ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KPSC: ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆ ರದ್ದು; ಮಹತ್ವದ ಆದೇಶ ಹೊರಡಿಸಿದ ಕೆಎಸ್‌ಎಟಿ

KSAT: ರಾಜ್ಯ ಸರ್ಕಾರ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ. 50ರಿಂದ ಶೇ. 56ಕ್ಕೆ ಹೆಚ್ಚಿಸಿರುವುದರಿಂದ 384 ಗೆಜೆಟೆಡ್‌ ಪ್ರೊಬೆಷನರ್‌ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಕಳೆದ ವರ್ಷ ಫೆಬ್ರವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ.

ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆ ರದ್ದು

Ramesh B Ramesh B Jun 5, 2025 4:30 PM

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ. 50ರಿಂದ ಶೇ. 56ಕ್ಕೆ ಹೆಚ್ಚಿಸಿರುವುದರಿಂದ 384 ಗೆಜೆಟೆಡ್‌ ಪ್ರೊಬೆಷನರ್‌ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಕಳೆದ ವರ್ಷ ಫೆಬ್ರವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ (KSAT) ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರಿಂದ ಕೆಎಎಸ್‌ ಅಧಿಕಾರಿಗಳ ನೇಮಕ ಅತಂತ್ರಕ್ಕೆ ಸಿಲುಕಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ.ಎನ್‌.ಮಧು ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಆರ್‌.ಬೂದಿಹಾಳ್‌ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್‌ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

“ಕೆಎಎಸ್‌ ಹುದ್ದೆಗಳ ಭರ್ತಿ ಜತೆಗೆ 2022ರ ಡಿ. 12ರಂದು ರಾಜ್ಯ ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ಕೆಎಸ್‌ಎಟಿ ರದ್ದುಗೊಳಿಸಿದ್ದು, ಪ್ರತಿವಾದಿ ಕೆಪಿಎಸ್‌ಸಿ ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸ್ವತಂತ್ರವಾಗಿದೆ” ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Guest Lecturers: ಅತಿಥಿ ಉಪನ್ಯಾಸಕರಿಗೆ ಗುಡ್‌ ನ್ಯೂಸ್‌; 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಆದೇಶ

“2022ರ ಅ. 23ರಂದು ಅಂದಿನ ರಾಜ್ಯ ಸರ್ಕಾರ (ಬಸವರಾಜ ಬೊಮ್ಮಾಯಿ ನೇತೃತ್ವದ) ಹೊರಡಿಸಿದ್ದ ಸುಗ್ರೀವಾಜ್ಞೆಯು ಮೀಸಲು ಪ್ರಮಾಣವನ್ನು ಶೇ. 50ರಿಂದ ಶೇ. 56ಕ್ಕೆ ಹೆಚ್ಚಿಸಿದೆ. ಅದನ್ನು ಆಧರಿಸಿ 2022ರ ಡಿ. 28ರಂದು ಸರ್ಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್‌ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿಲ್ಲ. ಹೀಗಾಗಿ ಅದರ ಆಧಾರದ ಮೇಲೆ ರಚಿಸಲಾದ 2023ರ ನಿಯಮಾವಳಿ ರಚನೆ ಊರ್ಜಿತವಲ್ಲ” ಎಂದು ಕೆಎಸ್‌ಎಟಿ ತಿಳಿಸಿದೆ.

“ಇಂದಿರಾ ಸಹಾನಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಒಟ್ಟು ಮೀಸಲು ಪ್ರಮಾಣ ಶೇ. 50ರಷ್ಟು ಮೀರುವಂತಿಲ್ಲ ಎಂದು ಮಿತಿ ಹೇರಿದೆ. ಅದಾದ ಬಳಿಕ ಈವರೆಗೆ ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪಿನಲ್ಲಿ ಶೇ. 50ರ ಮಿತಿ ದಾಟುವಂತೆ ಹೇಳಿಲ್ಲ. ಆದರೂ ಕೆಲವು ರಾಜ್ಯಗಳು ಮೀಸಲಾತಿ ಹೆಚ್ಚಿಸಿವೆ. ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ” ಎಂದೂ ಕೆಎಸ್‌ಎಟಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ. 18ರಿಂದ ಶೇ. 24ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ಆಧರಿಸಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಿತ್ತು. ಆನಂತರ ಅದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ ಕೆಎಎಸ್‌ಎಟಿ ಮೊರೆ ಹೋಗಿದ್ದರು.

ಕೆಎಎಸ್‌ ಅಧಿಕಾರಿಗಳ ನೇಮಕಕ್ಕೆ ಮುಖ್ಯ ಪರೀಕ್ಷೆ ನಡೆದು ಇನ್ನೇನು ಫಲಿತಾಂಶ ಹೊರ ಬೀಳಬೇಕಿದೆ. ಈ ಹಂತದಲ್ಲಿ ಕೆಎಸ್‌ಎಟಿ ಆದೇಶ ಹೊರ ಬಿದ್ದಿದೆ.