ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysore Silk Sarees: ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿದ ಬೇಡಿಕೆ; ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್‌ ಸೀರೆ ಸಿದ್ಧಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್‌ ನಾಥ್‌ ಅವರು ಗಮನಕ್ಕೆ ತಂದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ಸೂಚಿಸಿದ್ದಾರೆ.

ಮೈಸೂರು ಸಿಲ್ಕ್‌ ಸೀರೆಗಳ ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಮೈಸೂರು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಸಭೆಯಲ್ಲಿ ಸಚಿವ ಎಚ್‌.ಸಿ.ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು. -

Prabhakara R
Prabhakara R Nov 10, 2025 5:56 PM

ಮೈಸೂರು, ನ.11: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ (Mysuru KDP Meeting) ಮೈಸೂರು ರೇಷ್ಮೆ ಸೀರೆ (Mysore Silk Sarees) ಚರ್ಚೆಗೆ ಬಂದಿದ್ದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ರೇಷ್ಮೆ ಇಲಾಖೆ ಮತ್ತು ರೇಷ್ಮೆ ಉತ್ಪಾದನೆ ಬಗ್ಗೆ ಚರ್ಚೆ ನಡೆಯುವ ವೇಳೆ ರಾಜ್ಯದಲ್ಲಿ ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಮಹಿಳೆಯರು ಐದಾರು ಗಂಟೆ ಕ್ಯೂ ನಿಂತರೂ ಸೀರೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಸೀರೆ ಸಿದ್ಧಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್‌ ನಾಥ್‌ ಅವರು ಸಿಎಂ ಗಮನಕ್ಕೆ ತಂದರು. ಹೀಗಾಗಿ ಈ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಕೃಷಿ-ತೋಟಗಾರಿಕೆ-ನೀರಾವರಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಭೆ ಮಾಡಿದ ಸಿಎಂ, ರೈತರಿಗೆ ನೀರಿನ ನಿರ್ವಹಣೆ ಮತ್ತು ವೈಜ್ಞಾನಿಕ ಬಿತ್ತನೆ ಬಗ್ಗೆ ಹಾಗೂ ಇಳುವರಿ ಹೆಚ್ಚಿಗೆ ಬರುವ ಹೊಸ ಹೊಸ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ಹಂಚಿಕೊಂಡಿಲ್ಲದ್ದಕ್ಕೆ ಗರಂ ಆಗಿ, ಜಂಟಿ ಸಭೆಗಳನ್ನು ನಡೆಸಲು ಸೂಚಿಸಿದರು

ಒಟ್ಟು ನೀರಾವರಿ ಭೂಮಿಯಲ್ಲಿ ವಾಡಿಕೆಗಿಂತ 3,000 ಹೆಕ್ಟೇರ್‌ ಭೂಮಿಯಲ್ಲಿ ಕಡಿಮೆ ಬಿತ್ತನೆ ಆಗಿರುವುದಕ್ಕೆ ಏನು ಕಾರಣ, ಮಳೆ ಹೇರಳವಾಗಿ ಬಿದ್ದಿದೆ. ನೀರಿನ ಕೊರತೆಯೂ ಇಲ್ಲ. ಹೀಗಿದ್ದೂ ಬಿತ್ತನೆ ಏರಿಯಾ ಕಡಿಮೆ ಆಗಿರುವುದಕ್ಕೆ ಏನು ಕಾರಣ ಎಂದು ಕೃಷಿ ಇಲಾಖೆಯ ಜಂಟಿ ನರ‍್ದೇಶಕರಿಗೆ ಸಿಎಂ ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Mysuru KDP Meeting: ಜನರನ್ನು ಕಚೇರಿಗಳಿಗೆ ಅಲೆದಾಡಿಸಿದರೆ ಸಹಿಸಲ್ಲ: ಅಧಿಕಾರಿಗಳಿಗೆ ಸಿಎಂ ಖಡಕ್‌ ಎಚ್ಚರಿಕೆ

ಹುರುಳಿ, ಮುಸುಕಿನ ಜೋಳ ಬಿತ್ತನೆ ಇನ್ನೂ ಆಗಬೇಕಿದೆ. ಕೆಲವು ರೈತರು ಬೆಳೆಯನ್ನು ಬದಲಾಯಿಸಿದ್ದಾರೆ. ಗೊಬ್ಬರ, ಬೀಜ ನಮ್ಮಲ್ಲಿ ಸಂಗ್ರಹ ಇದೆ. ರೈತರಿಗೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರವನ್ನೂ ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ. ಯೂರಿಯಾ ಅಗತ್ಯ ಇರುವುದಕ್ಕಿಂತ ಹೆಚ್ಚು ಸಂಗ್ರಹವಿದೆ ಎಂದು ಜಂಟಿ ನಿರ್ದೇಶಕರು ಉತ್ತರಿಸಿದರು.

ಬೇರೆ ಬೇರೆ ತಾಲ್ಲೂಕಿನ ಕೃಷಿ ಭೂಮಿಗಳಿಗೆ ಭೇಟಿ ನೀಡಿದ್ದೀರಾ? ಭೇಟಿ ನೀಡಿದ ಬಗ್ಗೆ ಡೈರಿ ಬರೆದಿದ್ದೀರಾ? ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೈರಿ ಬರೆದಿರುವುದನ್ನು, ಸ್ಥಳಕ್ಕೆ ಭೇಟಿ ನೀಡಿರುವುದನ್ನು ಪರಿಶೀಲಿಸಿದ್ದೀರಾ ಎಂದು ಕೇಳಿದ ಸಿಎಂ ಡೈರಿ ತೂರಿಸುವಂತೆ ಸೂಚಿಸಿದರು.

ಪ್ರವಾಹದಿಂದ ಆಗಿರುವ ಅನಾಹುತಗಳು ಮತ್ತು ಪರಿಹಾರ ಹಾಗೂ ರೈತರ ಆತ್ಮಹತ್ಯೆಗಳು ಹಾಗೂ ಪರಿಹಾರ ಸರ‍್ಪಕವಾಗಿ ಒದಗಿಸಿರುವ ಬಗ್ಗೆ ಸಿಎಂ ಮಾಹಿತಿ ಪಡೆದು ದಾಖಲೆ ಪರಿಶೀಲಿಸಿದರು.

ಯಾವ ಯಾವ ಬೆಳೆಗಳಿಗೆ ಯಾವ ಯಾವ ರೋಗ ಬಂದಿದೆ? ಇದಕ್ಕೆ ಕಾರಣಗಳನ್ನು ಮತ್ತು ಪರಿಣಾಮಗಳನ್ನು ರೈತರಿಂದ ಕೇಳಿ ದಾಖಲು ಮಾಡಿಕೊಂಡಿದ್ದೀರಾ? ಎಷ್ಟು ಹೆಕ್ಟೇರ್‌ ಬೆಳೆಗೆ ವಿಮೆ ಹಣ ಸಂದಾಯ ಆಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.

ಮಹಾರಾಷ್ಟ್ರಕ್ಕೆ ಹೋಗಿ ಅಧ್ಯಯನ ನಡೆಸಿಕೊಂಡು ಬನ್ನಿ: ಸಿಎಂ ಸೂಚನೆ: ಮಹಾರಾಷ್ಟ್ರದ ರೈತರು ರ‍್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಜಿಲ್ಲೆಯಲ್ಲಿ ಎರಡು ಬೆಳೆ ಮಾತ್ರ ಸಾಧ್ಯವಾಗುತ್ತಿದೆ. ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿ ಅಧ್ಯಯನ ಮಾಡಿಕೊಂಡು, ನಮ್ಮ ಇಲ್ಲಿನ ವಾತಾವರಣ ಮತ್ತು ಪರಿಸ್ಥಿತಿಗೆ ಹೇಗೆ ಅಳವಡಿಸಲು ಸಾಧ್ಯ ಎನ್ನುವ ಬಗ್ಗೆ ವರದಿ ನೀಡಿ ಎನ್ನುವ ಸೂಚನೆಯನ್ನು ಮುಖ್ಯಮಂತ್ರಿಗಳು ಜಂಟಿ ನರ‍್ದೇಶಕರಿಗೆ ಸೂಚಿಸಿದರು.

ತೋಟಗಾರಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿರುವ ಬಗ್ಗೆ ಮಾಹಿತಿ ಪಡೆದ ಸಿಎಂ:

ಬಾಳೆ ಬೆಳೆ ಹಿಂದಿನ ತಿಂಗಳುಗಳಲ್ಲಿ ಕಡಿಮೆ ಆಗಿತ್ತು. ಈಗ ಹೆಚ್ಚಾಗಿದೆ. ಶುಂಟಿ ಕೂಡ ಹೆಚ್ಚಾಗಿದೆ. ಅಡಿಕೆ ಬೆಳೆಯುವ ಪ್ರಮಾಣ ಕೂಡ ಹೆಚ್ಚಾಗಿದೆ. ಶುಂಟಿ ಮತ್ತು ಇತರೆ ಬೆಳೆಗಳಿಗೆ ರೋಗ ಬಾದಿಸಿತ್ತು. ವಿಜ್ಞಾನಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಬಿಸಿಲಿನ ಕೊರತೆಯಿಂದ ಕಡಿಮೆಯಾಗಿತ್ತು. ಬಿಸಿಲು ಬರುತ್ತಿದ್ದಂತೆ ಮತ್ತೆ ಇಳುವರಿ ಹೆಚ್ಚಾಗುವ ಬಗ್ಗೆ ವಿಜ್ಞಾನಿಗಳು ತಿಳಿಸಿದ್ದಾರೆ. ತೆಂಗು ಮತ್ತು ಅಡಿಕೆ ಬೆಳೆಗೆ ಕೆಲವು ಕಡೆ ರೋಗ ಬಂದಿದೆ. ಸ್ಥಳಕ್ಕೇ ಹೋಗಿ ರೋಗ ತಡೆಗಟ್ಟಲು ಮೊದಲ ಹಂತದಲ್ಲಿ ಕ್ರಮ ಕೈಗೊಂಡು ಬಳಿಕ ರೋಗ ನಿವಾರಣೆಗೆ ಔಷಧಗಳನ್ನು ಸಿಂಪಡಿಸಲಾಗಿದೆ. ಆದಾಯ ಹೆಚ್ಚು ಎನ್ನುವ ಕಾರಣಕ್ಕೆ ರೈತರು ತೋಟಗಾರಿಕಾ ಬೆಳೆಗಳಿಗೆ ಹೆಚ್ಚೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್‌ ಸಭೆಗೆ ಮಾಹಿತಿ ನೀಡಿದರು.

ಪಶು ಸಂಗೋಪನಾ ಇಲಾಖೆ:

ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಹಾಕಲಾದ ಲಸಿಕೆ ಪ್ರಮಾಣ ಎಷ್ಟಿದೆ ಎಂದು ಸಿಎಂ ಅಧಿಕಾರಿಗಳಿಗೆ ಪ್ರಶ್ನಿಸಿದರು. ಶೇ 96.55 ರಷ್ಟು ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕುರಿ ಮೇಕೆಗಳಲ್ಲಿ ಕರುಳುಬೇನೆ ರೋಗದ ವಿರುದ್ಧ ಶೇ.101.69 ರಷ್ಟು ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಾನುವಾರುಗಳಲ್ಲಿ ಕಂದು ರೋಗದ ವಿರುದ್ಧ ಶೇ 93.33 ರಷ್ಟು ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಕುರಿಗಾಹಿಗಳಿಗೆ ಆಗುತ್ತಿದ್ದ ತೊಂದರೆಗಳು ಮತ್ತು ಕಳ್ಳ ಕಾಕರಿಂದ ರಕ್ಷಣೆ ಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕುರಿಗಾಹಿಗಳ ಮೇಲೆ ದರ‍್ಜನ್ಯ ಪ್ರಕರಣಗಳು ನಡೆದಿಲ್ಲ ಎನ್ನುವ ವರದಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.

ಮಾಹಿತಿಗಾಗಿ ನಿಮ್ಮ ಮನೆಗೆ ಬರ್ಲಾ ನಾನು: ಅರಣ್ಯಾಧಿಕಾರಿಗೆ ಚಳಿ ಬಿಡಿಸಿದ ಸಿಎಂ

ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ‌ ಅರಣ್ಯದ ಪ್ರಮಾಣ ಎಷ್ಟಿದೆ? ಯಾವ ಭಾಗಗಳಲ್ಲಿ ವಿಸ್ತರಣೆ ಆಗಿದೆ ಎನ್ನುವ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಸಿಎಂ ಪ್ರಶ್ನಿಸಿದರು. ಅಧಿಕಾರಿ ಸರಿಯಾದ ಅಂಕಿ ಅಂಶ ನೀಡದೆ, ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿ ಬಗ್ಗೆ ಸಿಎಂ ಗರಂ ಆದರು.

ಸರಿಯಾದ ಮಾಹಿತಿ ತರದೆ ಅತ್ತೆ ಮನೆಗೆ ಬಂದಂತೆ ಕೈ ಬೀಸಿಕೊಂಡು ಬರ್ತೀರಾ ? 25 ವರ್ಷದಿಂದ ಕೆಲಸ ಮಾಡಿ ರೈತರ ಜಮೀನಿನಲ್ಲಿ ಎಷ್ಟು ಗಿಡ ನೆಟ್ಟಿದ್ದೀರಿ ? ಎಷ್ಟು ಎಕರೆ ಗಿಡ ಬೆಳೆಸಿದ್ದೀರಿ ಎನ್ನುವ ಮಾಹಿತಿ ಇಲ್ಲದಿದ್ದರೆ ನಿಮ್ಮ ಕಾರ್ಯಕ್ಷಮತೆ ಇಷ್ಟೆನಾ ಎಂದು ಗರಂ ಆಗಿ ಮಾಹಿತಿಗಾಗಿ ನಾನು ನಿಮ್ಮ ಮನೆಗೆ ಬರಬೇಕಾ ಎಂದು ಪ್ರಶ್ನಿಸಿದರು.‌

ನೀಲಗಿರಿ ನಿಷೇದ ಆದ ಮೇಲೂ ಮತ್ತೆ ನೀಲಗಿರಿ ಪ್ಲಾಂಟೇಷನ್ ಕಾಣಿಸುತ್ತಿರುವುದರ ಬಗ್ಗೆ ಶಾಸಕರಾದ ತನ್ವೀರ್ ಸೇಠ್ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಹೊಸದಾಗಿ ನೀಲಗಿರಿ ಪ್ಲಾಂಟೇಷನ್ ಗೆ ಅವಕಾಶ ನೀಡಿಲ್ಲ. ಇರುವ ಬೆಳೆ ಕಟಾವು ಆದ ಬಳಿಕ ಅಲ್ಲಿ ಮತ್ತೆ ಬೆಳೆಯಲು ಅವಕಾಶವಿಲ್ಲ ಎಂದು ಉತ್ತರಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು; ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಲಿನ ಉತ್ಪಾದನೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರ ಅಂಕಿ ಅಂಶಗಳನ್ನು ಮುಂದಿಟ್ಟ ಮುಖ್ಯಮಂತ್ರಿಗಳು ಉತ್ಪಾದನೆ ಹೆಚ್ಚಾದ ಹಾಗೆ ಮಾರುಕಟ್ಟೆ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಿ ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ಸೂಚಿಸಿದರು.