ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತರಗತಿ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸರ್ಕಾರಿ ಶಾಲಾ ಛಾವಣಿ; ವಿಡಿಯೋ ವೈರಲ್‌

ತರಗತಿ ನಡೆಯುತ್ತಿದ್ದಾಗಲೇ ಸರ್ಕಾರಿ ಶಾಲೆಯ ಮೇಲ್ಚಾವಣಿಯ ಒಂದು ಭಾಗ ಕುಸಿದ ಪರಿಣಾಮ ಐದು ಮಂದಿ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಎಸ್ಪಿ ಕಚೇರಿ ಸಮೀಪದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ.

ತರಗತಿ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸರ್ಕಾರಿ ಶಾಲಾ ಛಾವಣಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 13, 2026 7:01 AM

ಕಲಬುರಗಿ: ತರಗತಿ ನಡೆಯುತ್ತಿದ್ದಾಗಲೇ ಸರ್ಕಾರಿ ಶಾಲೆಯ ಮೇಲ್ಚಾವಣಿಯ ಒಂದು ಭಾಗ ಕುಸಿದ ಪರಿಣಾಮ ಐದು ಮಂದಿ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. (Kalaburagi news) ಕಲಬುರಗಿ ನಗರದ ಎಸ್ಪಿ ಕಚೇರಿ ಸಮೀಪದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ತರಗತಿ ನಡೆಯುತ್ತಿದ್ದ ವೇಳೆ ಮೇಲ್ಚಾವಣಿಯ ಸಿಮೆಂಟ್ ಪದರು ಏಕಾಏಕಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಥಮ ಪಿಯುಸಿ ಕಾಮರ್ಸ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಅಪಘಾತ ಸಂಭವಿಸಿದ ವೇಳೆ ತರಗತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಠ ಕೇಳುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಪೂಜಾ, ಸೃಷ್ಟಿ, ನಿಶಾ, ಶೀತಲ್ ಸೇರಿದಂತೆ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವರಿಗೆ ತಲೆ, ಬೆನ್ನು ಹಾಗೂ ಮೊಣಕೈ ಭಾಗಗಳಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಡಿಯೋ ನೋಡಿ



ತರಗತಿಯ ಮೇಲ್ಚಾವಣಿ ಕುಸಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾಲೇಜು ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ವೇಳೆ 'ಮೇಲ್ಚಾವಣಿಯ ಸಿಮೆಂಟ್ ಪದರು ಕಳಚಿ ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. 2016ರಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಕಳಪೆ ಕಾಮಗಾರಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.

ಭಯಭೀತರಾದ ವಿದ್ಯಾರ್ಥಿನಿಯರು ತರಗತಿಯಿಂದ ಹೊರಗೆ ಓಡಿ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರು ಮತ್ತು ಸಾರ್ವಜನಿಕರು ಕಾಲೇಜು ಆಡಳಿತ ಹಾಗೂ ಸಂಬಂಧಿತ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.