ಕೋಲಾರದಲ್ಲಿ ಟಾಟಾ-ಏರ್‌ಬಸ್ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ-ಮ್ಯಾಕ್ರನ್ ಚಾಲನೆ
Tata-Airbus H125 Helicopter Unit: ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ.
ಕೋಲಾದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಚಾಲನೆ. -
ಕೋಲಾರ, ಫೆ.17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ-ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ (Tata-Airbus H125 Helicopter Unit) ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಮಂಗಳವಾರ ವರ್ಚುವಲ್ ಆಗಿ ಚಾಲನೆ ನೀಡಿದರು. ಇದು ದೇಶದಲ್ಲೇ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್‌ಗಳನ್ನು ಇಲ್ಲಿ ತಯಾರಿಸಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳೂ ರೂಪುಗೊಂಡಿವೆ.
ವೇಮಗಲ್ ಕೈಗಾರಿಕಾ ಪ್ರದೇಶವು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪವಿರುವುದು ಈ ಸ್ಥಳ ಆಯ್ಕೆಗೂ ಪ್ರಮುಖ ಕಾರಣವಾಗಿದೆ. ಈ ಘಟಕ ಆರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಳವಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ. ರಾಷ್ಟ್ರಮಟ್ಟದಲ್ಲಿ ಕೋಲಾರ ಜಿಲ್ಲೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆ ಇದಾಗಿದೆ.
ಕೋಲಾರ ತಾಲೂಕಿನ ವೇಮಗಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ನಮ್ಮ ಆರ್ಥಿಕ ನೀತಿಯ ಮೂಲಾಧಾರಗಳಾಗಿವೆ. ಖಾಸಗಿ ವಲಯವು ರಕ್ಷಣಾ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ನಾವು ಅನೇಕ ಸುಧಾರಣೆಗಳನ್ನು ತಂದಿದ್ದೇವೆ. ಹಿಂದೆ ರಕ್ಷಣಾ ಉತ್ಪಾದನೆಯು ಕೇವಲ ಸಾರ್ವಜನಿಕ ವಲಯಕ್ಕೆ ಸೀಮಿತವಾಗಿತ್ತು. ಆದರೆ ಈಗ ಒಟ್ಟು ಉತ್ಪಾದನೆಯಲ್ಲಿ ಸುಮಾರು ಕಾಲು ಭಾಗದಷ್ಟು ಖಾಸಗಿ ವಲಯದಿಂದ ಬರುತ್ತಿದೆ. ನಮ್ಮ ರಕ್ಷಣಾ ರಫ್ತು ಕೂಡ ಗಣನೀಯವಾಗಿ ಹೆಚ್ಚಾಗಿದ್ದು, ಭಾರತವು ಇಂದು ವಿಶ್ವದ ಅಗ್ರ ರಫ್ತುದಾರರ ಪಟ್ಟಿಯಲ್ಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಿಂದ ಸುಮಾರು 1000 ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆಯಾಗುವ ನಿರೀಕ್ಷೆಯಿದೆ. ಇದು ನಮ್ಮ ಯುವ ಪೀಳಿಗೆಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹವೆಂದು ಹೆಸರುವಾಸಿಯಾಗಿರುವ ಈ ಹೆಲಿಕಾಪ್ಟರ್‌ಗಳು ಈಗ ಭಾರತದಲ್ಲಿ ತಯಾರಾಗುತ್ತಿರುವುದು ಹೆಮ್ಮೆಯ ವಿಷಯ. ಟಾಟಾ ಮತ್ತು ಏರ್‌ಬಸ್ ಈಗಾಗಲೇ C-295 ಸಾರಿಗೆ ವಿಮಾನ ಯೋಜನೆಯಲ್ಲಿ ಯಶಸ್ವಿಯಾಗಿ ಸಹಕರಿಸುತ್ತಿವೆ. ಭಾರತ ಮತ್ತು ಫ್ರಾನ್ಸ್ ನಡುವಿನ ಈ ಸಹಯೋಗವು ‘ಮೇಕ್ ಇನ್ ಇಂಡಿಯಾ’ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದವರು ತಿಳಿಸಿದ್ದಾರೆ.
Rahul Gandhi: ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಬಿಜೆಪಿಯ ಮಾನನಷ್ಟ ಮೊಕದ್ದಮೆ ವಜಾ ಮಾಡಿದ ಹೈಕೋರ್ಟ್
ಕಾರ್ಯಕ್ರಮದಲ್ಲಿ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವಾಟ್ರಿನ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ಸೇರಿ ಮತ್ತಿತರರು ಉಪಸ್ಥಿತರಿದ್ದರು.