Karnataka Rains: ಶಿರಾಡಿ ಘಾಟ್‌ನಲ್ಲಿ ಭೂ ಕುಸಿತ, ಸಂಚಾರಕ್ಕೆ ಅಡಚಣೆ; ಸಕಲೇಶಪುರದಲ್ಲಿ ಹೋಟೆಲ್ ಗೋಡೆ ಬಿದ್ದು ನಾಲ್ವರಿಗೆ ಗಾಯ
Karnataka Rains:: ಕರ್ನಾಟಕದ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮೇ ಅಂತ್ಯದವರೆಗೆ ಕರ್ನಾಟಕದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ.


ಹಾಸನ: ಈ ಬಾರಿ ನೈರುತ್ಯ ಮಾನ್ಸೂನ್ ಮಾರುತಗಳು ಅವಧಿಗೂ ಮುನ್ನವೇ ಕೇರಳ ಕರಾವಳಿಗೆ ಪ್ರವೇಸಿವೆ. ಹೀಗಾಗಿ ಕರ್ನಾಟಕದ ವಿವಿಧೆಡೆ ವರುಣ (Karnataka Rains) ಅಬ್ಬರಿಸುತ್ತಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇನ್ನು ಶಿರಾಡಿ ಘಾಟ್ ರಸ್ತೆಯಲ್ಲಿ (Shiradi Ghat Road) ಎರಡು ಕಡೆ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಮಣ್ಣು ಕುಸಿಯುತ್ತಿದೆ. ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಸಕಲೇಶಪುರ ತಾಲೂಕಿನ ದೋಣಿಗಾಲ್ ಮತ್ತು ಅಡ್ಡನಗುಡ್ಡದ ಬಳಿ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ತಡೆಗೋಡೆ ನಿರ್ಮಿಸಿದ್ದರೂ ನಿರಂತರ ಮಳೆಗೆ ಮಣ್ಣು ಕುಸಿಯುತ್ತಿದೆ. ಹೀಗಾಗಿ ಮರಗಳು ನೆಲಕ್ಕೆ ಉರುಳುತ್ತಿದ್ದು, ಅಪಾರ ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಇನ್ನು ವೀಕೆಂಡ್ ಹಿನ್ನೆಲೆ ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದ್ದು, ವಾಹನ ಸವಾರರು ಆತಂಕದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಕಲೇಶಪುರದಲ್ಲಿ ಹೋಟೆಲ್ ಗೋಡೆ ಕುಸಿದು ನಾಲ್ವರಿಗೆ ಗಾಯ

ಭಾರಿ ಮಳೆಗೆ ಹೋಟೆಲ್‍ನ ಗೋಡೆ ಕುಸಿದು ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಗಾಯಗೊಂಡ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಗಾಯಾಳುಗಳನ್ನು ಸಫಿಯಾ, ಫಯಿಮಾ ಭಾನು, ಶಹನಾಜ್ ಮತ್ತು ನಿಜಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮಹಿಳೆಯರು ಸಕಲೇಶಪುರದ ಹೊಸ ಬಸ್ ನಿಲ್ದಾಣದ ಬಳಿ ಹೋಟೆಲ್ ಹಾಗೂ ಕ್ಯಾಂಟಿನ್ ನಡೆಸುತ್ತಿದ್ದರು. ಮಳೆಯಿಂದ ಶಿಥಿಲಗೊಂಡಿದ್ದ ಒಂದು ಭಾಗದ ಗೋಡೆ ಕುಸಿದಿದೆ. ಮಳಿಗೆಗಳು ದೇವಾಲದಕೆರೆ ಗ್ರಾಮದ ಅಶೋಕಗೌಡ ಎಂಬವರಿಗೆ ಸೇರಿದ್ದು, ಗಾಯಾಳುಗಳನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮೇ ಅಂತ್ಯದವರೆಗೆ ಕರ್ನಾಟಕದಲ್ಲಿ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಭಾನುವಾರ ಹಾಗೂ ಸೋಮವಾರ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಆಗಲಿದೆ. ಮಿಂಚು - ಗುಡುಗು ಸಹಿತ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27ಡಿಗ್ರಿ ಸೆಲ್ಸಿಯಸ್ ಹಾಗೂ 21ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮೇ 26ರಿಂದ ಮೇ 31ರವರೆಗೆ ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ಬಳ್ಳಾರಿ, ಬೆಂಗಳೂರು, ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಮೇ 25 ರಿಂದ ಮೇ 28ರವರೆಗೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಮೇ 29 ಮತ್ತು 30ರಂದು ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ | Covid-19 Test: ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ
ಇನ್ನು ಮಲೆನಾಡಿನ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾನುವಾರದಿಂದ ಮೇ 28ರವರೆಗೆ ರೆಡ್ ಅಲರ್ಟ್, ಮೇ 25ರಂದು ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಹಾಗೂ ಗದಗ, ಹಾವೇರಿ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.