Pahalgam terror attack: ಉಗ್ರರ ದಾಳಿ; ಮೃತ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ತಲಾ 1 ಲಕ್ಷ ಪರಿಹಾರ
Pahalgam terror attack: ಉಗ್ರರ ದಾಳಿಯಲ್ಲಿ ಕನ್ನಡಿಗರಾದ ಮಂಜುನಾಥ್ ರಾವ್, ಭರತ್ ಭೂಷಣ್ ಹಾಗೂ ಆಂಧ್ರ ಮೂಲದ ಬೆಂಗಳೂರು ನಿವಾಸಿ ಮಧುಸೂಧನ್ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಪರಿಹಾರ ಘೋಷಿಸಿದ್ದಾರೆ.


ರಾಯಚೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam terror attack) ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಕರ್ನಾಟಕ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದರ ಬೆನ್ನಲ್ಲೇ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ (Mantralaya Mutt) ಮೃತ ಕನ್ನಡಿಗರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಬಗ್ಗೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದ್ದು, ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಮೂವರು ಕನ್ನಡಿಗರ ಕುಟುಂಬಕ್ಕೆ ಮಠದ ವತಿಯಿಂದ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಘಟನೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಆದರೆ, ಬೇರೆ ದೇಶದವರು ಭಾರತದಲ್ಲಿ ಹಿಂಸೆಯ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಹಿಂದೂ ಸಮಾಜ ಜಾಗೃತರಾಗಬೇಕು. ಇನ್ನು ಕೇಂದ್ರ ಸರ್ಕಾರ ಕೂಡ ಉಗ್ರರ ಕೃತ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇವತ್ತು ಕಾಶ್ಮೀರದಲ್ಲಿ ಈ ರೀತಿಯ ಘಟನೆ ಆಗಿದೆ. ನಾಳೆ ದಿನ ಇನ್ನೆಲ್ಲೋ ಆಗಬಹುದು. ಹೀಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಉಗ್ರರ ದಾಳಿಯಲ್ಲಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರ ಕುಟುಂಬಕ್ಕೆ ನಮ್ಮ ಮಠದ ವತಿಯಿಂದ ತಲಾ 1 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಉಗ್ರರ ದಾಳಿಯಲ್ಲಿ ಕನ್ನಡಿಗರಾದ ಮಂಜುನಾಥ್ ರಾವ್, ಭರತ್ ಭೂಷಣ್ ಹಾಗೂ ಆಂಧ್ರ ಮೂಲದ ಬೆಂಗಳೂರು ನಿವಾಸಿ ಮಧುಸೂಧನ್ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಪರಿಹಾರ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಇದು ತಪ್ಪು ವಾಘಾ ಅಟ್ಟಾರಿ ಗಡಿ ಮುಚ್ಚಬಾರದಿತ್ತು.... ಪಾಕಿಸ್ತಾನ ಪ್ರಜೆಗಳಿಂದ ಆಗ್ರಹ