ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kanakadasa Jayanthi 2025: ಕನಕದಾಸರು ಕೇವಲ ದಾಸಶ್ರೇಷ್ಠ ವ್ಯಕ್ತಿಯಲ್ಲ; ಒಂದು ಮಹೋನ್ನತ ಪರಂಪರೆ: ಕೆ.ವಿ. ಪ್ರಭಾಕರ್

KV Prabhakar: ಕನಕದಾಸರ ಹೆಸರನ್ನು ನಾವು ಕರೆಯುವಾಗ ಇವರ ಜತೆಗೆ ಬುದ್ದ, ಬಸವ, ಕನಕ ಎಂದು ಕರೆಯುತ್ತೇವೆ. ಅಂದರೆ ಬುದ್ದನಿಂದ ಶುರುವಾಗುವ ಮಹೋನ್ನತ ಪರಂಪರೆಯ ಭಾಗವಾಗಿ ಕನಕರನ್ನು ನಾವು ಆರಾಧಿಸುತ್ತೇವೆ. ಆದ್ದರಿಂದ ಕನಕ ಜಯಂತಿಯಂದು ನಾವು ನಮ್ಮ ಪರಂಪರೆಯ ಬೇರುಗಳಿಗೆ ಚೈತನ್ಯ ತುಂಬುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ಕನಕದಾಸರು ಕೇವಲ ದಾಸಶ್ರೇಷ್ಠ ವ್ಯಕ್ತಿಯಲ್ಲ; ಒಂದು ಮಹೋನ್ನತ ಪರಂಪರೆ: ಕೆವಿಪಿ

ಕನಕದಾಸ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉದ್ಘಾಟಿಸಿದರು. -

Profile
Siddalinga Swamy Nov 8, 2025 4:49 PM

ಕೋಲಾರ, ನ.8: ಕನಕದಾಸರು ಎಂದರೆ ಕೇವಲ ದಾಸಶ್ರೇಷ್ಠ ವ್ಯಕ್ತಿಯಲ್ಲ, ಒಂದು ಮಹೋನ್ನತ ಪರಂಪರೆ ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ತಿಳಿಸಿದರು. ಕೋಲಾರ ಕುರುಬರ ಸಂಘ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮವನ್ನು (Kanakadasa Jayanthi 2025) ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಹೆಸರನ್ನು ನಾವು ಕರೆಯುವಾಗ ಇವರ ಜತೆಗೆ ಬುದ್ದ, ಬಸವ, ಕನಕ ಎಂದು ಕರೆಯುತ್ತೇವೆ. ಅಂದರೆ ಬುದ್ದನಿಂದ ಶುರುವಾಗುವ ಮಹೋನ್ನತ ಪರಂಪರೆಯ ಭಾಗವಾಗಿ ಕನಕರನ್ನು ನಾವು ಆರಾಧಿಸುತ್ತೇವೆ. ಆದ್ದರಿಂದ ಕನಕ ಜಯಂತಿಯಂದು ನಾವು ನಮ್ಮ ಪರಂಪರೆಯ ಬೇರುಗಳಿಗೆ ಚೈತನ್ಯ ತುಂಬುವಂತಾಗಬೇಕು ಎಂದು ಹೇಳಿದರು.

ದಾಸಶ್ರೇಷ್ಠ ಕನಕರು ನಮ್ಮ ಪರಂಪರೆಯ ನೈತಿಕ ಮತ್ತು ಅಧ್ಮಾತ್ಮಿಕ ಶಕ್ತಿಯಾಗಿದ್ದಾರೆ. ಆದರೆ, ಬಹಳ ಮಂದಿ ಕನಕದಾಸರಿಂದ ನಮ್ಮ ಪರಂಪರೆ ಆರಂಭವಾಗಿದೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಅಲೆಮಾರಿಯಾಗಿದ್ದ ಮನುಷ್ಯ ಜನಾಂಗ ಕೃಷಿಗಿಂತ ಮೊದಲೇ ಪಶುಪಾಲನೆ ಕಂಡುಕೊಂಡಿತ್ತು. ಹಸು, ಕುರಿ, ಮೇಕೆ, ಕುದುರೆ ಸಾಕುತ್ತಿದ್ದವರೆಲ್ಲಾ ಕುರುಬರೇ ಅನ್ನಿಸಿಕೊಂಡ ಚರಿತ್ರೆ ಇದೆ.

ನಾಣ್ಯ ಮತ್ತು ನೋಟುಗಳು ಬರುವ ಮೊದಲು ಕುರಿ ಮತ್ತು ಹಸುಗಳೇ ನಾಣ್ಯಗಳಾಗಿದ್ದವು. ಕುರಿ, ಹಸುಗಳನ್ನು ಕೊಟ್ಟು ಇತರೆ ವಸ್ತು, ಪದಾರ್ಥಗಳನ್ನು ಕೊಳ್ಳಲಾಗುತ್ತಿತ್ತು. ಅಂದರೆ, ಹೆಚ್ಚು ಕುರಿ, ಹಸು ಇರುವವನೇ ಹೆಚ್ಚು ಶ್ರೀಮಂತ, ಒಡೆಯನಾಗಿದ್ದ ಪರಂಪರೆ ನಮ್ಮದು. ಅಂದರೆ ಪ್ರಾಚೀನ ಭಾರತದ ಆರ್ಥಿಕತೆಯೇ ಕುರುಬರ, ಪಶುಪಾಲಕರ ಕೈಯಲ್ಲಿ ಇತ್ತು. ಇಡೀ ದೇಶದ ಆರ್ಥಿಕತೆಯನ್ನು ನಿಭಾಯಿಸುತ್ತಿದ್ದ ಪರಂಪರೆಯಿಂದ ಬಂದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪರಂಪರೆಯ ಮುಂದುವರಿಕೆಯಾಗಿ 16 ಬಜೆಟ್‌ಗಳನ್ನು ಮಂಡಿಸಿ ದಾಖಲೆ ಮೆರೆದಿದ್ದಾರೆ ಎಂದು ಕೆ.ವಿ. ಪ್ರಭಾಕರ್ ಮೆಚ್ಚುಗೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು; ಮುಖ್ಯಮಂತ್ರಿ ಸಿದ್ದರಾಮಯ್ಯ

KV Prabhakar

ನಮ್ಮ ಕುರುಬ ಪರಂಪರೆಗೆ ಧಾರ್ಮಿಕ‌ ಸಹಿಷ್ಣುತೆ ಮತ್ತು ಜಾತ್ಯತೀತತೆಯ ಚರಿತ್ರೆಯೂ ಇದೆ. ಕನಕ ದಾಸರು "ತಲ್ಲಣಿಸದಿರು ತಾಳು ಮನವೇ" ಎಂದು ಹಾಡುವಾಗ ಬೌದ್ಧ, ಇಸ್ಲಾಂ, ಕ್ರೈಸ್ತ ಧರ್ಮಗಳ ಜತೆಗಿನ ಒಡನಾಟವನ್ನೂ ಹೇಳುತ್ತಾರೆ. ಏಸುಕ್ರಿಸ್ತರ ಮಡಿಲಲ್ಲೂ ಕುರಿ ಇದೆ. ಪೈಗಂಬರರೂ ಕುರಿಸಾಕಾಣಿಕೆಯ ಪರಂಪರೆ ಜತೆಗಿದ್ದವರು ಎನ್ನುವುದನ್ನು ಅಧ್ಯಯನಗಳು ಹೇಳುತ್ತವೆ.

ಕುರುಬರ ಕುಲದೈವಗಳು, ದೇವತೆಗಳು, ಸಾಂಸ್ಕೃತಿಕ ನಾಯಕರು, ನಾಯಕಿಯರನ್ನೆಲ್ಲಾ ನೋಡಿದರೆ ಅಂತರ್ಜಾತಿ ವಿವಾಹ ಮತ್ತು ಜಾತ್ಯತೀತ ಪರಂಪರೆಯೂ ನಮಗೆ ಗೊತ್ತಾಗುತ್ತದೆ. ಹೇಮರೆಡ್ಡಿ ಮಲ್ಲಮ್ಮ ಅಂದರೆ ರೆಡ್ಡಿ ಜನಾಂಗದ ಜತೆಗಿನ ನಮ್ಮ ಒಡನಾಟವನ್ನೂ ಹೇಳುತ್ತದೆ. ಹೀಗೆ ಬಲಿಜ, ಗೊಲ್ಲ, ನಾಯಕ, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಜಾತಿಗಳ ಜತೆಗೆ ನಮ್ಮ ದೈವಗಳು, ಸಾಂಸ್ಕೃತಿಕ‌ ಪುರುಷರು ಬೆರೆತು ಸಂಬಂಧಗಳನ್ನು ಏರ್ಪಡಿಸಿಕೊಂಡ ಜಾತ್ಯತೀತ ಪರಂಪರೆಯೂ ನಮ್ಮ ರಕ್ತದಲ್ಲೇ ಬಂದಿದೆ. ಇದನ್ನೆಲ್ಲಾ ಮುಂದೆ ಯಾವತ್ತಾದರೂ ವಿವರವಾಗಿ ಮಾತನಾಡುತ್ತೇನೆ ಎಂದರು‌. ‌

ಹೀಗಾಗಿ ಕನಕದಾಸರ ಜಯಂತಿಯಂದು ನಾವು ನಮ್ಮ ಪರಂಪರೆಯ ಆಳ-ಅಗಲವನ್ನು ಅರಿಯುವ ಮೂಲಕ ನಮ್ಮ ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಕರೆ ನೀಡಿದರು.