ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Tickets: ಐಪಿಎಲ್ ಟಿಕೆಟ್ ಕೇಳ್ತಿರುವ ಶಾಸಕರಿಗೆ ನಾಚಿಕೆ ಆಗಬೇಕು: ಯತ್ನಾಳ್‌ ಕಿಡಿ

ಕೋಲಾರ ನಗರದಲ್ಲಿ ಶ್ರೀರಾಮ‌ ಸೇನಾ ವತಿಯಿಂದ ಶ್ರೀರಾಮ ನವಮಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿದ್ದಾರೆ. ಶಾಸಕರ ಇಂತಹ ನಡವಳಿಕೆಯಿಂದ ವಿಧಾನಸಭೆಯ ಘನತೆ ಕಡಿಮೆ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಐಪಿಎಲ್ ಟಿಕೆಟ್ ಕೇಳ್ತಿರುವ ಶಾಸಕರಿಗೆ ನಾಚಿಕೆ ಆಗಬೇಕು: ಯತ್ನಾಳ್‌ ಕಿಡಿ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌. -

Prabhakara R
Prabhakara R Mar 27, 2026 11:08 PM

ಕೋಲಾರ: ಕೆಲವು ನಾಚಿಕೆಗೇಡಿ ಶಾಸಕರು ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ ಬೇಕು, ಕ್ರೀಡಾಂಗಣದಲ್ಲಿ ವಿಐಪಿ ಕುರ್ಚಿ ಹಾಕಬೇಕು ಎಂದು ಬೇಡಿಕೆ ಇಟ್ಟಿರುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಯಬೇಕಾದ ಕಡೆ ಅಸಂಬದ್ಧ ಮಾತು ಬೇಕಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

ನಗರದಲ್ಲಿ ಶ್ರೀರಾಮ‌ ಸೇನಾ ವತಿಯಿಂದ ಶ್ರೀರಾಮ ನವಮಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಾಸಕ ಮಾತನಾಡಿದ್ದಾರೆ. ದುಡ್ಡು ಕೊಟ್ಟು ಬಂದು ಕುರ್ಚಿ ಪಡೆಯಲು ಹಣ ಕೊಡುವ ಮಂದಿ ಮತ್ತೇನು ಮಾತನಾಡುತ್ತಾರೆ? ಸದನದಲ್ಲಿ ಶಾಸಕರ ಹಾಜರಿಯೂ ದಿನೆ ದಿನೇ ಕುಸಿಯುತ್ತಿದೆ. ಹೀಗಾಗಿ ವಿಧಾನಸಭೆಯ ಘನತೆ ಕಡಿಮೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೇ ತಿಂಗಳಲ್ಲಿ ರಾಜ್ಯಮಟ್ಟದ ಜಾಗೃತ ಹಿಂದೂ ಸಮಾಜೋತ್ಸವ

ಮುಂದಿನ ಮೇ ತಿಂಗಳಲ್ಲಿ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಜಾಗೃತ ಹಿಂದೂ ಸಮಾಜೋತ್ಸವ ನಡೆಸಲಾಗುತ್ತದೆ ಎಂದು ಬಿಜಾಪುರದ ಶಾಸಕ ಯತ್ನಾಳ್ ಹೇಳಿದರು.

ಶ್ರೀರಾಮನವಮಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾಕಿಸ್ತಾನ್ ಮಾದರಿಯ ಸರ್ಕಾರವಿದ್ದು ಬಜೆಟ್‌ನ್ನು ಮುಸ್ಲಿಮರಿಗೆ ಸೀಮಿತ ಮಾಡಲಾಗಿದ್ದು ದಲಿತರು ಮತ್ತು ಹಿಂದುಳಿದವರಿಗೆ ಏನೂ ಸಿಕ್ಕಿಲ್ಲ ಎಂದರು. ರಂಜಾನ್‌ಗೆ ಕರ್ನಾಟಕದ ಯಾವುದೇ ಭಾಗದಲ್ಲಿ ಕಲ್ಲು ತೂರಾಟ ಆಗಿಲ್ಲವಾದರೂ ಗಣೇಶ ಮತ್ತು ಶ್ರೀರಾಮನವಮಿಗೆ ಮಾತ್ರ ಕಲ್ಲು ಯಾಕೆ ಬೀಳುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪೈಲ್ವಾನ್‌ಗೆ ಪ್ಯಾಕೇಜ್

ದಾವಣಗೆರೆಯಲ್ಲಿ ಸಿಎಂ ಮತ್ತು ಡಿಸಿಎಂ ಅವರು ಸಾದಿಕ್‌ ಪೈಲ್ವಾನ್‌ಗೆ ಪ್ಯಾಕೇಜ್ ನೀಡಿರುವುದರಿಂದಾಗಿ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಈ ಹಿಂದೆ ನಾನೇ ಟಿಕೇಟ್ ಕೊಡಿಸಿದ್ದು, ಈಗಲೂ ನಾನು ಹೋಗಿ ಪ್ರಚಾರ ಮಾಡುತ್ತೇನೆ.

ದಾವಣಗೆರೆಯಲ್ಲಿ ಎಲ್ಲ ಮುಸ್ಲಿಮರೂ ಕಾಂಗ್ರೆಸ್‌ಗೆ ಓಟ್ ಹಾಕುತ್ತಾರೆಂದು ಸರ್ಕಾರ ತಿಳಿದಿದ್ದು, ಅದು ಹಾಗೆ ಆಗುವುದಿಲ್ಲ ಎಂದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಹೋದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಯತ್ನಾಳ್ ನುಡಿದರು.

ಡಿಸಿಎಂ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಡೆದುಕೊಂಡ ರೀತಿ ಕೊತ್ವಾಲ್ ರಾಮಚಂದ್ರನ ರೌಡಿ ವರ್ತನೆಯನ್ನು ನೆನಪಿಸುವಂತೆ ಮಾಡಿದೆ. ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಇಂತಹವರು ಮುಖ್ಯಮಂತ್ರಿ ಆದರೆ ಗತಿಯೇನು? ಡಿಕೆ ಸಿಎಂ ಆಗಬೇಕೆಂದು ನಮ್ಮವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದು, ಕೇಂದ್ರದವರು ಒಪ್ಪದ ಕಾರಣ ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ನನ್ನನ್ನು ಬೆಳೆಸಿದ ಪಕ್ಷವಾಗಿದ್ದು, ಹೀಗಾಗಿ ನಾನೆಂದೂ ಬಿಜೆಪಿಗನಾಗಿದ್ದು, ಯಡಿಯೂರಪ್ಪ ಮಾದರಿಯಲ್ಲಿ ಪಕ್ಷ ತೊರೆಯುವ ಮಾತೇ ಇಲ್ಲ ಎಂದು ತಿಳಿಸಿದರು.

ಒಳ ಮೀಸಲಾತಿ ಸರಿಯಾಗಿ ಆಗದ ಕಾರಣ ಎಡ, ಬಲ ಜತೆಗೆ ಬಂಜಾರ, ಭೋವಿ, ಭಜಂತ್ರಿ ಸೇರಿ ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಸ್ಲಿಮರ ಧರ್ಮಾಧಾರಿತ ಮೀಸಲಾತಿ ತೆಗೆದು ದಲಿತರಿಗೆ ಕೊಟ್ಟರೆ ಒಳಮೀಸಲಾತಿಗೆ ನ್ಯಾಯ ಸಿಕ್ಕುತ್ತದೆ. ಮುಸ್ಲಿಮರ ಮೀಸಲಾತಿ ವಿರುದ್ಧ ಪಶ್ಚಿಮ ಬಂಗಾಳ ಮತ್ತು ಆಂಧ್ರದ ಕೋರ್ಟ್ನಲ್ಲಿ ಈಗಾಗಲೇ ಹೋರಾಟ ನಡೆಯುತ್ತಿದೆ ಎಂದು ಶಾಸಕ ಯತ್ನಾಳ್ ಮಾಹಿತಿ ನೀಡಿದರು.