Self Harming: ಪ್ರೀತಿಸುತ್ತಿದ್ದಾಕೆಯೊಂದಿಗೆ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ನವವಿವಾಹಿತ; ಈ ದುರಂತ ಸಾವಿಗೆ ಕಾರಣವಾಗಿದ್ದೇನು?
Kolar News: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ ಅದೇ ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಮದುವೆಯಾಗಲು ಸ್ವಲ್ಪ ದಿನಗಳ ಕಾಲಾವಕಾಶ ಕೋರಿದ್ದ ಆತನ್ನು ಬಲವಂತವಾಗಿ ಮದುವೆ ಮಾಡಿಸಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.


ಕೋಲಾರ: ಪ್ರೀತಿಗೆ ಮನೆಯವರು ಒಪ್ಪಿಗೆ ಕೊಡದ ಕಾರಣ ಆತ್ಮಹತ್ಯೆಗೆ (Self Harming) ಶರಣಾದ ಎಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಇದಕ್ಕೆ ವ್ಯತಿರಿಕ್ತವಾದ ಪ್ರಕರಣ ನಡೆದಿದೆ. ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ ಅದೇ ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಪರ್ಯಾಸ ಎಂದರೆ ಮದುವೆಯೇ ಆತನ ಪಾಲಿಗೆ ಮುಳುವಾಗಿದೆ (Kolar News). ಕೋಲಾರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು ಎಂದು ಗುರುತಿಸಲಾಗಿದೆ. ಆ ಮೂಲಕ ಸಂಭ್ರಮದಲ್ಲಿ ಮುಳುಗೇಳಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಬುಧವಾರ (ಜು. 2) ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಹರೀಶ್ ಬಾಬು ಅಂದೇ ರಾತ್ರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಈತ ಕಳೆದ 10 ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಜಿಲ್ಲಾಸ್ಪತ್ರೆಯ ಇ.ಎನ್.ಟಿ. ವಿಭಾಗದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರಣವೇನು?
ಹರೀಶ್ ಬಾಬು ಮನೆ ಕಟ್ಟಿ ಬಳಿಕ ಪ್ರೀತಿಸಿದ ಹುಡುಗಿಯೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂದು ಕನಸು ಕಂಡಿದ್ದ. ಆದರೆ ಏಕಾಏಕಿ ರಿಜಿಸ್ಟರ್ ಆಫೀಸ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Self Harming: ಬೇರೊಬ್ಬರ ಜತೆ ಮದುವೆ ನಿಶ್ಚಯ; ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ!
ಘಟನೆ ಹಿನ್ನೆಲೆ
ಜಿಲ್ಲಾಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಹರೀಶ್ ಬಾಬು ಕೆಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆ ಕಟ್ಟಿಸುತ್ತಿದ್ದ ಹರೀಶ್ ಬಾಬು ಇದರ ಕೆಲಸ ಪೂರ್ಣಗೊಂಡ ಬಳಿಕ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ. ಈ ಮಧ್ಯೆ ಎರಡೂ ಮನೆಯವರಿಗೆ ಇವರು ಪ್ರೀತಿಸುತ್ತಿದ್ದ ವಿಚಾರ ತಿಳಿಯಿತು. ಹೀಗಿರುವಾಗಲೇ ಪ್ರೇಮಿಗಳ ನಡುವೆ ಯಾವುದೋ ವಿಚಾರಕ್ಕೆ ಕಲಹ ಏರ್ಪಟ್ಟಿತು. ಎಲ್ಲಿ ಹರೀಶ್‌ಬಾಬು ಕೈಕೊಟ್ಟು ಬಿಡುತ್ತಾನೋ ಎನ್ನುವ ಭಯದಲ್ಲಿ ಯುವತಿ ಕೂಡಲೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು. ಇದಕ್ಕೆ ಒಪ್ಪದ ಹರೀಶ್ ಬಾಬು, ಆಷಾಡ ಮಾಸ ಮುಗಿಯಲಿ, ಜತೆಗೆ ತಾನು ಊರಿನಲ್ಲಿ ಕಟ್ಟಿಸುತ್ತಿರುವ ಮನೆ ಕೆಲಸ ಪೂರ್ಣಗೊಳ್ಳಲಿ; ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದ.
ಇದ್ಯಾವುದನ್ನೂ ಒಪ್ಪುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ನೇರ ಹರೀಶ್ ಬಾಬು ಮನೆಗೆ ಹೋಗಿ ಮದುವೆಗೆ ಆತನ ತಂದೆ ತಾಯಿಯನ್ನು ಮನವೊಲಿಸಿದ್ದಳು. ಹರೀಶ್ ಬಾಬು ಕುಟುಂಬಸ್ಥರು ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಆಷಾಡ ಮಾಸ ಮುಗಿಯಲಿ ಎಂದರೂ ಕೇಳದೆ ಜು. 2ರಂದು ಯುವತಿ ಸಂಬಂಧಿಕರು ಸೇರಿ ಕೋಲಾರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹರೀಶ್ ಬಾಬು ಜತೆ ರಿಜಿಸ್ಟರ್ ಮದುವೆ ಮಾಡಿಸಿದ್ದರು. ಮದುವೆ ಮುಗಿದ ನಂತರ ಎಲ್ಲರೂ ಮನೆಗೆ ವಾಪಸ್ ತೆರಳಿದ್ದರು.
ಮನೆಗೆ ಹೋಗದ ಹರೀಶ್ ಬಾಬು ಆ ದಿನ ರಾತ್ರಿ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದವನೇ ಮದ್ಯ ಸೇವಿಸಿ ನಂತರ ಅಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜು. 3ರಂದು ಬೆಳಗ್ಗೆ ಸಿಬ್ಬಂದಿ ಬಾಗಿಲು ತೆರೆದಾಗ ಆತನ ಮೃತದೇಹ ಕಂಡು ಬಂದಿದೆ. ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.