Pralhad Joshi: ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಸರ್ಕಾರದ್ದೂ ಸಾಥ್ ಇದೆಯೇ? ಜೋಶಿ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸತ್ಯ ತಿಳಿದಿದ್ದರೂ ಎಸ್‌ಐಟಿ ತನಿಖೆ, ಶೋಧ ಕಾರ್ಯ, ಅಗೆತ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ, ಪೊಲೀಸ್ ತನಿಖೆ ಬಳಿಕ ಕುರುಹುಗಳೇನಾದರೂ ಸಿಕ್ಕಿದ್ದೇ ಆಗಿದ್ದಲ್ಲಿ ಎಸ್‌ಐಟಿ ರಚಿಸಿ ಹೆಚ್ಚಿನ ತನಿಖೆ ಮುಂದುವರಿಸಬಹುದಿತ್ತು. ಆದರೆ ʼಸರ್ಕಾರ ಗುಡ್ಡ ಅಗೆದು ಇಲಿ ಹಿಡಿಯದಂತೆʼ ಯೂ ಆಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ʼಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆದಿದೆʼ ಎಂದಿದ್ದಾರೆ. ಆತುರದಲ್ಲಿ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರದ್ದೇ ಷಡ್ಯಂತರವಿದೆಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಚಾಟಿ ಬೀಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತರ ಇರುವುದು ಡಿಸಿಎಂಗೆ ಗೊತ್ತಿದೆ ಅಂದಮೇಲೆ ಸಿಎಂ ಸಿದ್ದರಾಮಯ್ಯ (CM Siddramaiah) ಅವರಿಗೆ ಗೊತ್ತಾಗದೇ ಹೋಯಿತೇ? ಎಂದು ಪ್ರಶ್ನಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಅನಾಮಿಕ ಶವಗಳನ್ನು ಹೂತು ಹಾಕಿದೆ ಎಂಬ ಅನಾಮಿಕನ ಆರೋಪ ಕುರಿತಂತೆ ಪ್ರಕರಣ ಕೈಗೆತ್ತಿಕೊಂಡ ರಾಜ್ಯ ಸರ್ಕಾರ, ಆತುರದಲ್ಲಿ SIT ರಚಿಸುವ ಅವಶ್ಯಕತೆ ಏನಿತ್ತು? ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಒತ್ತಡ, ಒತ್ತಾಯ ಹೆಚ್ಚಿದ್ದರಿಂದ ರಾಜ್ಯ ಸರ್ಕಾರ SIT ತನಿಖೆಗೆ ಆದೇಶಿಸಿತ್ತು. ಆದರೆ, ಆತುರದಲ್ಲಿ ಇಂಥ ನಿರ್ಧಾರ ತೆಗೆದುಕೊಂಡು ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯುವ ಯತ್ನಕ್ಕೆ ಸರ್ಕಾರವೂ ಸಾಥ್ ನೀಡಿದೆಯೇ? ಇದರಲ್ಲಿ ಸರ್ಕಾರದ್ದೇ ಷಡ್ಯಂತರ ಏನಾದರೂ ಇದೆಯೇ? ಎಂದು ಸಚಿವ ಜೋಶಿ ದೂರಿದ್ದಾರೆ.
ಡಿಸಿಎಂಗೆ ಗೊತ್ತಾದ ವಿಚಾರ ಸಿಎಂಗೆ ಗೊತ್ತಾಗಲಿಲ್ಲವೇ?
ಡಿಸಿಎಂ ಡಿ.ಕೆ. ಶಿವಕುಮಾರ್, ʼಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ಯಾರದ್ದೆಂದು ಹೇಳಲ್ಲ. ಒಳ್ಳೇ ಯೋಜನೆ, ತಂತ್ರಗಾರಿಕೆ ಹೆಣೆದು ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ. ಆದರೆ, ಯಾರು? ಏನು? ಅಂತ ಮಾತನಾಡಲು ನಾನು ಹೋಗುವುದಿಲ್ಲ. ತೇಜೋವಧೆ ಮೂಲಕ ನೂರಾರು ವರ್ಷಗಳ ಪರಂಪರೆ ಹಾಳು ಮಾಡಲು ಹೊರಟಿದ್ದಾರೆʼ ಎಂದಿದ್ದಾರೆ. ಡಿಸಿಎಂಗೆ ಗೊತ್ತಿರುವ ಈ ವಿಚಾರ ಸಿಎಂಗೆ ಗೊತ್ತಾಗಿರಲಿಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳುವಂತೆ ಷಡ್ಯಂತರ ನಡೆಯುತ್ತಿದೆ ಎಂಬ ವಿಚಾರ ಗೊತ್ತಾದ ಮೇಲೂ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ SIT ರಚಿಸಿದ್ದೇಕೆ? ಇಷ್ಟೆಲ್ಲಾ ಹೈಡ್ರಾಮಾ ಮಾಡುವ ಪ್ರಸಂಗವಾದರೂ ಏನಿತ್ತು? ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಆ.16,17ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಗುಡ್ಡ ಅಗೆದರೂ ಇಲಿ ಹಿಡಿಯದಂತಾದ ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸತ್ಯ ತಿಳಿದಿದ್ದರೂ SIT ತನಿಖೆ, ಶೋಧ ಕಾರ್ಯ, ಅಗೆತ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ ತನಿಖೆ ಬಳಿಕ ಕುರುಹುಗಳೇನಾದರೂ ಸಿಕ್ಕಿದ್ದೇ ಆಗಿದ್ದಲ್ಲಿ SIT ರಚಿಸಿ ಹೆಚ್ಚಿನ ತನಿಖೆ ಮುಂದುವರಿಸಬಹುದಿತ್ತು. ಆದರೆ, ʼಸರ್ಕಾರ ಗುಡ್ಡ ಅಗೆದು ಇಲಿ ಹಿಡಿಯದಂತೆʼ ಯೂ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.