Kudachi MLA Mahendra Tammannavar: ಪುತ್ರನಿಗೆ ಡಿಸಿಎಂ ಹೆಸರಿಟ್ಟ ಕುಡಚಿ ಶಾಸಕ; ಡಿಕೆಶಿಯಿಂದಲೇ ನಾಮಕರಣ!
DK Shivakumar: ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ ʼಶಿವಕುಮಾರ್ʼ ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ. ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾರೈಸಿದ್ದಾರೆ.
-
Prabhakara R
Oct 31, 2025 11:23 PM
ಬೆಂಗಳೂರು: ಬೆಳಗಾವಿ ಜಿಲ್ಲೆ ಕುಡಚಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣನವರ್ (Kudachi MLA Mahendra Tammannavar) ಅವರ ಮಗನಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರ ಹೆಸರಿಡಲಾಗಿದೆ. ಮಗುವಿಗೆ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನಾಮಕರಣ ಮಾಡಿದ್ದು, ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ. ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ ʼಶಿವಕುಮಾರ್ʼ ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ. ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ ಎಂದು ಶುಭಹಾರೈಸಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ “ಶಿವಕುಮಾರ” ಕರುನಾಡ ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ಅವರು ಕುಟುಂಬದೊಂದಿಗೆ ತೆರಳಿ ಮಗನಿಗೆ ತಮ್ಮ ನೆಚ್ಚಿನ ನಾಯಕನ ಬಳಿಯೇ ನಾಮಕರಣ ಮಾಡಿಸಿದ್ದಾರೆ. ಈ ನಾಮಕರಣದ ವಿಡಿಯೋ ಮತ್ತು ಫೋಟೊಗಳನ್ನು ಡಿಸಿಎಂ ಡಿಕೆಶಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | DK Shivakumar: ತೇಜಸ್ವಿ ಸೂರ್ಯ ಎಳಸು, ಅನುಭವವಿಲ್ಲದ ವೇಸ್ಟ್ ಮೆಟೀರಿಯಲ್- ಡಿಕೆಶಿ ವಾಗ್ದಾಳಿ
ಧರ್ಮಸ್ಥಳ ಪ್ರಕರಣ; ಎಸ್‌ಐಟಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ʼʼಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ) ಮುಂದಿವೆʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ avru ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಕುರಿತು ಕೇಳಿದಾಗ ಉತ್ತರಿಸಿದ ಡಿ.ಕೆ. ಶಿವಕುಮಾರ್, ʼʼಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಂಸ್ಥೆಗೆ ಎಷ್ಟು ಹಾನಿ ಮಾಡಬೇಕೋ ಅದನ್ನು ಈಗಾಗಲೇ ಮಾಡಲಾಗಿದೆ. ಒಟ್ಟಿನಲ್ಲಿ ಧರ್ಮ ಮತ್ತು ನ್ಯಾಯ ಉಳಿಯಬೇಕು ಎಂಬುದು ನಮ್ಮ ಅಭಿಲಾಷೆʼʼ ಎಂದು ತಿಳಿಸಿದರು.
ʼʼವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವವೇ ಬೇರೆ. ಆ ಸಂಸ್ಥೆಯ ಹೆಸರಿಗೆ ಹಾನಿಯಾಗುತ್ತಿದೆಯಲ್ಲ ಎಂದು ಬೇಸರವಾಗಿತ್ತು. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎನ್ನುವ ಗಾದೆ ಇದೆ. ಅಂದರೆ ತಿರುಪತಿಯಲ್ಲಿ ಕಾಸಿನ ಹರಕೆ, ಧರ್ಮಸ್ಥಳದಲ್ಲಿ ಮಾತಿನ ಹರಕೆ ಕಟ್ಟಿಕೊಂಡರೆ ಬಿಡುವಂತಿಲ್ಲ. ಇಂತಹ ಪದ್ಧತಿಯಲ್ಲಿ ನಡೆದುಕೊಂಡು ಹೋಗುವ ಕಡೆ ಯಾವುದೇ ಸಮಸ್ಯೆ ಇಲ್ಲ ಎಂಬುದು ನನ್ನ ನಂಬಿಕೆʼʼ ಎಂದರು.
ʼʼನನ್ನ ವೈಯಕ್ತಿಕ ಮಾಹಿತಿ ಪ್ರಕಾರ ಹಾಗೂ ಧರ್ಮಸ್ಥಳದಲ್ಲಿ ಯಾವ ಪದ್ಧತಿ ನಡೆಯುತ್ತಿದೆ, ಅಲ್ಲಿ ಯಾವ ಸಂಪ್ರದಾಯಗಳನ್ನು ಆಚರಿಸಲಾಗುತ್ತಿದೆ ಎನ್ನುವ ಬಗ್ಗೆ ನನ್ನ ಅನುಭವದ ಆಧಾರದಲ್ಲಿ ಮಾತನಾಡಿದ್ದೇನೆʼʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ʼಟುಗೆದರ್ ವಿ ಗ್ರೋ 2025ʼ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್‌ಗೆ ಆಹ್ವಾನ
ಎಸ್‌ಐಟಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ
ʼʼಧರ್ಮಸ್ಥಳ ಪ್ರಕರಣದ ಕುರಿತಾಗಿ ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆಯೇ, ಇಲ್ಲವೇ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ವರದಿಯನ್ನು ಶೀಘ್ರದಲ್ಲೇ ನೀಡಬೇಕು ಎಂದು ಗೃಹಸಚಿವರು ಹೇಳಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಎಸ್‌ಐಟಿ ವರದಿ ಬಂದ ನಂತರ ಏನಿದೆ ಎಂಬುದನ್ನು ಗಮನಿಸೋಣ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಬಂದಷ್ಟು ಮಾಹಿತಿ ಮಾತ್ರ ನನಗೆ ತಿಳಿದಿದೆ. ನಾನು ಯಾವ ಅಧಿಕಾರಿಯ ಬಳಿಯೂ ಯಾವುದೇ ವರದಿ ಕೇಳಲು, ಮಾತನಾಡಲು ಹೋಗಿಲ್ಲʼʼ ಎಂದರು.