ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Rain: ರಾಜ್ಯಾದ್ಯಂತ ಪ್ರತಾಪ ತೋರಿಸಿದ ಮಳೆ, ವಿವಿಧಡೆ 8 ಮಂದಿ ಸಾವು

ಕೊಪ್ಪಳದಲ್ಲೇ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿಯಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಒಬ್ಬರು, ವಿಜಯಪುರದಲ್ಲೂ ಸಹ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಗದಗದಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದಡೆ ಗೋಕಾಕ್​ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.

ರಾಜ್ಯಾದ್ಯಂತ ಪ್ರತಾಪ ತೋರಿಸಿದ ಮಳೆ, ವಿವಿಧಡೆ 8 ಮಂದಿ ಸಾವು

ಹರೀಶ್‌ ಕೇರ ಹರೀಶ್‌ ಕೇರ May 14, 2025 7:13 AM

ಬೆಂಗಳೂರು: ಕರ್ನಾಟಕದಾದ್ಯಂತ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಿದೆ (Karnataka Rain). ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಮಳೆ ತಂಪು (Karnataka weather) ನೀಡಿದೆ. ಹಾಗೆಯೇ ಮಳೆಯಿಂದ ಸಾಕಷ್ಟು ಕಡೆ ಅವಾಂತರವೂ ಸೃಷ್ಟಿಯಾಗಿದ್ದು, ರಾಜ್ಯದ ನಾನಾ ಕಡೆ 8 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ಸಿಡಿಲು (lightning) ಬಡಿದು 5 ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದೆ.

ಕೊಪ್ಪಳದಲ್ಲೇ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿಯಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಒಬ್ಬರು, ವಿಜಯಪುರದಲ್ಲೂ ಸಹ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಗದಗದಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದಡೆ ಗೋಕಾಕ್​ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.

ಧಾರವಾಡದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಮನಸೂರು ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. 3 ಕಿಲೋಮೀಟರ್​ವರೆಗೆ ಟ್ರಾಫಿಕ್​ ಜಾಮ್ ಆಗಿದೆ. ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದ ರಸ್ತೆಗಳು ಹೊಳೆಯಂತಾಗಿವೆ. ಗಣೇಶನಗರ, ಆನಂದನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡುವಂತಾಗಿದೆ.

ಚರಂಡಿಯಲ್ಲಿ ಕೊಚ್ಚಿಹೋದ ವ್ಯಕ್ತಿ

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಭಾರಿ ಮಳೆಯಿಂದಾಗಿ ಪಟ್ಟಣದ ಚರಂಡಿಗಳು ತುಂಬಿ ಹರಿಯುತ್ತಿದ್ದವು. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದಿದ್ದು, ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಚರಂಡಿಯಲ್ಲಿ ಕೊಚ್ಚಿಹೋದ ಕಾಶಪ್ಪ ಶಿರಟ್ಟಿಗಾಗಿ ಪೊಲೀಸರು, ನಗರಸಭೆ ಸಿಬ್ಬಂದಿ ಶೋಧ ನಡೆಸಿದ್ದಾರೆ.

ಕೊಚ್ಚಿಹೋದ ಬೈಕ್ ಸವಾರ

ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಶರಣಪ್ಪ ಹಡಗಲಿ (39) ಕೊಚ್ಚಿಕೊಂಡು ಹೋದ ವ್ಯಕ್ತಿ. ಶರಣಪ್ಪ ಪತ್ನಿಯ ತವರು ಮನೆ ಬೆನಕೊಪ್ಪಕ್ಕೆ ಹೊರಟಿದ್ದರು. ಸಂಜೆ ಸುರಿದ ಭಾರಿ ಮಳೆಗೆ ತುಂಬಿ ಹಳ್ಳ ಹರಿಯುತ್ತಿತ್ತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಬೈಕ್​ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಗದಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಿಡಿಲು ಬಡಿದು ಸಾವು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತ ದುರ್ದೈವಿ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊಂತಿಕೊಂಡಿದೆ. ಮುದ್ದೇಬಿಹಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಗೆದ್ಲೆಹಳ್ಳಿ‌ಗ್ರಾಮದ ಲೋಕೇಶಪ್ಪ (65) ಮೃತ ದುರ್ದೈವಿ. ಕುರಿ ಮೇಯಿಸಲು ತೆರಳಿದ್ದಾಗ ಘಟನೆ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು, ಸಿಡಿಲು ಬಡಿದು ಬಳ್ಳಾರಿಯಲ್ಲಿ ಇಬ್ಬರು, ವಿಜಯಪುರದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಓರ್ವ ಹಾಗೂ ಕೊಪ್ಪಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಎರಡೂ ಮನೆಯ ಕುಟುಂಬದವರು ಅದೃಷ್ಟವಶಾತ್​ ಪಾರಾಗಿದ್ದಾರೆ. ಮೀಟರ್ ಬೋರ್ಡ್‌, ಮನೆಯ ಹೆಂಚು, ವಿದ್ಯುತ್​ ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆ ಸಿಡಿಲು ಬಡಿದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲೂ ಮಳೆ

ಮಳೆರಾಯ ರಾಜಧಾನಿ ಬೆಂಗಳೂರಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ ಸುತ್ತಮುತ್ತ ಭಾಗದಲ್ಲಿ ಮಳೆಯಾಗಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿತ್ತು. ಬೆಂಗಳೂರಿನಲ್ಲಿ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಬಿಬಿಎಂಪಿ 8 ವಲಯದಲ್ಲಿ 27ಕ್ಕೂ ಹೆಚ್ಚು ಮರ ಹಾಗೂ 94 ಕೊಂಬೆಗಳು ಧರೆಗುರುಳಿರುವೆ. ಈ ಪೈಕಿ ಒಟ್ಟು 8 ಮರ ಹಾಗೂ 39 ಕೊಂಬೆಗಳನ್ನು ಈವರೆಗೆ ತೆರವು ಮಾಡಲಾಗಿದೆ. ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮರಗಳು ಬಿದ್ದಿವೆ.

ಇದನ್ನೂ ಓದಿ: Karnataka Rains: ಹವಾಮಾನ ವರದಿ; ಇಂದು ಬೆಂಗಳೂರು, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ