ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟಿ ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

Udhayanidhi Stalin Arrested: ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡು ಪೊಲೀಸರು ಮಂಗಳವಾರ ಬೆಳಿಗ್ಗೆ ಅವರ ಮನೆಯಲ್ಲಿಯೇ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸೋಮವಾರ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್‌ ಹಾಗೂ ತ್ರಿಷಾ ಕುರಿತು ಅಸಭ್ಯವಾಗಿ ಮಾತನಾಡಿದ್ದರು ಎಂದು ಟಿವಿಕೆ ಕಾರ್ಯಕರ್ತರು ದೂರು ನೀಡಿದ್ದರು.

ನಟಿ ತ್ರಿಷಾ ಕುರಿತು ಅಸಭ್ಯ ಹೇಳಿಕೆ; ಉದಯನಿಧಿ ಸ್ಟಾಲಿನ್  ಬಂಧನ

ಉದಯನಿಧಿ ಸ್ಟಾಲಿನ್‌ -

Vishakha Bhat Heggar
Vishakha Bhat Heggar Aug 4, 2026 11:34 AM

ಚೆನ್ನೈ: ನಟಿ ತ್ರಿಷಾ (Trisha Krishnan) ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin Arrested) ಅವರನ್ನು ತಮಿಳುನಾಡು ಪೊಲೀಸರು ಮಂಗಳವಾರ ಬೆಳಿಗ್ಗೆ ಅವರ ಮನೆಯಲ್ಲಿಯೇ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸೋಮವಾರ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಮುಖ್ಯಮಂತ್ರಿ ವಿಜಯ್‌ ಬಗ್ಗೆ ವಾಗ್ದಾಳಿ ನಡೆಸುವಾಗ ನಟಿ ತ್ರಿಷಾ ಕೃಷ್ಣನ್‌ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಟಿವಿಕೆ ಕಾರ್ಯಕರ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉದಯನಿಧಿಯವರನ್ನು ಬಂಧಿಸಲಾಗಿದೆ.

ಏನಿದು ವಿವಾದ?

ನಿನ್ನೆ (ಸೋಮವಾರ) ತಂಜಾವೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಕಾವೇರಿ ವಿಚಾರವಾಗಿ ಮಾತನಾಡುತ್ತಿದ್ದಾಗ, ಉದಯನಿಧಿ ಸ್ಟಾಲಿನ್ ಅವರು ಸಿಎಂ ಜೋಸೆಫ್‌ ವಿಜಯ್‌ ಹಾಗೂ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಡಬಲ್‌ ಮೀನಿಂಗ್‌ ಬರುವ ರೀತಿಯಲ್ಲಿ ಮಾತನಾಡಿದ್ದರು. "ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ವಿಜಯ್ ಅವರಿಗೆ ಅದರ ಬಗ್ಗೆ ಯಾವುದೇ ಕಾಳಜಿಯಿಲ್ಲ" ಎಂದು ಹೇಳುವಾಗ ಅಭಿಮಾನಿಯೊಬ್ಬ ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದ. ಈ ವೇಳೆ ಸ್ಟಾಲಿನ್‌ ಅಸಭ್ಯವಾಗಿ ತ್ರಿಷಾ ಕುರಿತು ಮಾತನಾಡಿದ್ದಾರೆ ಎಂದು ಟಿವಿಕೆ ಆರೋಪಿಸಿತ್ತು. ಪ್ರತಿಭಟನೆಗಳು ಹಾಗೂ ಆಕ್ರೋಶದ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಮುತ್ತಿಗೆ ಹಾಕಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಿಳಾ ಆಯೋಗಕ್ಕೂ ದೂರು

ತ್ರಿಷಾ ಕುರಿತು ಉದಯನಿಧಿ ಅವರು ನೀಡಿದ ಹೇಳಿಕೆ ಬಗ್ಗೆ ಟಿವಿಕೆ ಪಕ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ, ಉದಯನಿಧಿ ಸ್ಟಾಲಿನ್ ಅವರ ಮಾತುಗಳು ಮಹಿಳೆಯರನ್ನು ವಸ್ತುವಿನಂತೆ ಕಾಣುವ ಮನೋಭಾವವನ್ನು ಉತ್ತೇಜಿಸುತ್ತವೆ. ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಹೇಳಿಕೆಗಳು ಅಸ್ವೀಕಾರಾರ್ಹ ಎಂದು ಟಿವಿಕೆ ತಿಳಿಸಿದೆ.

ಕರೂರು ಕಾಲ್ತುಳಿತ ಸ್ಥಳಕ್ಕೆ ಸಿಎಂ ವಿಜಯ್‌ ಭೇಟಿ; ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ಸ್ಮಾರಕ ನಿರ್ಮಾಣ

ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಟಿವಿಕೆ ಆಗ್ರಹಿಸಿದೆ. ಈ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪಕ್ಷ ಘೋಷಿಸಿದೆ. ಈ ಹೇಳಿಕೆಗೆ ಬಿಜೆಪಿ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದೆ.