ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ರಾಜ್ಯಗಳದ್ದು ಪ್ರಮುಖ ಪಾತ್ರವಾಗಿದೆ. ಜಿಎಸ್‌ಟಿ ಕಾಯ್ದೆಗೆ ಸಂಬಂಧಪಟ್ಟಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜ್ಯಗಳ ಪ್ರಾತಿನಿಧ್ಯ 2/3 ರಷ್ಟಿದ್ದರೆ ಕೇಂದ್ರದ ಪ್ರಾತಿನಿಧ್ಯ 1/3ಗೆ ಮಾತ್ರ ಸೀಮಿತ. ಜಿಎಸ್‌ಟಿಗೆ ಸಂಬಂಧಪಟ್ಟಿರುವ ನಿರ್ಧಾರ ಗಳನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ.

ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಮೋಹನ್‌ ವಿಶ್ವ ಮೋಹನ್‌ ವಿಶ್ವ Jul 26, 2025 4:47 AM

ವೀಕೆಂಡ್‌ ವಿತ್‌ ಮೋಹನ್

camohanbn@gmail.com

ನೋಟು ಅಮಾನ್ಯೀಕರಣವಾದ ನಂತರ, ಡಿಜಿಟಲ್ ಇಂಡಿಯಾ ಭಾರತದಲ್ಲಿ ದೊಡ್ಡದೊಂದು ಕ್ರಾಂತಿಯನ್ನೇ ಮಾಡಿದೆ. ಜಗತ್ತಿನ ಅನೇಕ ದೇಶಗಳು ಭಾರತದ ಡಿಜಿಟಲ್ ಕ್ರಾಂತಿಯನ್ನು ಕಂಡು ಬೆಚ್ಚಿಬಿದ್ದಿವೆ. ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುವ ವ್ಯಕ್ತಿ- ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಬಳಸುತ್ತಾನೆ. ಹಣ್ಣು, ತರಕಾರಿ ಮಾರುವ ಸಣ್ಣ ವ್ಯಾಪಾರಿಗಳು ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ.

ಮನೆಯಿಂದ ಹೊರಗೆ ಹೋದರೆ ಜೇಬಿನಲ್ಲಿ ಹಣ ತೆಗೆದುಕೊಂಡು ಹೋಗಬೇಕಿಲ್ಲ, ಮೊಬೈಲ್ ಇದ್ದರೆ ಸಾಕು ವ್ಯಾಪಾರ ಮಾಡಬಹುದು. ಎಟಿಎಂ ಕಾರ್ಡುಗಳ ಬಳಕೆ ನಿಂತು ಹೋಗಿದೆ. ಡಿಜಿಟಲ್ ಇಂಡಿಯಾ ಮೂಲಕ ಭಾರತದ ಆರ್ಥಿಕತೆಯಲ್ಲಿ ದೊಡ್ಡಮಟ್ಟದ ಪಾರದರ್ಶಕತೆ ಕಂಡುಬಂದಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದ ಜಿಎಸ್‌ಟಿ ಅಧಿಕಾರಿಗಳು ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಕಂಪನಿಗಳಿಂದ ಮಾಹಿತಿ ಸಂಗ್ರಹ ಮಾಡಿ ಸಣ್ಣ ವ್ಯಾಪಾರಿಗಳಿಗೆ ಸುಖಾಸುಮ್ಮನೆ ನೋಟಿಸ್ ಜಾರಿ ಮಾಡಿ ಲಕ್ಷಾಂತರ ರುಪಾಯಿ ತೆರಿಗೆ ಕಟ್ಟುವಂತೆ ತಾಕೀತು ಮಾಡಿದರು.

ನೋಟಿಸ್ ಜಾರಿ ಮಾಡಿರುವುದು ಕರ್ನಾಟಕ ಸರಕಾರ, ಆದರೆ ಕಾಂಗ್ರೆಸ್ಸಿಗರು ಯಥಾಪ್ರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. 2017ರಲ್ಲಿ ಜಿಎಸ್‌ಟಿ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ತೆರಿಗೆ ನೀತಿ ಜಾರಿಗೆ ಬಂತೆಂಬಂತೆ ರಾಹುಲ್ ಗಾಂಧಿ ಸುಳ್ಳನ್ನು ಹೇಳಿದ್ದರು. ಅವರು ಹೇಳಿದ ಸುಳ್ಳನ್ನು ಕಾಂಗ್ರೆಸ್ಸಿಗರು ಸತತವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: Mohan Vishwa Column: ಮತಬ್ಯಾಂಕ್‌ ರಾಜಕಾರಣಕ್ಕೆ ಆರೆಸ್ಸೆಸ್‌ ಟೀಕೆ

ತೆರಿಗೆ ಎಂಬುದು ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿದೆ. ಸ್ವಾತಂತ್ರ್ಯಾನಂತರ ತೆರಿಗೆಗೆ ಸಂಬಂಧಪಟ್ಟ ಕಾನೂನುಗಳನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದದ್ದು ಕಾಂಗ್ರೆಸ್ ಪಕ್ಷ. 2017ರಲ್ಲಿ ಜಿಎಸ್‌ಟಿ ಕಾಯ್ದೆ ಜಾರಿಗೆ ಬರುವ ಮುಂಚೆ ಒಂದು ವಸ್ತುವಿನ ಮೇಲೆ ಅಬಕಾರಿ ತೆರಿಗೆ, ಸೇವಾ ತೆರಿಗೆ, ರಾಜ್ಯ ಸರಕು ಮಾರಾಟ ತೆರಿಗೆ, ಕೇಂದ್ರ ಸರಕು ಮಾರಾಟ ತೆರಿಗೆ, ಪ್ರವೇಶ ತೆರಿಗೆ, ಮನರಂಜನಾ ತೆರಿಗೆ, ಆಮದು ಸುಂಕ, ಐಷಾರಾಮಿ ತೆರಿಗೆ, ಜಾಹೀರಾತು ತೆರಿಗೆ, ಖರೀದಿ ತೆರಿಗೆ, ಲಾಟರಿ ತೆರಿಗೆ ಸೇರಿ 16 ಮಾದರಿಯ ತೆರಿಗೆಗಳನ್ನು ವಿವಿಧ ಹಂತಗಳಲ್ಲಿ ಕಟ್ಟಬೇಕಿತ್ತು. ನಾವು ಖರೀದಿಸುವ ವಸ್ತುಗಳ ಮೇಲೆ ಕಡಿಮೆ ಎಂದರೂ 10 ರೀತಿಯ ತೆರಿಗೆಗಳನ್ನು ಕಟ್ಟಬೇಕಿತ್ತು.

ಕಾಂಗ್ರೆಸ್ ಅವಧಿಯಲ್ಲಿ ಹೇರುತ್ತಿದ್ದಂಥ 16 ಮಾದರಿಯ ತೆರಿಗೆಗಳನ್ನು ರದ್ದುಗೊಳಿಸಿ 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. ಸಮಾಜದಲ್ಲಿ ಜಿಎಸ್‌ಟಿ ಬಗ್ಗೆ ಕಾಂಗ್ರೆಸ್ಸಿಗರು ಎಬ್ಬಿಸಿರುವ ಗೊಂದಲಗಳು ಒಂದೊಂದಲ್ಲ. ಜನಸಾಮಾನ್ಯರಿಗೆ ಹೆಚ್ಚಿನ ತೆರಿಗೆ ಜ್ಞಾನ ಇಲ್ಲವೆಂದುಕೊಂಡಿರುವ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸುತ್ತಾ ಬಂದಿದೆ. ಜಿಎಸ್ ಟಿಯನ್ನು 2010ರ ಏಪ್ರಿಲ್ ತಿಂಗಳಿಂದ ಜಾರಿಗೆ ತರುತ್ತೇವೆಂದು 2006ರ ಬಜೆಟ್‌ನಲ್ಲಿ ಮೊಟ್ಟಮೊದಲ ಬಾರಿಗೆ ಹೇಳಿದ್ದು ಕಾಂಗ್ರೆಸ್ಸಿನ ವಿತ್ತಸಚಿವರಾಗಿದ್ದ ಪಿ.ಚಿದಂಬರಂ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜಿಎಸ್‌ಟಿ ಜಾರಿಗೆ ತರಲು ಕಸರತ್ತು ನಡೆಸಿತ್ತು.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಪಾತ್ರ ಮಹತ್ವದ್ದಾಗಿದೆ. ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ರಾಜ್ಯಗಳದ್ದು ಪ್ರಮುಖ ಪಾತ್ರವಾಗಿದೆ. ಜಿಎಸ್‌ಟಿ ಕಾಯ್ದೆಗೆ ಸಂಬಂಧಪಟ್ಟಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜ್ಯಗಳ ಪ್ರಾತಿನಿಧ್ಯ 2/3 ರಷ್ಟಿದ್ದರೆ ಕೇಂದ್ರದ ಪ್ರಾತಿನಿಧ್ಯ 1/3ಗೆ ಮಾತ್ರ ಸೀಮಿತ. ಜಿಎಸ್‌ಟಿಗೆ ಸಂಬಂಧಪಟ್ಟಿರುವ ನಿರ್ಧಾರಗಳನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ.

ಮಂಡಳಿಯಲ್ಲಿ ಎಲ್ಲಾ ರಾಜ್ಯದ ಪ್ರತಿನಿಧಿಗಳೂ ಭಾಗವಹಿಸುತ್ತಾರೆ. ಮಂಡಳಿಯಲ್ಲಿ ತೆಗೆದು ಕೊಳ್ಳುವ ನಿರ್ಧಾರಗಳನ್ನು ಮತಕ್ಕೆ ಹಾಕಿ ನಂತರವಷ್ಟೇ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತದೆ. ವಸ್ತುವಿನ ಮೇಲಿನ ಜಿಎಸ್ ಟಿಯನ್ನು ಏರಿಸುವ ಅಥವಾ ಇಳಿಸುವ ಅಽಕಾರ ಜಿಎಸ್‌ಟಿ ಮಂಡಳಿಗೆ ಮಾತ್ರವೇ ಇದೆ. ಈ ನಿರ್ಧಾರವನ್ನು ಕೇಂದ್ರ ಸರಕಾರ ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಜಿಎಸ್‌ಟಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಮಂಡಳಿಗಿದೆ. ಆದರೆ ಆಯಾ ರಾಜ್ಯಗಳ ಒಳಗೆ ನಡೆಯುವ, ಜಿಎಸ್‌ಟಿ ಆಡಳಿತಕ್ಕೆ ಸಂಬಂಧಪಟ್ಟ ದಿನನಿತ್ಯದ ವಿಷಯಗಳ ಬಗೆಗಿನ ನಿರ್ಧಾರ ತೆಗೆದುಕೊಳ್ಳುವ ಹೆಚ್ಚಿನ ಅಧಿಕಾರ ರಾಜ್ಯ ಸರಕಾರದ ಅಧಿಕಾರಿ ಗಳಿಗಿರುತ್ತದೆ.

ರಾಜ್ಯದ ಒಳಗಿರುವ ವ್ಯಾಪಾರಿಗಳ ಮೇಲಿನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವುದು ಆಯಾ ರಾಜ್ಯಗಳು. ಕರ್ನಾಟಕದಲ್ಲಿರುವ ವರ್ತಕರಿಗೆ ನೋಟಿಸ್ ನೀಡಿರುವುದು ರಾಜ್ಯ ಸರಕಾರ. ನೋಟಿಸ್‌ನ ಮೇಲ್ಭಾಗವನ್ನು ನೋಡಿದರೆ ರಾಜ್ಯ ಸರಕಾರದ ಹೆಸರು ಕಣ್ಣಿಗೆ ರಾಚುತ್ತದೆ.

2025-26ರ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಹೇಳಿರುವಂತೆ ಮಾರಾಟ ತೆರಿಗೆಯಿಂದ ಅಂದಾಜು 120000 ಕೋಟಿ ರು. ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಅಂದರೆ ತಿಂಗಳಿಗೆ ಅಂದಾಜು 10000 ಕೋಟಿ ರು. ತೆರಿಗೆ ಸಂಗ್ರಹದ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ 30000 ಕೋಟಿ ರು. ಸಂಗ್ರಹವಾಗಬೇಕಿತ್ತು.

ಆದರೆ ಮೂರೂ ತಿಂಗಳಲ್ಲಿ ಶೇ. 87ರಷ್ಟು ಮಾತ್ರ ಸಂಗ್ರಹವಾಗಿದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರಕಾರ ಅಂದಾಜಿಸಿದಂತೆ ತೆರಿಗೆ ಸಂಗ್ರಹದ ಗುರಿಯನ್ನು ಮುಟ್ಟದ ಕಾರಣ, ಹೊಸ ವರ್ತಕರನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಲುವಾಗಿ 13000ಕ್ಕೂ ಅಧಿಕ ನೋಟಿಸ್‌ಗಳನ್ನು ನೀಡಲಾಗಿದೆ. ಈ ನೋಟಿಸ್‌ಗಳ ಮೂಲ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ. ನೋಟಿಸ್ ನೀಡುವ ಮೊದಲು ಸಣ್ಣ ವರ್ತಕರ ಆದಾಯದ ಮೂಲದ ಬಗ್ಗೆ ಚಿಂತಿಸದೆ, ತೆರಿಗೆ ಸಂಗ್ರಹದ ಏಕೈಕ ಗುರಿಯಿಂದ ರಾಜ್ಯ ಸರಕಾರ ಸಿಕ್ಕ ಸಿಕ್ಕವರಿಗೆ ನೋಟಿಸ್ ಜಾರಿ ಮಾಡಿದೆ.

ಸಣ್ಣ ವ್ಯಾಪಾರಿಗಳ ಬ್ಯಾಂಕಿನಲ್ಲಿ ಅವರ ದಿನನಿತ್ಯದ ವ್ಯವಹಾರದ ಹಣದ ಜತೆಗೆ ಸಾಲ ಪಡೆದು ಕೊಂಡ ಹಣವೂ ಸಂಗ್ರಹವಾಗುತ್ತದೆಯೆಂಬ ಸಾಮಾನ್ಯ ಜ್ಞಾನ ರಾಜ್ಯಸರಕಾರಕ್ಕಿಲ್ಲ. ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡುವ ಮುನ್ನ, ತೆರಿಗೆಗೆ ಸಂಬಂಧಪಟ್ಟಿರುವ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮಾಡಬೇಕಿತ್ತು.

ವ್ಯಾಪಾರಿಗಳಿಗೆ ಅರಿವು ಮೂಡಿಸದೆ ಏಕಾಏಕಿ ನೋಟಿಸ್ ನೀಡಿ ಲಕ್ಷಗಟ್ಟಲೆ ತೆರಿಗೆಯನ್ನು ಕಟ್ಟಬೇಕೆಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ಅಂತಾರಾಜ್ಯ ಸರಕು ಸಾಗಾಟಕ್ಕೆ ಹಿಡಿಯುವ ಸಮಯದಲ್ಲಿ ಬಹಳ ಉಳಿತಾಯವಾಗಿದೆ. ಹಿಂದಿನ ತೆರಿಗೆ ಪದ್ಧತಿಗಳಲ್ಲಿ ಸರಕುಗಳನ್ನು ಹೊತ್ತ ಲಾರಿಗಳು ರಾಜ್ಯಗಳ ಚೆಕ್‌ಪೋಸ್ ಗಳಲ್ಲಿ ದಿನಗಟ್ಟಲೆ ನಿಲ್ಲುತ್ತಿದ್ದವು. ಜಿಎಸ್‌ಟಿ ಜಾರಿಗೆ ಬಂದ ನಂತರ ಸರಕು ಸಾಗಾಟಕ್ಕೆ ಹಿಡಿಯುವ ಸಮಯದಲ್ಲಿ ಉಳಿತಾಯವಾಗಿರುವ ಪರಿಣಾಮ, ಲಾರಿಗಳ ತಿರುಗಿ ಬರುವಿಕೆ ಸಮಯ ಕಡಿಮೆಯಾಗಿದೆ.

ಸರಕನ್ನು ಲಾರಿಗೆ ಲೋಡ್ ಮಾಡುವ ಮುನ್ನವೇ ಅದರ ಸಂಖ್ಯೆ, ಸರಕಿನ ವಿವರವನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಮದ್ಯಗಳ ಮೇಲಿನ ಅಬಕಾರಿ ಸುಂಕ ಅನೇಕ ರಾಜ್ಯಗಳ ಪ್ರಮುಖ ಆದಾಯವಾಗಿದೆ. ಮಾರಾಟ ತೆರಿಗೆಯ ನಂತರ ಮದ್ಯದ ಮೇಲಿನ ಸುಂಕ ಕರ್ನಾಟಕದ ಪ್ರಮುಖ ಆದಾಯವಾಗಿದೆ. ಮದ್ಯದ ಮೇಲಿನ ತೆರಿಗೆ ಹಕ್ಕನ್ನು ರಾಜ್ಯ ಸರಕಾರಗಳು ಹೊಂದಿರುವ ಕಾರಣಕ್ಕೆ, ಮದ್ಯದ ಮೇಲೆ ಶೇ.100ರಿಂದ 200ರವರೆಗೂ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹಾಕುವ ಹಕ್ಕನ್ನು ರಾಜ್ಯಗಳಿಗೆ ನೀಡಲಾಗಿದೆ.

ಆಯಾ ರಾಜ್ಯಗಳು ತಮ್ಮ ಆದಾಯಕ್ಕೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮಾರಾಟ ತೆರಿಗೆಯನ್ನು ಹಾಕುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಸಾಲವಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಅಧಿಕವಾಗಿರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆನ್ನುವ ಚರ್ಚೆ ಬಹಳ ವರ್ಷಗಳಿಂದ ನಡೆಯುತ್ತಿದೆ.

2017ರಲ್ಲಿ ಜಿಎಸ್‌ಟಿ ಜಾರಿಯಾದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹಕ್ಕನ್ನು ಆಯಾ ರಾಜ್ಯಗಳು ಉಳಿಸಿಕೊಂಡಿದ್ದವು. ಪೆಟ್ರೋಲ್ ಮತ್ತು ಡೀಸೆಲ್ ಎರಡನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕಾದರೆ ದೇಶದ ಅಷ್ಟೂ ರಾಜ್ಯಗಳು ಜಿಎಸ್‌ಟಿ ಮಂಡಳಿಯಲ್ಲಿ ಒಪ್ಪಿಗೆ ನೀಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಒಂದೊಂದು ರಾಜ್ಯದಲ್ಲಿ ಒಂದು ತೆರಿಗೆಯ ದರವಿದೆ.

ಜಿಎಸ್‌ಟಿಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷಯದ ಬಗ್ಗೆ ಪ್ರಸ್ತಾಪಿಸಲೇಬೇಕು. ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರಕಾರ ಮಂಡಿಸುವ ಬಜೆಟ್‌ನಲ್ಲಿ ಜಿಎಸ್ ಟಿಗೆ ಸಂಬಂಧಿಸಿದ ನಿರ್ಣಯಗಳು ಕಾಣಿಸುವುದಿಲ್ಲ. ಜಿಎಸ್‌ಟಿ ಸಂಬಂಧಿತ ವಿಷಯಗಳನ್ನು ಕೇವಲ ಜಿಎಸ್‌ಟಿ ಮಂಡಳಿಯಲ್ಲಿ ನಿರ್ಧರಿಸಲಾಗುತ್ತದೆ.

ಫೆಬ್ರವರಿ ತಿಂಗಳ ಬಜೆಟ್ ಕೇವಲ ಕೇಂದ್ರ ಸರಕಾರದ ಬಜೆಟ್ ಆಗಿರುವ ಕಾರಣಕ್ಕೆ ಏಕಪಕ್ಷೀಯ ವಾಗಿ ಕೇಂದ್ರ ಸರಕಾರ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜಿಎಸ್‌ಟಿ ಸಂಬಂಧಿತ ವಿಷಯ ಗಳನ್ನು ಮಂಡಳಿಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ಚರ್ಚಿಸಿ ಮತಕ್ಕೆ ಹಾಕಿ ನಿರ್ಣಯ ಕೈಗೊಳ್ಳಬೇಕು. ವರ್ಷದಲ್ಲಿ ಅನೇಕ ಬಾರಿ ಮಂಡಳಿ ಸಭೆ ನಡೆಸಿ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ.

ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ತೆರಿಗೆ ವ್ಯಾಪ್ತಿ ಹೆಚ್ಚಾಗಿರುವ ಕಾರಣಕ್ಕೆ ಅನೇಕ ವಸ್ತುಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗಿದೆ. ಒಂದು ಕಾಲದಲ್ಲಿ ಅಮೆರಿಕದ ವೀಸಾ ಮತ್ತು ಮಾಸ್ಟರ್ ಕಾರ್ಡುಗಳು ಭಾರತದೊಳಗೆ ನಡೆಯುವ ಲಕ್ಷಾಂತರ ಕೋಟಿ ರುಪಾಯಿ ವಹಿವಾಟಿನ ಮೇಲೆ ಶೇ.ರಷ್ಟು ಶುಲ್ಕ ವಿಧಿಸಿ ಸಾವಿರಾರು ಕೋಟಿ ಹಣ ಗಳಿಸಿದ್ದವು.

ಯುಪಿಐ ಜಾರಿಗೆ ಬಂದ ನಂತರ ಅವರಿಗೆ ನೀಡುತ್ತಿದ್ದ ಶುಲ್ಕ ಕಡಿಮೆಯಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳ ವಹಿವಾಟಿನ ಮೇಲೆ ಅನೇಕ ಬ್ಯಾಂಕುಗಳು ಸಾಲ ನೀಡುತ್ತಿವೆ. ‘ಡಿಜಿಟಲ್ ಇಂಡಿಯಾ’ ಮೂಲಕ ಮನೆ ಮನೆಗೆ ತಲುಪಿರುವ ಯುಪಿಐ ವ್ಯವಸ್ಥೆಯನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ.