Charmadi Ghat: ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ
Crimes: ಚಾರ್ಮಾಡಿ ಘಾಟ್‌ನ ಕೊಟ್ಟಿಗೆಹಾರ ಬಳಿ ಇರುವ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರೂ ಅಕ್ರಮವಾಗಿ ಮರಳು ಸಾಗಾಟ, ಗೋ ಸಾಗಾಟ ಮತ್ತು ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವುದು ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಈ ಅಪರಾಧ ಚಟುವಟಿಕೆಗಳನ್ನು ತಡೆಯಲು ಹೊಸ ನಿಯಮ ತರಲಾಗುತ್ತಿದೆ.


ಚಿಕ್ಕಮಗಳೂರು: ಚಿಕ್ಕಮಗಳೂರು- ದಕ್ಷಿಣ ಕನ್ನಡ (Chikkamgaluru- Dakshina Kannada) ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್ (Charmadi Ghat) ರಸ್ತೆಯಲ್ಲಿ ಅಪರಾಧ (Crmes) ಕೃತ್ಯಗಳನ್ನು ತಡೆಯಲು ಚಿಕ್ಕಮಗಳೂರು ಪೊಲೀಸ್ ಇಲಾಖೆ ಹೊಸ ಪ್ಲಾನ್ ರೂಪಿಸಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಚಾರ್ಮಾಡಿ ಘಾಟ್ನಲ್ಲಿ ರಾತ್ರಿ ವೇಳೆ ಐದು ವಾಹನಗಳನ್ನು ಒಟ್ಟಿಗೆ ಕಳುಹಿಸಲಾಗುತ್ತಿದೆ. ಈ ಹೊಸ ನಿಯಮ ಚಾರ್ಮಾಡಿ ಘಾಟ್ನಲ್ಲಿ ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಅನ್ವಯವಾಗಲಿದೆ.
ಚಾರ್ಮಾಡಿ ಘಾಟಿ ಪ್ರಕೃತಿ ಸೌಂದರ್ಯದ ಗಣಿಯಾಗಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ 24 ಗಂಟೆಯೂ ವಾಹನಗಳು ಸಂಚರಿಸುತ್ತವೆ. ಚಾರ್ಮಾಡಿ ಘಾಟ್‌ನ ಕೊಟ್ಟಿಗೆಹಾರ ಬಳಿ ಇರುವ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರೂ ಅಕ್ರಮವಾಗಿ ಮರಳು ಸಾಗಾಟ, ಗೋ ಸಾಗಾಟ ಮತ್ತು ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವುದು ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಈ ಅಪರಾಧ ಚಟುವಟಿಕೆಗಳನ್ನು ತಡೆಯಲು ಹೊಸ ನಿಯಮ ತರಲಾಗುತ್ತಿದೆ.
ಚಾರ್ಮಾಡಿ ಫಾಟ್ಗೆ ತೆರಳಲು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗು ಬರುವ ವಾಹನಗಳನ್ನು ಕೊಟ್ಟಿಗೆಹಾರ ಚೆಕ್ಪೋಸ್ಟ್ ಬಳಿ ನಿಲ್ಲಿಸಿ 5 ವಾಹನ ಜೊತೆ ಮಾಡಿ ಬಿಡಲಾಗುತ್ತಿದೆ. ಚಾರ್ಮಡಿ ಘಾಟ್ನಲ್ಲಿ ರಾತ್ರಿ ವೇಳೆ ಒಂದೊಂದೇ ವಾಹನ ಸಂಚಾರವನ್ನು ಚಿಕ್ಕಮಗಳೂರು ಪೊಲೀಸ್ ಇಲಾಖೆ ನಿಷೇಧಿಸಿದೆ. ಈ ನಿಯಮ ಅಪರಾಧ ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದೆ. 24 ಗಂಟೆಯೂ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಓರ್ವ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 24 ಗಂಟೆಯೂ ಚಾರ್ಮಾಡಿ ಘಾಟ್ನಲ್ಲಿ ಪೊಲೀಸ್ ವಾಹನ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ.
ಇದರ ಜೊತೆಗೆ, ಅಪರಾಧ ಕೃತ್ಯ ಎಸಗಿ ಪರಾರಿಯಾಗುವವರ ಬಂಧನಕ್ಕೆ ಚಿಕ್ಕಮಗಳೂರು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ವಾಹನ ನಿಲ್ಲಿಸುವುದು, ಸೆಲ್ಫಿ ತೆಗೆಯಲು ಹುಚ್ಚಾಟ, ಘಾಟಿಯಲ್ಲಿ ಕಸ ಸುರಿದು ಹೋಗುವುದು ಮುಂತಾದವು ಕೂಡ ಕಂಡುಬರುತ್ತಿವೆ.
ಇದನ್ನೂ ಓದಿ: Charmadi Ghat trekking: ಚಾರ್ಮಾಡಿ ಘಾಟ್‌ನ ನಿಷೇಧಿತ ಪ್ರದೇಶದಲ್ಲಿ ಚಾರಣ; 103 ಮಂದಿ ಪ್ರವಾಸಿಗರ ವಿರುದ್ಧ ಎಫ್‌ಐಆರ್