ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D‌r N Someshwara Column: ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

-

ಹಿಂದಿರುಗಿ ನೋಡಿದಾಗ

ಹೀಲಾ ಜೀವಕೋಶಗಳು ಹಲವು ವೈಜ್ಞಾನಿಕ ಸಾಧನೆಗಳಿಗೆ ಕಾರಣವಾಗಿವೆ, ಆಗುತ್ತಿವೆ. ಆದರೆ ಈ ಜೀವಕೋಶಗಳನ್ನು ಬಳಸಿಕೊಳ್ಳಲು ಹೆನ್ರೀಟ್ಟಾ ಲ್ಯಾಕ್ಸ್ ಇಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಆಕೆಯ ಮರಣಾನಂತರ ಪ್ರಯೋಗಗಳಲ್ಲಿ ಬಳಸಲು ಅವರ ಮನೆಯವರಿಂದಲೂ ಒಪ್ಪಿಗೆಯನ್ನು ಪಡೆದಿಲ್ಲ. ಹೀಲಾ ಜೀವಕೋಶಗಳ ನೆರವಿನಿಂದ ರೂಪಿಸಿದ ಅನೇಕ ಲಸಿಕೆಗಳನ್ನು ಮಾರಿ ಔಷಧಿ ಹಾಗೂ ಬಯೋಟೆಕ್ ಕಂಪನಿಗಳು ದಂಡಿ ಯಾಗಿ ದುಡ್ಡು ಮಾಡಿದರೂ, ಅದರಲ್ಲೊಂದು ಪಾಲನ್ನೂ ಹೆನ್ರೀಟ್ಟಾಳ ಕುಟುಂಬಕ್ಕೆ ನೀಡಿಲ್ಲ.

1951ನೆಯ ಇಸವಿಯ ಚಳಿಗಾಲ. ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಜಾನ್ ಹಾಪ್ಕಿನ್ಸ್ ಆಸ್ಪತ್ರೆ. ೩೧ ವರ್ಷದ ಕಪ್ಪುಮಹಿಳೆ ಹೆನ್ರಿಟ್ಟಾ ಲ್ಯಾಕ್ಸ್, ಕೆಳಹೊಟ್ಟೆಯನ್ನು ಹಿಡಿದುಕೊಂಡು ಆಸ್ಪತ್ರೆ ಯೊಳಗೆ ಬಂದಳು. ಆಕೆಯು ವರ್ಜೀನಿಯ ಪ್ರಾಂತದಲ್ಲಿ ತಂಬಾಕನ್ನು ಬೆಳೆಯುವ ಕೃಷಿಕಳಾಗಿ ದ್ದಳು. ಆಕೆಗೆ ಮದುವೆಯಾಗಿ ಐದು ಮಕ್ಕಳಿದ್ದವು. ಕೆಲವು ವಾರಗಳಿಂದ ಆಕೆಯ ಕಿಬ್ಬೊಟ್ಟೆ ಪ್ರದೇಶದಲ್ಲಿ ವಿಪರೀತ ನೋವು ಕಂಡುಬರುತ್ತಿತ್ತು.

ಹೊಟ್ಟೆಯನ್ನು ಮುಟ್ಟಿನೋಡಿಕೊಂಡು, ತನ್ನ ಗಂಡನ ಬಳಿ “ನನ್ನ ಕೆಳಹೊಟ್ಟೆಯಲ್ಲಿ ಗಟ್ಟಿಯಾದ ಚೆಂಡಿ ನಂಥ ವಸ್ತುವೊಂದು ಕೈಗೆ ಸಿಗುತ್ತಿದೆ" ಎಂದು ಹೇಳಿಕೊಂಡಳು. ಆಗ ದಂಪತಿಗಳು ಜಾನ್ ಹಾಪ್ಕಿನ್ಸ್ ಆಸ್ಪತ್ರೆಯ ಕಪ್ಪುವರ್ಣದವರಿಗೆ ಮೀಸಲಿದ್ದ ವಿಭಾಗಕ್ಕೆ ಬಂದರು.

ವೈದ್ಯರು ಆಕೆಯನ್ನು ಪರೀಕ್ಷಿಸಿದರು. ಆಗ ಅವರಿಗೆ ಆಕೆಯ ಗರ್ಭಕೊರಳಿನಿಂದ ಒಂದು ನೇರಳೆ ಬಣ್ಣದ ದುಂಡನೆಯ ಗಂಟು ಹೊರಚಾಚಿ ಕೊಂಡಿರುವುದು ಕಂಡಿತು. ಕೂಡಲೇ ಆ ಗಂಟಿನ ಹುಂಡಿಯನ್ನು (ಬಯಾಪ್ಸಿ) ತೆಗೆದುಕೊಂಡರು. ಅಂದಿನ ದಿನಗಳಲ್ಲಿ ಲಭ್ಯವಿದ್ದ ಚಿಕಿತ್ಸೆಯನ್ನು ನೀಡಿದರು. ಆಕೆಯನ್ನು ಮನೆಗೆ ಕಳುಹಿಸಿಕೊಟ್ಟರು. ಆಗ ಹೆನ್ರೀಟ್ಟಾಳಿಗೆ ತಾನು ವೈದ್ಯಕೀಯ ಜಗತ್ತಿನಲ್ಲಿ ‘ಅಮರ’ಳಾಗುತ್ತಿದ್ದೇನೆ ಎನ್ನುವ ವಿಚಾರವು ತಿಳಿದಿರಲಿಲ್ಲ.

ಇದನ್ನೂ ಓದಿ: Dr N Someshwara Column: ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

‘ಹೀಲಾ’ ಜನನ: ಹೆನ್ರೀಟ್ಟಾ ಗರ್ಭಕೊರಳಿನ ಗಂಟಿನಿಂದ ಹುಂಡಿ ಹಾಕಿ ತೆಗೆದ ಗಂಟಿನ ಚೂರು ಡಾ.ಜಾರ್ಜ್ ಓಟ್ಟೊ ಗೇ (1899-1970) ಅವರ ಮೇಜನ್ನು ಸೇರಿತು. ಇವರು ಕೋಶ ಕೃಷಿಕೆ (ಸೆಲ್ ಕಲ್ಚರ್) ಎಂಬ ಹೊಸ ತಂತ್ರಜ್ಞಾನದ ಅಧ್ವರ್ಯುವಾಗಿದ್ದರು. ಇದು ಮನುಷ್ಯನ ದೇಹದ ವಿವಿಧ ಜೀವಕೋಶಗಳನ್ನು ಪ್ರಯೋಗಾಲಯದ ಕೃತಕ ಪರಿಸರದಲ್ಲಿ ಬೆಳೆಸುವ ತಂತ್ರಜ್ಞಾನವಾಗಿತ್ತು.

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶ ಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮ ದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

Screenshot_10 ಋ

ಸ್ವಲ್ಪ ದಿನಗಳಾದ ಮೇಲೆ ನೋಡಿದಳು. ಈ ಕ್ಯಾನ್ಸರ್ ಜೀವಕೋಶಗಳು ತಮ್ಮ ಪುನರುತ್ಪಾದನೆ ಯನ್ನು ನಿಲ್ಲಿಸದೆ, ನಿರಂತರವಾಗಿ ಮತ್ತೆ ಮತ್ತೆ ವಿಭಜನೆಗೊಳ್ಳುತ್ತಿದ್ದವು. ಇಡೀ ಗಾಜಿನ ತಟ್ಟೆಯನ್ನು ತುಂಬಿ ಹೊರಗೆ ಜಿನುಗಲಾರಂಭಿಸಿದವು. ಅದು ಅಂದಿನ ವೈದ್ಯ ವಿಜ್ಞಾನಕ್ಕೆ ಒಂದು ಹೊಸ ಸುದ್ಧಿಯಾಗಿತ್ತು. ಗೇ ಈ ಕ್ಯಾನ್ಸರ್ ಜೀವ ಕೋಶಗಳು ಹೆನ್ರೀಟ್ಟಾ ಲ್ಯಾಕ್ಸ್ ಅವರ ಒಡಲಿನಿಂದ ಬಂದಿದ್ದ ಕಾರಣ, ಆಕೆಯ ಹೆಸರಿನ ಮೊದಲ ಎರಡು ಅಕ್ಷರಗಳನ್ನು ತೆಗೆದುಕೊಂಡು ‘ಹೀಲಾ’ ಜೀವಕೋಶಗಳು ಎಂದು ನಾಮಕರಣ ಮಾಡಿದರು.

ಹೀಲಾ ಜೀವಕೋಶಗಳು ಜಗತ್ತಿನ ಮೊತ್ತಮೊದಲ ‘ಮಾನವ ಅಮರ ಜೀವಕೋಶ’ಗಳ ಸರಣಿ (ಇಮ್ಮಾರ್ಟಲ್ ಹ್ಯೂಮನ್ ಸೆಲ್ಫ್ ಲೈನ್) ಎಂಬ ಅಭಿದಾನಕ್ಕೆ ಪಾತ್ರವಾಯಿತು. ಈ ಬಗ್ಗೆ ಹೆನ್ರೀಟ್ಟಾ‌ ಳಿಗೆ ಲವಲೇಶವೂ ತಿಳಿವಿರಲಿಲ್ಲ.

ದುರಂತ: ಹೆನ್ರೀಟ್ಟಾಳ ಕ್ಯಾನ್ಸರ್ ಜೀವಕೋಶಗಳು ಪ್ರಯೋಗಾಲಯದ ವಿಶೇಷ ಫ್ಲಾಸ್ಕುಗಳಲ್ಲಿ ಅನಿಯಂತ್ರಿತವಾಗಿ ಹೇಗೆ ಬೆಳೆಯುತ್ತಿದ್ದವೋ, ಹಾಗೆಯೇ ಆಕೆಯ ಗರ್ಭಕೊರಳ ಕ್ಯಾನ್ಸರ್ ಸಹಾ ಬೆಳೆಯುತ್ತಿತ್ತು. ಆಕೆಗೆ ‘ಹ್ಯೂಮನ್ ಪ್ಯಾಪಿಲ್ಲೋಮ ವೈರಸ್’ ಎಂಬ ಆಕ್ರಮಣಶೀಲ ಕ್ಯಾನ್ಸರ್ ಬಂದಿತ್ತು. ಹಾಗಾಗಿ ಗರ್ಭ ಕೊರಳಿನಿಂದ ಗುಳೇ ಹೊರಟು ಇಡೀ ಉದರದೊಳಗೆ ವ್ಯಾಪಿಸಿತ್ತು. 1951ರಲ್ಲಿ ಇಂಥ ಕ್ಯಾನ್ಸರನ್ನು ನಿಗ್ರಹಿಸಲು ‘ರೇಡಿಯಂ ಚಿಕಿತ್ಸೆ’ಯನ್ನು ನೀಡುತ್ತಿದ್ದರು. ಆ ರೇಡಿಯಂ ಹೆನ್ರೀಟ್ಟಾಳ ಚರ್ಮವನ್ನು ಸುಟ್ಟು ಕರಕಾಗಿಸಿ, ಅಕೆಯ ಶಕ್ತಿಯನ್ನು ಕುಂದಿಸಿ ದುರ್ಬಲ ಳನ್ನಾಗಿಸಿತು.

ಅಕ್ಟೋಬರ್ ೪, 1951. ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಹೆನ್ರೀಟ್ಟಾಳು ಉಗ್ರ ಸ್ವರೂಪದ ನೋವಿ ನಿಂದ ನರಳಿ ನರಳಿ ಜೀವವನ್ನು ಬಿಟ್ಟಳು. ಆಕೆಯನ್ನು ವರ್ಜೀನಿಯದಲ್ಲಿ ಕ್ಲೋವರ್ ಪ್ರದೇಶದಲ್ಲಿ ಸಮಾಧಿ ಮಾಡಿದರು. ಹೆನ್ರೀಟ್ಟಾ ಸತ್ತುಹೋಗಿದ್ದರೂ, ಆಕೆಯ ಗರ್ಭಕೊರಳ ಕ್ಯಾನ್ಸರಿನ ಜೀವಕೋಶಗಳು ಬೆಳೆಯುತ್ತಲೇ ಇದ್ದವು. ಬೆಳೆಯುತ್ತಾ ಬೆಳೆಯುತ್ತಾ ವೈದ್ಯಕೀಯ ಇತಿಹಾಸಕ್ಕೆ ಮಹಾತಿರುವುಗಳನ್ನು ನೀಡುತ್ತಾ ನಡೆದವು. ಇಂದಿಗೂ ನೀಡುತ್ತಲಿವೆ.

ಅಮರಕೋಶಗಳ ಕಥೆ: ನಮ್ಮ ದೇಹದ ಎಲ್ಲ ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಮಾತ್ರ ವರ್ಧಿಸಿ ನಂತರ ಸ್ಥಗಿತವಾಗುತ್ತಿದ್ದವು. ಆದರೆ ಹೆನ್ರೀಟ್ಟಾಳ ಜೀವಕೋಶಗಳು ಮಾತ್ರ ಸಾವೇ ಇಲ್ಲದೇ, ‘ಅಮರತ್ವ’ ವನ್ನು ಪಡೆದ ಜೀವಕೋಶಗಳಂತೆ ವಿಭಜನೆಯಾಗುತ್ತಲೇ ಇದ್ದವು. ಇಂದಿಗೂ ವಿಭಜನೆಯಾಗುತ್ತಲೇ ಇವೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯು ವಿಜ್ಞಾನಿಗಳನ್ನು ಕಾಡಿತು. ಆಗ ನಡೆಸಿದ ನಿರಂತರ ಸಂಶೋಧನೆಗಳ ಫಲವಾಗಿ ‘ಅಮರತ್ವ’ದ ರಹಸ್ಯವು ಒಂದೊಂದಾಗಿ ಹೊರ ಬಂದವು. ಮನುಷ್ಯನ ದೇಹದ ಎಲ್ಲ ಜೀವಕೋಶಗಳು ೪೦-೬೦ ಸಲ ಮಾತ್ರ ಪುನರುತ್ಪಾದನೆ ಯಾಗುತ್ತವೆ. ಆನಂತರ ಅವು ತಮ್ಮ ಅಭಿವರ್ಧನೆಯನ್ನು ನಿಲ್ಲಿಸುತ್ತವೆ. ಇದನ್ನು ‘ಹೇಫ್ಲಿಕ್ ಮಿತಿ’ (ಹೇಫ್ಲಿಕ್ ಲಿಮಿಟ್; ಅಮೆರಿಕದ ಅಂಗರಚನಾ ವಿಜ್ಞಾನಿ ಲಿಯೋನಾರ್ಡ್ ಹೇಫ್ಲಿಕ್ (೧೯೨೮-೨೦೨೪) ಗೌರವಾರ್ಥ) ಎಂದು ಕರೆಯುತ್ತಾರೆ.

ಕ್ರೋಮೋಸೋಮುಗಳನ್ನು ಒಂದು ‘ಶೂ ಲೇಸ್’ ಎಂದು ಭಾವಿಸೋಣ. ಈ ಲೇಸ್ ಬಿಚ್ಚಿಕೊಳ್ಳ ದಂತೆ ತಡೆಯುವ ಒಂದು ಪುಟ್ಟ ಪ್ಲಾಸ್ಟಿಕ್ಕನ್ನು ತುದಿಗೆ ಕಟ್ಟಿರು ತ್ತಾರೆ. ಹಾಗೆಯೇ ಕ್ರೋಮೋ ಸೋಮುಗಳ ತುದಿಯಲ್ಲೂ ಒಂದು ‘ತುದಿಬಿಗಿ’ ಇರುತ್ತದೆ. ಇದರ ಹೆಸರು ಟೀಲೋಮಿಯರ್. ಟೀಲೋಮಿಯರಿನ ವಿಶೇಷವೆಂದರೆ, ಜೀವಕೋಶವು ಪ್ರತಿಸಲ ವಿಭಜನೆಯಾದಾಗ, ಈ ಟೀಲೋ ಮಿಯರಿನ ತುದಿಯು ಚಿಕ್ಕದಾಗುತ್ತಾ ಹೋಗುತ್ತದೆ.

ಹಾಗಾಗಿ ಜೀವಕೋಶವು ೪೦-೬೦ ಸಲ ವಿಭಜನೆಯಾದಾಗ ಈ ತುದಿಬಿಗಿಯು ಪೂರ್ಣ ಖರ್ಚಾಗು ತ್ತದೆ. ಪ್ಲಾಸ್ಟಿಕ್ ತುದಿಯಿರದ ಶೂ ಲೇಸ್ ಹೇಗೆ ಬಿಚ್ಚಿಕೊಳ್ಳುವುದೋ, ಹಾಗೆಯೇ ಟೀಲೋ ಮಿಯರ್ ಇಲ್ಲದ ಕ್ರೋಮೋಸೋಮ್ ‘ಬಿಚ್ಚಿಕೊಳ್ಳುತ್ತದೆ’. ಜೀವಕೋಶವು ಸ್ಥಗಿತವಾಗುತ್ತದೆ. ಕ್ಯಾನ್ಸರ್ ಜೀವ ಕೋಶಗಳು ಒಂದು ಉಪಾಯವನ್ನು ಕಂಡುಕೊಂಡಿವೆ. ಅವು ‘ಟೀಲೋಮಿರೇಸ್’ ಎಂಬ ಕಿಣ್ವವನ್ನು ರೂಪಿಸುತ್ತವೆ. ಜೀವಕೋಶವು ವಿಭಜನೆಯಾದಾಗಲೆಲ್ಲ ತುಂಡಾಗುತ್ತಾ ಹೋಗುವ ಟೀಲೋಮಿಯರನ ನಷ್ಟಭಾಗವನ್ನು, ಟೀಲೋಮಿರೇಸ್ ಎಂಬ ಕಿಣ್ವದ ನೆರವಿನಿಂದ ಮರು ರೂಪಿಸುತ್ತವೆ.

ಹಾಗಾಗಿ ‘ಶೂಲೇಸ್’ ಎಂದೆಂದಿಗೂ ತುಂಡಾಗುವುದಿಲ್ಲ. ನಿರಂತರವಾಗಿ ರೂಪುಗೊಳ್ಳುತ್ತಲೇ ಇರುತ್ತದೆ. ಹಾಗಾಗಿ ಕ್ಯಾನ್ಸರ್ ಜೀವಕೋಶಗಳಿಗೆ ಸಹಜ ಸಾವು ಎಂಬುದಿಲ್ಲ. ಹೆನ್ರೀಟ್ಟಾಳ ಪ್ರಕರಣದಲ್ಲಿ ವೈರಸ್ಸು ತನ್ನ ತಳಿಯನ್ನು ಗರ್ಭಕೊರಳ ಜೀವಕೋಶಗಳ ತಳಿಯೊಳಗೆ ಸಮ್ಮಿಳಿತ ಗೊಳಿಸಿದೆ. ಇದು, ನಮ್ಮ ದೇಹದಲ್ಲಿ ಕ್ಯಾನ್ಸರ್ ಬೆಳೆಯದಂತೆ ತಡೆಗಟ್ಟುವ ವಂಶವಾಹಿಗಳನ್ನು ನಿಗ್ರಹಿಸಿ, ಕ್ಯಾನ್ಸರ್ ಬೆಳೆಯುವಂತೆ ಪ್ರಚೋದಿಸುವ ವಂಶವಾಹಿಗಳನ್ನು ಉದ್ದೀಪಿಸುವ ಕಾರಣ, ಗರ್ಭಕೊರಳ ಜೀವಕೋಶಗಳು ನಿರಂತರವಾಗಿ ಬೆಳೆಯುತ್ತಲೇ ಇವೆ.

ಹೆನ್ರೀಟ್ಟಾಳ ಪಾಲಿಗೆ ಸಾವನ್ನು ತಂದ ಈ ಅನಿಯಂತ್ರಿತ ಜೀವಕೋಶಗಳು ವೈದ್ಯವಿಜ್ಞಾನದ ಭಾಗ್ಯದ ಬಾಗಿಲನ್ನು ತೆರೆದದ್ದು ಒಂದು ವಿಪರ್ಯಾಸವೇ ಆಗಿದೆ.

ಭಾಗ್ಯದ ಬಾಗಿಲು: ಡಾ.ಜಾರ್ಜ್ ಒಟ್ಟೋ ಗೇ, ಹೀಲಾ ಜೀವಕೋಶಗಳ ಬಗ್ಗೆ ತನ್ನ ಪ್ರಬಂಧವನ್ನು ಮಂಡಿಸಿದಾಗ ವೈದ್ಯಕೀಯ ಲೋಕವು ಹುಚ್ಚೆದ್ದು ಕುಣಿಯಿತು. ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅಗತ್ಯವಾದ ಕಾಲಪೂರ್ಣ ಬದುಕುಳಿಯುವ ಜೀವಕೋಶಗಳು ದೊರೆತದ್ದು ಹಲವು ಅಧ್ಯಯನಗಳನ್ನು ಒಮ್ಮೆಲೆ ಹುಟ್ಟು ಹಾಕಿತ್ತು. ಹೀಲಾ ಕೋಶಗಳ ಮತ್ತೊಂದು ವಿಶೇಷವೆಂದರೆ ಅವು ವೇಗವಾಗಿ ಬೆಳೆಯುತ್ತಿದ್ದವು, ಗಟ್ಟಿಮುಟ್ಟಾಗಿದ್ದವು.

ಶೀತಲೀಕರಣವನ್ನು ತಡೆದುಕೊಂಡವು. ಖಂಡಾಂತರ ಪ್ರಯಾಣವನ್ನು ಸುಲಭವಾಗಿ ಪೂರೈಸಿದವು. ಆರೈಕೆಯಿಲ್ಲದಿದ್ದರೂ ಕಾಡುಗಿಡದ ಹಾಗೆ ಬೆಳೆಯುತ್ತಲೇ ಇದ್ದವು. ಬಹುಶಃ ಅವುಗಳನ್ನು ನಾಶ ಪಡಿಸುವುದು ‘ಅಸಾಧ್ಯ’ವಾಗಿತ್ತು. ಹೀಲಾ ಜೀವಕೋಶಗಳು ಜಗತ್ತಿನ ಎಲ್ಲ ಪ್ರಮುಖ ಪ್ರಯೋಗಾಲ ಯವನ್ನು ತಲುಪಿದವು. ಹಾಗಾಗಿ ಹಲವು ಯಶಸ್ವಿ ಪ್ರಯೋಗಗಳು ನಡೆದವು. ಈಗಲೂ ನಡೆಯು ತ್ತಿವೆ.

ಪೋಲಿಯೊ ಲಸಿಕೆ: 1950ರ ದಶಕದಲ್ಲಿ ಜೊನಾಸ್ ಸಾಲ್ಕ್ ಪೋಲಿಯೋ ಲಸಿಕೆಯನ್ನು ರೂಪಿಸಿದ. ಪೋಲಿಯೋ, ಪ್ರತಿವರ್ಷವು ಸಾವಿರಾರು ಮಕ್ಕಳನ್ನು ಹೆಳವರನ್ನಾಗಿ ಮಾಡುತ್ತಿತ್ತು. ತನ್ನ ಲಸಿಕೆಯ ಪರಿಣಾಮವನ್ನರಿಯಲು ಜೊನಾಸ್ ಸಾಲ್‌ನಿಗೆ ನಂಬಿಕೆಗೆ ಅರ್ಹ ಹಾಗೂ ಸುದೀರ್ಘಕಾಲ ಬದುಕಬಲ್ಲ ಜೀವಕೋಶಗಳು ಬೇಕಾಗಿದ್ದವು. ಆ ಅಗತ್ಯವನ್ನು ಹೀಲಾ ಕೋಶಗಳು ಒದಗಿಸಿದವು. ಪ್ರಯೋಗವು ಯಶಸ್ವಿಯಾಯಿತು. ಭಾರತವು ಇಂದು ಪೋಲಿಯೋ ಮುಕ್ತವಾಗಿದೆ. ಜಗತ್ತೂ ಮುಂದಿನ ದಿನಗಳಲ್ಲಿ ಪೋಲಿಯೋಮುಕ್ತವಾಗಲಿದೆ. ಈ ಸಾಧನೆಯ ಹಿಂದೆ ಹೀಲಾ ಜೀವಕೋಶಗಳ ಬಹು ದೊಡ್ಡ ಕಾಣಿಕೆಯಿದೆ.

ಕ್ಯಾನ್ಸರ್ ಸಂಶೋಧನೆ: ಹೀಲಾ ಜೀವಕೋಶಗಳನ್ನು ಬಳಸಿಕೊಂಡು ವಿಜ್ಞಾನಿಗಳು ಕ್ಯಾನ್ಸರ್ ಜೀವಕೋಶಗಳ ಹುಟ್ಟು, ಬೆಳೆಯುವಿಕೆ, ಹರಡುವಿಕೆ, ಉತ್ಪರಿ ವರ್ತನೆಯಾಗುವಿಕೆ (ಮ್ಯುಟೇಶನ್) ಹಾಗೂ ಚಿಕಿತ್ಸೆಗೆ ನೀಡುವ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಮಾಡಿದ್ದಾರೆ.

ಹಾಗೆಯೇ ಕ್ಯಾನ್ಸರನ್ನು ಪ್ರಚೋದಿಸುವ ‘ಆಂಕೋಜೀನ್ಸ್’ ಹಾಗೂ ಕ್ಯಾನ್ಸರನ್ನು ನಿಗ್ರಹಿಸುವ ‘ಟ್ಯೂಮರ್ ಸಪ್ರೆಸ್ಸಾರ್ ಜೀನ್ಸ್’ ಬಗ್ಗೆ ಅಪಾರ ಮಾಹಿತಿಯನ್ನು ಪಡೆದಿದ್ದಾರೆ. ಪಡೆಯುತ್ತಿದ್ದಾರೆ.

ಜೆನೆಟಿಕ್ ಮ್ಯಾಪಿಂಗ್ ಮತ್ತು ವೈರಾಲಜಿ: ವೈರಸ್ಸುಗಳು ನಮ್ಮ ಜೀವಕೋಶದ ಎಲ್ಲ ರಕ್ಷಣೆಗಳನ್ನು ಭೇದಿಸಿ ಹೇಗೆ ಒಳಪ್ರವೇಶಿಸುತ್ತವೆ, ಹೇಗೆ ಜೀವ ಕೋಶದ ಸಹಜ ಕೆಲಸ ಕಾರ್ಯ ಗಳನ್ನು ಅಲ್ಲೋಲ ಕಲ್ಲೋಲಗೊಳಿಸಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುತ್ತವೆ, ಹೇಗೆ ಹರಡುತ್ತವೆ ಇತ್ಯಾದಿ ಮೂಲ ಭೂತ ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನವನ್ನು ಮಾಡಲು ಸಾಧ್ಯವಾಗಿದೆ. ಈ ತಿಳಿವಿನಿಂದ ಇಂದು ದಡಾರ (ಮೀಸಲ್ಸ್), ಗದ್ದಕಟ್ಟು (ಮಂಪ್ಸ್) ಹಾಗೂ ಗರ್ಭಕೊರಳ ಕ್ಯಾನ್ಸರನ್ನು ಉಂಟು ಮಾಡುವ ಹ್ಯೂಮನ್ ಪ್ಯಾಪಿಲೋಮ ವೈರಸ್ಸನ್ನು (ಎಚ್‌ಪಿವಿ) ನಿಗ್ರಹಿಸಬಲ್ಲ ಲಸಿಕೆಯನ್ನು ರೂಪಿಸಲು ಸಾಧ್ಯವಾಗಿದೆ.

ಭಾರತ ಸರಕಾರವು ೯-೧೪ ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಇದರ ಲಾಭವನ್ನು ಮಕ್ಕಳಿಗೆ ಒದಗಿಸಲು ಪಾಲಕರು ಮನಸ್ಸು ಮಾಡಬೇಕಾಗಿದೆ. ಅಂತರಿಕ್ಷ ಜೀವವಿಜ್ಞಾನ: ಆರಂಭದ ದಿನಗಳಲ್ಲಿ ಹೀಲಾ ಜೀವಕೋಶಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಧ್ಯಯನವನ್ನು ಮಾಡಿದರು. ಮೊದಲ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಹೀಲಾ ಕೋಶಗಳ ವರ್ತನೆಯನ್ನು ಅಧ್ಯಯನ ಮಾಡಿದರು. ಎರಡನೆಯದಾಗಿ ವಿಕಿರಣ ಪರಿಸರದಲ್ಲಿ ಅವು ಹೇಗೆ ಬದುಕುತ್ತವೆ ಎನ್ನುವುದರ ಅಧ್ಯಯನವನ್ನು ಮಾಡಿದರು.

ಇನ್-ವಿಟ್ರೊ ಫರ್ಟಿಲೈಜ಼ೇಶನ್ ಮತ್ತು ಜೀನ್ ಥೆರಪಿ: ಪ್ರನಾಳ ಶಿಶು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಹೀಲಾ ಕೋಶಗಳು ನೆರವಾದವು. ತದ್ರೂಪಿ ತಂತ್ರಜ್ಞಾನವನ್ನು (ಕ್ಲೋನಿಂಗ್) ಹಾಗೂ ಜೆನೆಟಿಕ್ ಎಂಜಿನಿಯರಿಂಗ್ ಸಂಬಂಧಿತ ಪ್ರಯೋಗಗಳನ್ನು ಈ ಕೋಶಗಳ ಮೇಲೆ ಯಶಸ್ವಿಯಾಗಿ ನಡೆಸಿದರು. ಹಾಗೆಯೇ ಮಾನವ ತಳಿವಿನ್ಯಾಸ ಅಧ್ಯಯನದ (ಹ್ಯೂಮನ್ ಜೀನೋ ಮ್ ಪ್ರಾಜೆಕ್ಟ್) ಆರಂಭಿಕ ಪ್ರಯೋಗಗಳನ್ನೂ ಹೀಲಾ ಜೀವಕೋಶಗಳ ಮೇಲೆಯೇ ಮಾಡಿದರು.

ಹೊಸ ಪಿಡುಗುಗಳು: ೨೧ನೆಯ ಶತಮಾನದ ಪಿಡುಗುಗಳಾದ ಎಚ್‌ಐವಿ, ಎಬೋಲ ಹಾಗೂ ಕೋವಿಡ್-19ರ ಚಿಕಿತ್ಸೆ ಹಾಗೂ ಲಸಿಕೆಯನ್ನು ತಯಾರಿಸಲು ಈ ಹೀಲಾ ಕೋಶಗಳನ್ನೇ ಬಳಸಿ ಕೊಂಡರು. ಹಾಗಾಗಿ ಸುಮಾರು 70 ವರ್ಷಗಳಿಂದಲೂ ಹೀಲಾ ಜೀವಕೋಶಗಳು ನಮ್ಮ ಎಲ್ಲ ಮಹತ್ತರ ಸಾಧನೆಗಳ ಹಿಂದೆ ಬಹುದೊಡ್ಡ ಕಾಣಿಕೆಯನ್ನು ನೀಡುತ್ತಿವೆ.

ಕರಾಳ ಛಾಯೆ: ಹೀಲಾ ಜೀವಕೋಶಗಳು ಹಲವು ವೈಜ್ಞಾನಿಕ ಸಾಧನೆಗಳಿಗೆ ಕಾರಣವಾಗಿವೆ ಹಾಗೂ ಆಗುತ್ತಿವೆ ಎಂಬ ಮಾತು ನಿರ್ವಿವಾದ. ಆದರೆ ಈ ಜೀವಕೋಶಗಳನ್ನು ಬಳಸಿಕೊಳ್ಳಲು ಹೆನ್ರೀಟ್ಟಾ ಲ್ಯಾಕ್ಸ್ ಇಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಆಕೆಯ ಮರಣಾನಂತರ ಪ್ರಯೋಗಗಳಲ್ಲಿ ಬಳಸಲು ಅವರ ಮನೆಯವರಿಂದಲೂ ಒಪ್ಪಿಗೆಯನ್ನು ಪಡೆದಿಲ್ಲ. ಹೀಲಾ ಜೀವಕೋಶಗಳ ನೆರವಿನಿಂದ ರೂಪಿಸಿದ ಅನೇಕ ಲಸಿಕೆಗಳನ್ನು ಮಾರಿ ಔಷಧ ಕಂಪನಿಗಳು ಹಾಗೂ ಬಯೋಟೆಕ್ ಕಂಪನಿಗಳು ಬಿಲಿಯನ್‌ಗಟ್ಟಲೆ ಡಾಲರ್ ಹಣವನ್ನು ಮಾಡಿದವು. ಅದರಲ್ಲಿ ಒಂದು ಪಾಲನ್ನೂ ಹೆನ್ರೀಟ್ಟಾಳ ಕುಟುಂಬಕ್ಕೆ ನೀಡಿಲ್ಲ.

1950ರ ದಿನಗಳಲ್ಲಿ ತಿಳಿ ಹೇಳಿದ ಒಪ್ಪಿಗೆ (ಇನ್ ಫಾರ್ಮಡ್ ಕನ್ಸೆಂಟ್) ಎಂಬ ಪರಿಕಲ್ಪನೆಯು ಶೈಶವಾ ವಸ್ಥೆಯಲ್ಲಿತ್ತು. ಹಾಗಾಗಿ ವೈದ್ಯರು ಹೆನ್ರೀಟ್ಟಾಳನ್ನಾಗಲಿ ಅಥವಾ ಅವರ ಮನೆಯವರ ನ್ನಾಗಲಿ ಕೇಳದೆ, ಆಕೆಯ ಗರ್ಭಕೊರಳ ಭಾಗವನ್ನು ತಮ್ಮ ಪ್ರಯೋಗದಲ್ಲಿ ಬಳಸಿಕೊಂಡರು. ಇದು ಅನೈತಿಕ ಎಂದು ಅವರಿಗೆ ಅನಿಸಲಿಲ್ಲ.

ಹೆನ್ರೀಟ್ಟಾ ಸತ್ತು ಎರಡು ದಶಕಗಳಾದರೂ ಆಕೆಯ ಜೀವಕೋಶಗಳನ್ನು ಪ್ರಯೋಗಾಲಯದಲ್ಲಿ ಬಳಸಿಕೊಳ್ಳುತ್ತಿರುವ ವಿಚಾರ ಆಕೆಯ ಕುಟುಂಬಕ್ಕೆ ತಿಳಿದಿರಲಿಲ್ಲ. 1970ರಲ್ಲಿ ವಿಜ್ಞಾನಿಗಳು ಹೆನ್ರೀಟ್ಟಾಳ ಕುಟುಂಬವನ್ನು ಸಂಪರ್ಕಿಸಿದರು. ಕ್ಷಮೆಯನ್ನು ಕೇಳಲು ಅಲ್ಲ; ತಮ್ಮ ಪ್ರಯೋಗ ಗಳಿಗೆ ಹೆನ್ರೀಟ್ಟಾಳ ಬಂಧುಗಳ ರಕ್ತ ಬೇಕಾಗಿದೆ; ಅದನ್ನು ಒದಗಿಸಿ ಎಂದು ಕೇಳಿದರು.

ಆಗ ಹೆನ್ರೀಟ್ಟಾಳ ಕುಟುಂಬಕ್ಕೆ ಅನುಮಾನವು ಬಂದಿತು. ಏನೋ ನಡೆಯಬಾರದ್ದು ನಡೆಯುತ್ತಿದೆ ಎಂದು ಭಾವಿಸಿ, ಹೆನ್ರೀಟ್ಟಾಳ ಮಗಳು ಡೆಬೋರಾ ಲ್ಯಾಕ್ಸ್ ಪತ್ತೆದಾರಿಕೆಗೆ ಇಳಿದಳು. ಇದರ ಫಲವಾಗಿ 2010ರಲ್ಲಿ ರೆಬೆಕ್ಕ ಸ್ಕ್ಲೂಟ್ ಎಂಬಾಕೆಯು ‘ದಿ ಇಮ್ಮಾರ್ಟಲ್ ಲೈಫ್ ಆಫ್ ಹೆನ್ರೀಟ್ಟಾ ಲ್ಯಾಕ್ಸ್’ ಎಂಬ ಪುಸ್ತಕವನ್ನು ಬರೆದಳು. ‌

ಈ ಪುಸ್ತಕವು, ತಿಳಿ ಹೇಳಿದ ಒಪ್ಪಿಗೆ ಪತ್ರದ ಅಗತ್ಯತೆ, ಖಾಸಗಿತನ ಹಾಗೂ ವರ್ಣಭೇದ ನೀತಿ ಇತ್ಯಾದಿ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿತು. 2013ರಲ್ಲಿ ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್, ಲ್ಯಾಕ್ಸ್ ಕುಟುಂಬದೊಡನೆ ಒಪ್ಪಂದಕ್ಕೆ ಬಂದಿತು. ‌

ಮುಂದಿನ ಪ್ರಯೋಗಗಳಲ್ಲಿ ಹೀಲಾ ಜೀವಕೋಶಗಳನ್ನು ಪ್ರಯೋಗದಲ್ಲಿ ಬಳಸುವ ಮೊದಲು ಕುಟುಂಬದ ಒಪ್ಪಿಗೆಯನ್ನು ಪಡೆಯಬೇಕು ಹಾಗೂ ಪ್ರಬಂಧ ಪ್ರಕಟಣೆಯಲ್ಲಿ ಆಕೆಯನ್ನು ಸ್ಮರಿಸಬೇಕು ಎನ್ನುವುದು ಒಪ್ಪಂದದ ತಿರುಳಾಗಿತ್ತು. ಹೆನ್ರೀಟ್ಟಾ ವೈದ್ಯಕೀಯ ವಿಜ್ಞಾನಕ್ಕೆ ನೀಡಿದ ಅಪಾರ ಕೊಡುಗೆಯನ್ನು 2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮರಣೋತ್ತರವಾಗಿ ಸ್ಮರಿಸಿತು. ಥರ್ಮೋ ಫಿಶರ್ ಸೈಂಟಿಫಿಕ್ ಸಂಸ್ಥೆಯು ಹೆನ್ರೀಟ್ಟಾ ಕುಟುಂಬದ ಜತೆಯಲ್ಲಿ ಅಂತಿಮ ‘ಒಪ್ಪಂದ’ ವನ್ನು ಮಾಡಿಕೊಂಡಿತು.

ಇಂದು ಹೆನ್ರೀಟ್ಟಾ ಅನಾಮಧೇಯಳಾಗಿ ಉಳಿದಿಲ್ಲ. ಮೇರಿಲ್ಯಾಂಡ್ ಮತ್ತು ವರ್ಜೀನಿಯಗಳಲ್ಲಿ ಆಕೆಯ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಹಾಗೂ ಪ್ರಯೋಗಾಲಯದಲ್ಲಿ ಆಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದಾರೆ. ಹೆನ್ರೀಟ್ಟಾ ಓರ್ವ ಸರ್ವೇ ಸಾಮಾನ್ಯ ಕಪ್ಪು ಮಹಿಳೆ. ಆದರೆ ಆಕೆ, ತನಗೇ ತಿಳಿಯದ ಹಾಗೆ ಮನುಕುಲದ ಸೇವೆಯಲ್ಲಿ ತೊಡಗಿದ್ದಾಳೆ. ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಮಹತ್ತರ ತಿರುವನ್ನು ನೀಡಿದ, ನೀಡುತ್ತಿರುವ ಹೀಲಾ ಕೋಶಗಳು ಸದಾಕಾಲಕ್ಕೆ ಅಮರತ್ವವನ್ನು ಪಡೆದಿವೆ.