SL Bhyrappa: ಭೈರಪ್ಪ ನಿಧನದಿಂದ ಸ್ನೇಹಿತನನ್ನು ಕಳೆದುಕೊಂಡಷ್ಟೇ ನೋವಾಗಿದೆ: ಕೆ.ಎಸ್.ಭಗವಾನ್
KS Bhagawan: ಎಸ್.ಎಲ್. ಭೈರಪ್ಪ ಅವರು ನಮ್ಮ ಎದುರು ಮನೆಯಲ್ಲೇ ಇದ್ದರು. ನನ್ನ ಜತೆ ಬಹಳ ಪ್ರೀತಿ, ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಆದ್ದರಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ನಷ್ಟ ನನಗೆ ಹಾಗೂ ನಮ್ಮ ಮನೆಯರಿಗೆ ಆಗಿದೆ. ಭೈರಪ್ಪ ಅವರು ಅಮರವಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಕೆ.ಎಸ್.ಭಗವಾನ್ ತಿಳಿಸಿದ್ದಾರೆ.

-

ಮೈಸೂರು: ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ಅವರ ನಿಧನದಿಂದ ತುಂಬಾ ದುಃಖವಾಗಿದೆ. ಭೈರಪ್ಪ ಬಹಳ ಹೆಸರಾಂತ ಕಾದಂಬರಿಕಾರರು. ಜೀವನದ ಎಲ್ಲಾ ಮಗ್ಗಲುಗಳು, ಕಷ್ಟಗಳನ್ನು ತಮ್ಮ ಕಾದಂಬರಿಗಳಲ್ಲಿ ತುಂಬಾ ಆಳವಾಗಿ ಚಿತ್ರಿಸಿದ್ದರು. ವೈವಿಧ್ಯಮಯ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಬಹುಶಃ ಅವರಷ್ಟು ಜನಪ್ರಿಯವಾದ ಕಾದಂಬರಿಕಾರ ನಮ್ಮಲ್ಲಿ ಸದ್ಯಕ್ಕೆ ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರ ಅಗಲಿಕೆ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಷ್ಟೇ ನೋವು ತಂದಿದೆ ಎಂದು ವಿಮರ್ಶಕ, ಚಿಂತಕ ಕೆ.ಎಸ್.ಭಗವಾನ್ (KS Bhagawan) ತಿಳಿಸಿದ್ದಾರೆ.
ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಭೈರಪ್ಪ ಅವರು ನಮ್ಮ ಎದುರು ಮನೆಯಲ್ಲೇ ಇದ್ದರು. ನನ್ನ ಜತೆ ಬಹಳ ಪ್ರೀತಿ, ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಆದ್ದರಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ನಷ್ಟ ನನಗೆ ಹಾಗೂ ನಮ್ಮ ಮನೆಯರಿಗೆ ಆಗಿದೆ. ಭೈರಪ್ಪ ಅವರು ಅಮರವಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂಬ ನಂಬಿಕೆ ಇದೆ. ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ದುಃಖವಿದೆ, ಅವರು ತುಂಬು ಜೀವನವನ್ನು ನಡೆಸಿ, ಬದುಕನ್ನು ಸದುಪಯೋಗ ಪಡಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಾಹಿತ್ಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಭೈರಪ್ಪ ಅವರದ್ದು ಸಾಂಪ್ರದಾಯಿಕ ಬರವಣಿಗೆಯಾಗಿತ್ತು. ನನ್ನದು ಭಿನ್ನವಾಗಿತ್ತು, ಸಮಾಜದಲ್ಲಿನ ಜಾತಿ ತಾರತಮ್ಯ, ಭೇದ ಭಾವಗಳ ಬಗ್ಗೆ ನನ್ನ ಬರವಣಿಗೆ ಇದೆ. ಅವರ ಕಾದಂಬರಿಗಳಲ್ಲಿ ವಂಶವೃಕ್ಷ ನನಗೆ ಇಷ್ಟ. ಬಹಳ ಒಳ್ಳೆಯ ಕಾದಂಬರಿ. ಅವರ ಕಾದಂಬರಿಗಳ ಬಗ್ಗೆಯೂ ನನ್ನ ಅಭಿಪ್ರಾಯ ಬರೆದಿದ್ದೇನೆ. ನಮ್ಮ ವಿಚಾರಧಾರೆಗಳು ಬೇರೆಯಾದರೂ ನಮ್ಮ ನಡುವೆ ಉತ್ತಮ ಸ್ನೇಹ ಇತ್ತು ಎಂದು ಸ್ಮರಿಸಿದರು.
ಈ ಸುದ್ದಿಯನ್ನೂ ಓದಿ | SL Bhyrappa Passes away: ಭೈರಪ್ಪನವರ ಬೆನ್ನು ಹತ್ತಿದ ವಿವಾದಗಳ ಸಾಲು ಸಾಲು
ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಎಂದು ಸಾಹಿತ್ಯಾಸಕ್ತರು ಹೇಳುತ್ತಿರುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಂದಿದೆ. ಅದು ಕೂಡ ಸಾಹಿತ್ಯ ಕ್ಷೇತ್ರದ ಉನ್ನತ ಪ್ರಶಸ್ತಿಯಾಗಿದೆ ಎಂದು ಹೇಳಿದರು.