Umashree: ಡಾ. ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್, ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟ; ಉಮಾಶ್ರೀಗೆ ಗೌರವ
Dr. Rajkumar Award: ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್‌ಕುಮಾರ್ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅಕ್ಟೋಬರ್ 30ರಂದು ಘೋಷಿಸಲಾಗಿದೆ. 2019ನೇ ಸಾಲಿನ ಪ್ರಶಸ್ತಿ ಇದಾಗಿದೆ. ಇದರೊಂದಿಗೆ 2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ, ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದೆ. ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಸಂದಿದೆ. ಇನ್ನು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ನಿರ್ಮಾಪಕ/ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರಿಗೆ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಉಮಾಶ್ರೀ ಆಯ್ಕೆ -
Ramesh B
Oct 30, 2025 8:27 PM
ಬೆಂಗಳೂರು, ಅ. 30: ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್‌ಕುಮಾರ್ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅಕ್ಟೋಬರ್ 30ರಂದು ಘೋಷಿಸಲಾಗಿದೆ. 2019ನೇ ಸಾಲಿನ ಪ್ರಶಸ್ತಿ ಇದಾಗಿದೆ. ಇದರೊಂದಿಗೆ 2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ, ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದೆ. ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ (Umashree) ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಸಂದಿದೆ. ಇಷ್ಟು ವರ್ಷ ಚಿತ್ರರಂಗಕ್ಕೆ, ರಂಗಭೂಮಿಗೆ ಅವರು ಸಲ್ಲಿಸಿರುವ ಸೇವೆ, ಅವರ ಅತ್ಯುತ್ತಮ ನಟನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ನಿರ್ಮಾಪಕ/ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರಿಗೆ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Rajyotsava Award 2025: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್ ಸೇರಿ 70 ಸಾಧಕರು ಆಯ್ಕೆ
ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ರಘುನಾಥ ಚ.ಹ. ಆಯ್ಕೆಯಾಗಿದ್ದು, ಅವರ ʼಬೆಳ್ಳಿತೊರೆ-ಸಿನಿಮಾ ಪ್ರಬಂಧಗಳುʼ ಕೃತಿಗೆ ಈ ಗೌರವ ಸಂದಿದೆ. 2019ನೇ ಸಾಲಿನ ಅತ್ಯುತ್ತಮ ಕಿರಿಚಿತ್ರ ಪ್ರಶಸ್ತಿಗೆ ʼಗುಳೆʼ ಆಯ್ಕೆಯಾಗಿದೆ. ನಿರ್ಮಾಣ: ಮನೋಹರ್ ಎಸ್. ಐಯರ್. ನಿರ್ದೇಶನ: ಶ್ರೀನಾಥ್ ಎಸ್. ಹಡಗಲಿ.
ಪ್ರಶಸ್ತಿಯ ವಿವರ:
2019ನೇ ಕ್ಯಾಲೆಂಡರ್ ವರ್ಷದ ಡಾ. ರಾಜ್‌ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟಗೊಂಡಿದ್ದು, ವಿಜೇತ ಸಾಧಕರಿಗೆ ಅಭಿನಂದನೆಗಳು. pic.twitter.com/EGZlnXgT7G
— DIPR Karnataka (@KarnatakaVarthe) October 30, 2025
ಪ್ರಶಸ್ತಿ ವಿವರ
ಡಾ. ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್ ಮತ್ತು ಡಾ. ವಿಷ್ಣು ವರ್ಧನ್ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನದ ಪದಕ ಒಳಗೊಂಡಿವೆ. ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ವಿಜೇತ ಲೇಖಕರಿಗೆ ಮತ್ತು ಪ್ರಕಾಶಕರಿಗೆ ತಲಾ 20,000 ರೂ. ನಗದು ಹಾಗೂ 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುತ್ತದೆ. ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆಯಾದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ತಲಾ 25 ಸಾವಿರ ರೂ. ನಗದು ಹಾಗೂ 50 ಗ್ರಾಂ ಬೆಳ್ಳಿಯ ಪದಕ ಪ್ರದಾನ ಮಾಡಲಾಗುತ್ತದೆ.
ಇತ್ತೀಚೆಗೆ 'ವಾವ್' ಪ್ರಶಸ್ತಿಗೆ ಆಯ್ಕೆಯಾಗಿದ್ದ ಉಮಾಶ್ರೀ
ಬೆಂಗಳೂರು: ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ರಂಗಭೂಮಿ ಗಾಯಕಿ ಮತ್ತು ಮಾಜಿ ಸಂಸದೆ ಪದ್ಮಶ್ರೀ ಬಿ. ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ಉಬುಂಟು ಮಹಿಳಾ ನಿಯೋಗವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ʼವುಮೆನ್ ಆಫ್ ವರ್ತ್ʼ (ವಾವ್)ನ 2025ರ 5ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
1957ರ ಮೇ 10ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದ ಉಮಾಶ್ರೀ ಕನ್ನಡ ರಂಗಭೂಮಿಯಲ್ಲೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಉಮಾಶ್ರೀ 1980ರಲ್ಲಿ ತೆರೆಕಂಡ ಟಿ.ಎಸ್. ನಾಗಾಭರಣ ನಿರ್ದೇಶನದ ʼಬಂಗಾರದ ಜಿಂಕೆʼ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡು ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2008ರಲ್ಲಿ ರಿಲೀಸ್ ಆದ ʼಗುಲಾಬಿ ಟಾಕೀಸ್ʼ ಕನ್ನಡ ಚಿತ್ರದ ಅಭಿನಯಕ್ಕಾಗಿ ಉಮಾಶ್ರೀ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸದ್ಯ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.