Fire Accident: ಆಳಂದದಲ್ಲಿ ಪುಸ್ತಕ ಗೋದಾಮಿಗೆ ಬೆಂಕಿ; ಕೋಟ್ಯಂತರ ರೂ. ಮೌಲ್ಯದ ಪಠ್ಯ ಪುಸ್ತಕಗಳು ಸುಟ್ಟು ಭಸ್ಮ
Fire Accident: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಅಗ್ನಿ ಅವಘಡ ನಡೆದಿದೆ. ಒಂದು ಕೋಣೆಯಲ್ಲಿನ ಸುಮಾರು 2 ಲಕ್ಷಕ್ಕೂ ಅಧಿಕ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


ಕಲಬುರಗಿ: ಶಿಕ್ಷಣ ಇಲಾಖೆಯ ಪುಸ್ತಕ ಗೋದಾಮಿಗೆ ಬೆಂಕಿ ತಗುಲಿ, ಕೋಟ್ಯಂತರ ರೂಪಾಯಿ ಮೌಲ್ಯದ ಪಠ್ಯ ಪುಸಕ್ತಗಳು ಸುಟ್ಟು ಭಸ್ಮವಾಗಿರುವ ಘಟನೆ (Fire Accident) ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 4ರಿಂದ 8ನೇ ತರಗತಿವರೆಗೆ ವಿವಿಧ ಶಾಲೆಗಳಿಗೆ ವಿತರಣೆಗಾಗಿ ದಾಸ್ತಾನು ಮಾಡಿದ್ದ ಪುಸ್ತಕ ಕೋಣೆಗೆ ಬೆಂಕಿ ತಗುಲಿ ಭಾರಿ ನಷ್ಟವಾಗಿದೆ.
ಅವಘಡದಲ್ಲಿ ಒಂದು ಕೋಣೆಯಲ್ಲಿನ ಸುಮಾರು 2 ಲಕ್ಷಕ್ಕೂ ಅಧಿಕ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇನ್ನೊಂದು ಕೋಣೆಯಲ್ಲಿ ಪುಸ್ತಕಗಳು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಗೋದಾಮಿನಲ್ಲಿ ಇಡಲಾಗಿದ್ದ ಶಾಲೆಗಳಿಗೆ ವಿತರಣೆಯಾಗಬೇಕಿದ್ದ ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿ ಮತ್ತು ಇತರ ಶೈಕ್ಷಣಿಕ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿವೆ. ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಂಗಸ್ವಾಮಿ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಬಿಆರ್‌ಸಿ ಅಣ್ಣಪ್ಪ ಹಾದಿಮನಿ, ಇಸಿಒ ಶ್ರೀಮಂತ ಪಾಟೀಲ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೋಡ್ಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವ ಕಾರಣದಿಂದ ಅವಘಡ ಸಂಭವಿಸಿದೆ ಎಂದು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ದೂರು ನೀಡಿದ್ದರಿಂದ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bidadi Girl death case: ಬಿಡದಿ ಬಾಲಕಿ ಸಾವು ಪ್ರಕರಣ; ಅತ್ಯಾಚಾರ ನಡೆದಿಲ್ಲ ಎಂದ ಎಫ್‌ಎಸ್ಎಲ್ ವರದಿ