಂಪರೆ ನಡೆಸಿಕೊಂಡು ಜ್ಞಾನದ ಸ್ಪರ್ಶ ನೀಡಿದರು. ಭಕ್ತರಿಗೆ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ನೀಡಿ, ಜ್ಞಾನದೀವಿಗೆಯಾದರು. ಡಾ. ಶರಣಬಸವಪ್ಪ ಅಪ್ಪ 1957ರಲ್ಲಿ ಮಾತೋಶ್ರೀ ಕೋಮಲಾದೇವಿ ಅವರನ್ನು ವಿವಾಹವಾದರು. ಧರ್ಮನಿಷ್ಠ ದಂಪತಿಗೆ ನಾಲ್ವರು ಪುತ್ರಿಯರು ಜನಿಸಿದರು. ಮಾತೋಶ್ರೀ ಕೋಮಲಾದೇವಿ 1993 ಮಾ. 23ರಂದು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರನ್ನು 1993 ನ. 30ರಂದು ವಿವಾಹವಾದರು. ದಂಪತಿಗೆ ನಾಲ್ವರು ಮಕ್ಕಳು ಜನಿಸಿದ್ದು, ನಾಲ್ಕನೇ ಮಗ ಚಿ.ದೊಡ್ಡಪ್ಪ ಅಪ್ಪ 9ನೇ ಪೀಠಾಧಿಪತಿಯಾಗಿ ಉತ್ತರಾಧಿಕಾರಿಯಾಗಿದ್ದಾರೆ.
ಶಿಕ್ಷಣವಂತ, ತತ್ವಜ್ಞಾನಿ ಡಾ. ಅಪ್ಪಾ
ವಿದ್ಯಾ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಗುರುಕುಲ ಸಂಪ್ರದಾಯದಲ್ಲಿ ಮಹಾದಾಸೋಹ ಮಹಾಮನೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ನೂತನ ವಿದ್ಯಾಲಯ ಶಾಲೆಯಲ್ಲಿ ಶಿಕ್ಷಣ ಪಡೆದರು. ಕಲಬುರಗಿಯ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಾ. ಡಿ.ಸಿ. ಪಾವಟೆ ಮಾರ್ಗದರ್ಶನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ತತ್ವಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದರು.
ನಾಡಿನ ಶೈಕ್ಷಣಿಕ ಕ್ರಾಂತಿಯ ಹರಿಕಾರ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಉಸ್ತುವಾರಿ ವಹಿಸಿಕೊಂಡು ಎಲ್ಕೆಜಿಯಿಂದ ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆವರೆಗೆ ಶ್ರಮಿಸಿದರು. 1971ರಲ್ಲಿ ಸಾರ್ವಜನಿಕ ಶಾಲಾ ವ್ಯವಸ್ಥೆ ಮಾದರಿಯಲ್ಲಿ ಶರಣಬಸವೇಶ್ವರ ವಸತಿ ಶಾಲೆ ಪ್ರಾರಂಭಿಸಿದರು. ನಾಯಕತ್ವದಲ್ಲಿ 5 ಸಾವಿರ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸುವ ಮತ್ತು ವೃತ್ತೀಜಿವನವನ್ನು ರೂಪಿಸಿಕೊಳ್ಳುವ ದೈತ್ಯ ವೃಕ್ಷವಾಗಿ ಬೆಳೆದಿದೆ.