ಗುರುವಾಯೂರು ದೇವಸ್ಥಾನದಲ್ಲಿ ನಿಯಮ ಉಲ್ಲಂಘಿಸಿದ ಆರೋಪ; ಕೃಷ್ಣನ ವರ್ಣ ಚಿತ್ರ ಬಿಡಿಸಿ ಮೋದಿ ಮೆಚ್ಚುಗೆ ಗಳಿಸಿದ ಮುಸ್ಲಿಂ ಕಲಾವಿದೆ ವಿರುದ್ಧ ದೂರು
Guruvayoor Temple: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ಕೃಷ್ಣನ ವರ್ಣಚಿತ್ರವನ್ನು ಉಡುಗೊರೆಯನ್ನಾಗಿ ನೀಡಿದ್ದ ಕೇರಳರದ ಮುಸ್ಲಿಂ ಕಲಾವಿದೆ ಜಸ್ನಾ ಸಲೀಂ ವಿರುದ್ದ ದೂರು ದಾಖಲಾಗಿದೆ. ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ನಿಯಮ ಉಲ್ಲಂಘಿಸಿ ವಿಡಿಯೊ ಮಾಡಿದ ಆರೋಪದ ಮೇಲೆ ಜಸ್ನಾ ಸಲೀಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೇರಳದ ಕಲಾವಿದೆ ಜಸ್ನಾ ಸಲೀಂ ವಿರುದ್ಧ ಪ್ರಕರಣ ದಾಖಲಾಗಿದೆ (ಸಂಗ್ರಹ ಚಿತ್ರ). -
ತಿರುವನಂತಪುರಂ, ನ. 8: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ಕೃಷ್ಣನ ವರ್ಣ ಚಿತ್ರವನ್ನು ಉಡುಗೊರೆಯನ್ನಾಗಿ ನೀಡಿ ಗಮನ ಸೆಳೆದಿದ್ದ ಕೇರಳರದ ಮುಸ್ಲಿಂ ಮಹಿಳೆ ಜಸ್ನಾ ಸಲೀಂ (Jasna Salim) ವಿರುದ್ಧ ಇದೀಗ ದೂರು ದಾಖಲಾಗಿದೆ. ''ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ (Guruvayoor Temple) ನಿಯಮ ಉಲ್ಲಂಘಿಸಿ ವಿಡಿಯೊ ಮಾಡಿದ ಆರೋಪದ ಮೇಲೆ ಜಸ್ನಾ ಸಲೀಂ ವಿರುದ್ದ ಶನಿವಾರ (ನವೆಂಬರ್ 8) ಪ್ರಕರಣ ದಾಖಲಿಸಲಾಗಿದೆʼʼ ಎಂದು ಗುರುವಾಯೂರು ದೇವಸ್ಥಾನದ ಪೊಲೀಸರು ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಇತ್ತೀಚೆಗೆ ದೇವಾಲಯದ ನಡಪಂದಲ್ (ದೇವಾಲಯದ ಪ್ರವೇಶ ದ್ವಾರ)ದಲ್ಲಿ ವಿಡಿಯೊ ಶೂಟ್ ನಡೆಸಿದ ಜಸ್ನಾ ಸಲೀಂ ಮತ್ತು ಈ ರೀಲ್ ಹಂಚಿಕೊಂಡ ಸೋಶಿಯಲ್ ಮೀಡಿಯಾ ಖಾತೆ ಹೊಂದಿದ ವ್ಯಕ್ತಿಯ ವಿರುದ್ಧ ಗುರುವಾಯೂರು ದೇವಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Guruvayur Temple: ಶಬರಿಮಲೆ ಆಯ್ತು ಇದೀಗ ಗುರುವಾಯೂರು ದೇವಾಲಯದಲ್ಲಿಯೂ ಚಿನ್ನ ನಾಪತ್ತೆ?
ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ನಡಪಂದಲ್‌ನಲ್ಲಿ ವಿಡಿಯೊ ಚಿತ್ರೀಕರಿಸುವುದು ಮತ್ತು ರೀಲ್ ಮಾಡುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ ಎಂದು ʼದಿ ಹಿಂದೂʼ ಪತ್ರಿಕೆ ತಿಳಿಸಿದೆ. ದೇವಾಲಯದ ಆಡಳಿತ ಅಧಿಕಾರಿಯ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.
ಜಸ್ನಾ ವಿರುದ್ಧ ಬಿಎನ್‌ಎಸ್‌ನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ಶ್ರೀ ಕೃಷ್ಣನ ಪರಮ ಭಕ್ತೆಯಾಗಿರುವ ಜಸ್ನಾ ಸಲೀಂ ದೇವರ ಹಲವು ವರ್ಣಚಿತ್ರಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿಶ್ಶೂರ್‌ಗೆ ಭೇಟಿ ನೀಡಿದ್ದಾಗ ಕೈಯಲ್ಲೇ ಬಿಡಿಸಿದ ಶ್ರೀ ಕೃಷ್ಣನ ವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು.
ಹಿಂದೆಯೂ ನಡೆದಿತ್ತು ವಿವಾದ
ಜಸ್ನಾ ಹಿಂದೆಯೂ ವಿವಾದವೊಂದಕ್ಕೆ ಕಾರಣವಾಗಿದ್ದರು. ವರ್ಷಾರಂಭದಲ್ಲಿ ಗುರುವಾಯೂರು ದೇವಾಲಯದೆದುರಿನ ಶ್ರೀ ಕೃಷ್ಣನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ, ಅದರ ವಿಡಿಯೊ ಚಿತ್ರೀಕರಣ ಮಾಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ದೇವಾಲಯದ ದ್ವಾರದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವುದಕ್ಕೆ ಕೇರಳ ಹೈಕೋರ್ಟ್ ವಿಧಿಸಿದ್ದ ನಿರ್ಬಂಧವನ್ನು ಉಲ್ಲಂಘಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ಮೋದಿ ಅವರ ಎಕ್ಸ್ ಪೋಸ್ಟ್:
At Guruvayur, I received a Bhagwan Shri Krishna painting from Jasna Salim Ji. Her journey in Krishna Bhakti is a testament to the transformative power of devotion. She has been offering paintings of Bhagwan Shri Krishna at Guruvayur for years, including on key festivals. pic.twitter.com/pfrFcXEShX
— Narendra Modi (@narendramodi) January 18, 2024
ಮೆಚ್ಚುಗೆ ಸೂಚಿಸಿದ್ದ ಮೋದಿ
ಕಳೆದ ವರ್ಷ ಜಸ್ನಾ ನೀಡಿದ ಶ್ರೀ ಕೃಷ್ಣ ವರ್ಣ ಚಿತ್ರದ ಉಡುಗೊರೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. “ಗುರುವಾಯೂರಿನಲ್ಲಿ ನಾನು ಜಸ್ನಾ ಸಲೀಂ ಅವರಿಂದ ಶ್ರೀ ಕೃಷ್ಣನ ವರ್ಣಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸಿದೆ. ಅವರು ಹಲವು ವರ್ಷಗಳಿಂದ ಗುರುವಾಯೂರಿನಲ್ಲಿ ಶ್ರೀ ಕೃಷ್ಣನ ವರ್ಣ ಚಿತ್ರಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆʼʼ ಎಂದು ಜಸ್ನಾ ಜತೆಗಿನ ಫೋಟೊ ಹಂಚಿಕೊಂಡಿದ್ದರು.
ಗುರುವಾಯೂರು ದೇವಾಲಯದ ಪವಿತ್ರ ಕೊಳದಲ್ಲಿ ರೀಲ್ ಮಾಡಿದ್ದ ವ್ಲಾಗರ್
ಕೆಲವು ದಿನಗಳ ಹಿಂದೆ ಹಿಂದೂಯೇತರ ವ್ಲಾಗರ್ ಜಾಸ್ಮಿನ್ ಜಾಫರ್ ಗುರುವಾಯೂರು ದೇವಾಲಯದ ಕೊಳಕ್ಕೆ ಪ್ರವೇಶಿಸಿ ರೀಲ್ ಚಿತ್ರೀಕರಿಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ನಂತರ ದೇವಸ್ಥಾನದಲ್ಲಿ ಶುದ್ಧೀಕರಣ ವಿಧಿಗಳನ್ನು ನಡೆಸಲಾಗಿತ್ತು. ಜಾಸ್ಮಿನ್ ಜಾಫರ್ ಕ್ಷಮೆಯನ್ನೂ ಕೋರಿ ರೀಲ್ ಡಿಲೀಟ್ ಮಾಡಿದ್ದರು. ಹಿಂದಿನಿಂದಲೂ ಹಿಂದೂಯೇತರರಿಗೆ ಈ ದೇವಾಲಯಕ್ಕೆ ಪ್ರವೇಶವಿಲ್ಲ.