ಗಂಗಾಸಾಗರ್ ಕದನದ ಶೌರ್ಯಗಾಥೆ; ಬಾಲಿವುಡ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ ಕನ್ನಡಿಗರ ‘ಪರಂ ವೀರ್’ ಸಿನಿಮಾ
‘ಪರಂ ವೀರ್’ ಚಿತ್ರವು ಭಾರತೀಯ ಸೈನ್ಯದ ಐತಿಹಾಸಿಕ ಗಂಗಾಸಾಗರ್ ಕದನದ ನೈಜ ಶೌರ್ಯಗಾಥೆಯನ್ನು ತೆರೆದಿಡಲು ಸಜ್ಜಾಗಿದೆ. ಕರುನಾಡಿನ ಹೆಮ್ಮೆಯ ನಿರ್ಮಾಪಕ ಸಾಗರ್ ಗೌಡ ಬಾಲಿವುಡ್‌ಗೆ ಭರ್ಜರಿ ಪ್ರವೇಶ ನೀಡಿದ್ದು, ವರ್ಧನ್ ಪುರಿ ನಾಯಕನಾಗಿ ನಟಿಸಿದ್ದಾರೆ.
-
ಭಾರತೀಯ ಸೇನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿರುವ ಐತಿಹಾಸಿಕ ‘ಗಂಗಾಸಾಗರ್ ಕದನ’ದ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ‘ಪರಂ ವೀರ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಖ್ಯಾತ ನಟ ವರ್ಧನ್ ಪುರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಸುಮಂತ್ ರಾತುರಿ ನಿರ್ದೇಶಿಸಿದ್ದು, ದೇಶಭಕ್ತಿಯ ಹಿನ್ನೆಲೆಯುಳ್ಳ ಕಥಾಹಂದರವನ್ನು ಬೆಳ್ಳಿಪರದೆಯ ಮೇಲೆ ಅನಾವರಣಗೊಳಿಸಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ.
ಕರುನಾಡ ಮೂಲದ ನಿರ್ಮಾಪಕ
ಭಾರತೀಯ ಸೈನಿಕರ ಅಪ್ರತಿಮ ಶೌರ್ಯ, ಸಾಹಸ ಹಾಗೂ ಬಲಿದಾನದ ಸತ್ಯಘಟನೆಯನ್ನು ಈ ಚಿತ್ರ ಒಳಗೊಂಡಿದೆ. ಮೈರಾಧಾ ಮೋಷನ್ ಪಿಕ್ಚರ್ಸ್ ಮತ್ತು ಎಚ್‌ವಿಜೆ ಮೀಡಿಯಾ ಜಂಟಿ ಬ್ಯಾನರ್ ಅಡಿಯಲ್ಲಿ ಸಾಗರ್ ಗೌಡ ಹಾಗೂ ಸುಮಂತ್ ರಾತುರಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಕರ್ನಾಟಕ ಮೂಲದ ನಿರ್ಮಾಪಕ ಸಾಗರ್ ಗೌಡ ಬಾಲಿವುಡ್ ಚಿತ್ರರಂಗಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ಹಿಂದಿ ಹಾಗೂ ಕನ್ನಡ ಸೇರಿದಂತೆ ದ್ವಿಭಾಷೆಯಲ್ಲಿ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕ ಸಾಗರ್ ಗೌಡ, "ಪರಂ ವೀರ್ ಕೇವಲ ಒಂದು ಸಿನಿಮಾ ನಿರ್ಮಾಣದ ಪ್ರಯತ್ನವಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಅಪ್ರತಿಮ ಭಾರತೀಯ ವೀರ ಯೋಧರ ಸಾಹಸಗಾಥೆಯನ್ನು ಇಂದಿನ ಸಮಾಜಕ್ಕೆ ತಲುಪಿಸುವ ಮತ್ತು ಮುಂದಿನ ಪೀಳಿಗೆಗೆ ಅವರ ತ್ಯಾಗದ ಮಹತ್ವವನ್ನು ಪರಿಚಯಿಸುವ ಒಂದು ಜವಾಬ್ದಾರಿಯುತ ಪ್ರಯತ್ನ" ಎಂದು ಹಂಚಿಕೊಂಡಿದ್ದಾರೆ.
ಅತ್ಯಾಧುನಿಕ ತಾಂತ್ರಿಕ ಗುಣಮಟ್ಟ
ಈ ಚಿತ್ರವು ಕೇವಲ ಬಲವಾದ ದೇಶಭಕ್ತಿಯ ಕಥಾವಸ್ತುವಷ್ಟೇ ಅಲ್ಲದೆ, ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದೊಂದಿಗೂ ಮೂಡಿಬರುತ್ತಿದೆ. ಅನುಭವಿ ತಂತ್ರಜ್ಞರ ತಂಡ ಚಿತ್ರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಛಾಯಾಗ್ರಹಣ, ಸಂಕಲನ, ಸಂಗೀತ ಮತ್ತು ಧ್ವನಿ ವಿನ್ಯಾಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಗುಣಮಟ್ಟಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಗಂಗಾಸಾಗರ್ ಕದನದ ರೊಮಾಂಚಕ ಕ್ಷಣಗಳನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ತೋರಿಸಲು ಚಿತ್ರತಂಡ ಪರಿಶ್ರಮವಹಿಸಿದೆಯಂತೆ.
Ajay Devgn: ʼಸು ಫ್ರಮ್ ಸೋʼ ವೀಕ್ಷಿಸಿದ ಬಾಲಿವುಡ್ ಸ್ಟಾರ್ ಅಜಯ್ ದೇವಗನ್; ಬಾಲಿವುಡ್‌ಗೆ ರಿಮೇಕ್ ಆಗುತ್ತಾ?
ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆ
ಇತ್ತೀಚೆಗಷ್ಟೇ ಚಿತ್ರದ ಮೋಷನ್ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಅಂತಿಮ ಹಂತದ ಕೆಲಸಗಳು ಮುಗಿದ ಬೆನ್ನಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.