Malur Vote Recount: ಮಾಲೂರು ಕ್ಷೇತ್ರದ ಮರು ಮತ ಎಣಿಕೆ; ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಆಯ್ಕೆ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ದವಾಗಿ ನಡೆದಿಲ್ಲ ಎಂದು ಆರೋಪಿಸಿ ಮಾಲೂರು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು 2025ರ ಸೆಪ್ಟೆಂಬರ್‌ನಲ್ಲಿ ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನೆ ಮಾಡಿ ಶಾಸಕ ನಂಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮರು ಮತ ಎಣಿಕೆಯ ಫಲಿತಾಂಶ ಹೊರಬಿದ್ದಿದೆ.
ಮಾಲೂರು ಶಾಸಕ ಕೆ.ವೈ.ನಂಜೇಗೌಡ -
ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಭ್ಯರ್ಥಿ ಕೆ.ವೈ. ನಂಜೇಗೌಡ (K.Y. Nanje Gowda) ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಮರು ಮತ ಎಣಿಕೆಯಲ್ಲಿ (Malur Vote Recount) ನಂಜೇಗೌಡ ಅವರು ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಕ ಬಾಗ್ನಿ ಅವರಿದ್ದ ಪೀಠವು ತಿಳಿಸಿದ್ದು, ಇದೇ ವೇಳೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿದೆ.
ಚುನಾವಣಾ ಆಯೋಗವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ಮರು ಮತ ಎಣಿಕೆಯ ಫಲಿತಾಂಶವನ್ನು ಅರ್ಜಿದಾರರು-ಪ್ರತಿವಾದಿಗಳ ಸಮ್ಮುಖದಲ್ಲಿ ತೆರೆದ ನ್ಯಾಯಪೀಠವು, ಮತಗಳ ಮರುಎಣಿಕೆಯ ನಂತರವೂ ನಂಜೇಗೌಡ ಅಧಿಕ ಮತಗಳನ್ನು ಗಳಿಸಿದ್ದಾರೆ ಎಂದು ಗಮನಿಸಿತು. ಮರು ಮತ ಎಣಿಕೆಯಲ್ಲಿ ನಂಜೇಗೌಡ 50,957 ಮತಗಳನ್ನು ಮತ್ತು ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದಾರೆ. ಎಣಿಕೆ ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಕಡ್ಡಾಯವೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ದವಾಗಿ ನಡೆದಿಲ್ಲ, ಅಕ್ರಮ ಎಸಗಲಾಗಿದೆ' ಎಂದು ಆರೋಪಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನೆ ಮಾಡಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೀಗಾಗಿ ಕ್ಷೇತ್ರದ ಮತಗಳನ್ನು ನಾಲ್ಕು ವಾರಗಳಲ್ಲಿ ಪುನಃ ಎಣಿಕೆ ಮಾಡಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸದ್ಯ ಸುಪ್ರೀಂ ಕೋರ್ಟ್ ಫಲಿತಾಂಶ ಬಹಿರಂಗ ಪಡಿಸಿದೆ. ಒಟ್ಟು 250 ಮತಗಳ ಅಂತರದಲ್ಲಿ ಕೆ ವೈ ನಂಜೇಗೌಡ ಗೆಲುವು ಸಾಧಿಸಿದ್ದಾರೆ. ಇನ್ನು 2023 ರಲ್ಲಿ ಮತ ಎಣಿಕೆಯಾಗಿದ್ದಾಗ 248 ಮತಗಳಿಂದ ಜಯಗಳಿದ್ದರು. ಈ ಬಾರಿ 2 ಮತ ಹೆಚ್ಚು ಲಭಿಸಿವೆ.