ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಹಿನ್ನಡೆ; 63 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕೋರ್ಟ್ ಆದೇಶ
Forest land encroachment Case: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ಸರ್ವೆ ನಂ.1 ಮತ್ತು 2 ರಲ್ಲಿ 60.23 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಆರೋಪ, ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಕುಮಾರ್ ಅವರ ವಿರುದ್ಧವಿದೆ.
ಮಾಜಿ ಸ್ಪೀಕರ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್. -
ಕೋಲಾರ: ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ (land encroachment) ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ (KR Ramesh Kumar) ಅವರಿಗೆ ಹಿನ್ನಡೆಯಾಗಿದೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ.
2025ರ ಜನವರಿ 15 ಮತ್ತು 16 ರಂದು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದವು. ವರದಿ ಸಂಬಂಧ ಕಾಂಗ್ರೆಸ್ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ (ಬೆಂಗಳೂರು ವೃತ್ತ) ನ್ಯಾಯಾಲಯ ಜಂಟಿ ಸಮೀಕ್ಷೆ ವರದಿ ಆಧರಿಸಿ, ಅರಣ್ಯ ಭೂಮಿಯನ್ನು 30 ದಿನದೊಳಗೆ ಬಿಟ್ಟುಕೊಡುವಂತೆ ಆದೇಶ ಹೊರಡಿಸಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ಸರ್ವೆ ನಂ.1 ಮತ್ತು 2 ರಲ್ಲಿ 60.23 ಎಕರೆ ಒತ್ತುವರಿ ಆರೋಪವಿದ್ದು, ಒತ್ತುವರಿ ಭೂಮಿ 64(0) ಅನ್ವಯ ತೆರವು ಗೊಳಿಸುವಂತೆ ಆದೇಶ ಹೊರಡಿಸಿದೆ. ಕೆ.ಆರ್ ರಮೇಶ್‌ಕುಮಾರ್ ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಿದ್ದು, ಈ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಅತಿಕ್ರಮಣ ಮಾಡಲಾದ ಭೂಮಿಯನ್ನು ಶಾಂತಿಯುತವಾಗಿ ಹಸ್ತಾಂತರಿಸಬೇಕೆಂದು ನಿರ್ದೇಶಿಸಲಾಗಿದೆ.
ನಿಗದಿತ ಅವಧಿಯೊಳಗೆ ಆದೇಶ ಪಾಲಿಸಲು ವಿಫಲವಾದರೆ, ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.