ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಪ್ರಲ್ಹಾದ್ ಜೋಶಿ
Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದೆಲ್ಲೆಡೆ ಇಂದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪುನರುತ್ಥಾನದ ಕೈಂಕರ್ಯ ನಡೆದಿದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
-
ಲಿಂಗಸುಗೂರು, ಫೆ.20: ಪ್ರಧಾನಿ ನರೇಂದ್ರ ಮೋದಿ ಅವರ (PM Narendra Modi) ನೇತೃತ್ವದಲ್ಲಿ ಭಾರತ ಇಂದು ಬಹುದೊಡ್ಡ ಪರಿವರ್ತನೆ ಕಾಣುತ್ತಿದ್ದು, ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಪಾದಿಸಿದರು. ರಾಯಚೂರು ಜಿಲ್ಲೆ ಲಿಂಗಸುಗೂರಿನ ಗೆಜ್ಜಲಗಟ್ಟಾದ ಶ್ರೀ ವೀರನಾಗಮ್ಮ ದೇವಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಸಾಂಸ್ಕೃತಿಕ ನೆಲೆಯುಳ್ಳ ರಾಷ್ಟ್ರವಾಗಿದ್ದು, ಅನೇಕ ವೈಶಿಷ್ಟ್ಯಗಳ ಸಂಗಮದಿಂದ ಕೂಡಿದೆ. ಪ್ರಮುಖವಾಗಿ ಜ್ಞಾನ, ವಿಜ್ಞಾನ, ಧರ್ಮ, ಸಂಪ್ರದಾಯದ ಪರಿಕಲ್ಪನೆ ನಮ್ಮ ದೇಶದಲ್ಲಿ ಅಗಾಧವಾಗಿದೆ. ಹೀಗಾಗಿ ಭಾರತದ ಹಿರಿಮೆಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ ಎಂದು ಹೇಳಿದರು.
ನೀವು ಯಾವುದೇ ದೇವರನ್ನು ಆರಾಧಿಸಿ, ಪೂಜಿಸಿ. ಆದರೆ, ಜೀವನವನ್ನು ನ್ಯಾಯ, ನೀತಿ, ಶಾಂತಿ, ಧರ್ಮದಿಂದ ನಡೆಸಬೇಕು ಎಂದಿದೆ ನಮ್ಮ ಸನಾತನ ಧರ್ಮ ಎಂದ ಸಚಿವರು, ಪೂಜಾ ಪದ್ಧತಿ ಮೀರಿದ ಒಂದು ಧರ್ಮವಿದ್ದು, ಅದೇ "ಮಾನವ ಧರ್ಮ" ವಾಗಿದೆ ಎಂದು ಪ್ರತಿಪಾದಿಸಿದರು.
ದೇಶ-ಸಮಾಜವನ್ನು ಒಗ್ಗೂಡಿಸಲಿ ಮಠಾಧೀಶರು
ಸಮಾಜದಲ್ಲಿ ಹಿಂದೆ ಸ್ಪ್ರಶ್ಯ - ಅಸ್ಪ್ರಶ್ಯ ಎಂಬುದಿರಲಿಲ್ಲ. ಅದ್ಹೇಗೋ ನಡುವೆ ಹೊಕ್ಕಿದೆ. ಅಸ್ಪೃಷ್ಯತೆಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವ ಪ್ರಯತ್ನವನ್ನು ಎಲ್ಲಾ ಮಠಾಧೀಶರು ಮಾಡಬೇಕಿದೆ ಎಂದು ಆಶಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದೆಲ್ಲೆಡೆ ಇಂದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪುನರುತ್ಥಾನದ ಕೈಂಕರ್ಯ ನಡೆದಿದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ: ಪ್ರಲ್ಹಾದ್ ಜೋಶಿ
ಆಧ್ಯಾತ್ಮಿಕ ಪ್ರವಾಸ
ದೇಶದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಪರಿಚಯ ಮತ್ತು ಶ್ರೀರಾಮನ ಪರಿಚಯಕ್ಕಾಗಿ "ರಾಮಾಯಣ ಸರ್ಕ್ಯೂಟ್" ಎಂಬ ಆಧ್ಯಾತ್ಮಿಕ ಪ್ರವಾಸವನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದರು. ದೇಶದಲ್ಲಿ ಶ್ರೀರಾಮನ ಕುರುಹುಗಳಿರುವ ಕ್ಷೇತ್ರಗಳು ಸೇರಿದಂತೆ ಒಟ್ಟು 15 ಧಾರ್ಮಿಕ, ಆಧ್ಯಾತ್ಮಿಕ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೋಯ್ದು ಪರಿಚಯಿಸುವ ಕೈಂಕರ್ಯವನ್ನು ಮಾಡಲಾಗುತ್ತಿದೆ. ಅಯೋಧ್ಯೆ, ಹಂಪಿ, ಚಿತ್ರಕೂಟ, ನಾಸಿಕ್, ನಾಗ್ಪುರ ಹೀಗೆ ಪ್ರಮುಖ ಸ್ಥಳಗಳಿಗೆ ಮಕ್ಕಳಿಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ರೈಲ್ವೆ ಸಂಚಾರ ಆರಂಭಿಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಈ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಅವರು ಶ್ರೀ ವೀರನಾಗಮ್ಮ ದೇವಿ ನೂತನ ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಸಂತಸ ತಂದಿದೆ. ಯಾವತ್ತೂ ದಾನ ಧರ್ಮ, ಬಡವರ ಪರವಿರುವ ಇವರಿಗೆ ಶ್ರೀ ದೇವಿ ಆಶೀರ್ವಾದ ಸದಾ ಕಾಲಕ್ಕೂ ಇರಲೆಂದು ಹಾರೈಸಿದರು.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಡಾ.ಕೆ.ಎನ್. ನರಸಿಂಹ ಅಡಿಗರವರ ನೇತೃತ್ವದಲ್ಲಿ ಶ್ರೀ ವೀರನಾಗಮ್ಮ ದೇವಿ ಪ್ರಾಣ ಪ್ರತಿಷ್ಠಾನೆ ನೆರವೇರಿತು. ಚಿತ್ರದುರ್ಗ, ಬಾಗಲಕೋಟೆ ಭೋವಿ ಗುರುಪೀಠದ ಪೀಠಾಧೀಶರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕರ್ನಾಟಕಕ್ಕೆ ಬಂಪರ್ ಕೊಡುಗೆ; ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಅಸ್ತು
ಸಮಾರಂಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಮಾನಪ್ಪ ವಜ್ಜಲ, ಶಿವರಾಜ ಪಾಟೀಲ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.