ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chidambara Rao Jambe: ರಾಜ್ಯದ ಖ್ಯಾತ ರಂಗ ನಿರ್ದೇಶಕ, ಚಿಂತಕ ಚಿದಂಬರರಾವ್ ಜಂಬೆ ನಿಧನ

ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರ ಮತ್ತು ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಚಿದಂಬರರಾವ್ ಜಂಬೆ ಅವರು ತಮ್ಮ ಬದುಕನ್ನೇ ಕಲಾಸೇವೆಗಾಗಿ ಮುಡಿಪಿಟ್ಟ ಅಪರೂಪದ ಸಾಧಕರಾಗಿದ್ದಾರೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಖ್ಯಾತ ರಂಗ ನಿರ್ದೇಶಕ, ಚಿಂತಕ ಚಿದಂಬರರಾವ್ ಜಂಬೆ ನಿಧನ

-

Prabhakara R
Prabhakara R Sep 12, 2026 9:16 PM

ಶಿವಮೊಗ್ಗ: ರಾಜ್ಯದ ಖ್ಯಾತ ರಂಗ ನಿರ್ದೇಶಕ, ರಂಗ ಶಿಕ್ಷಕ ಹಾಗೂ ಚಿಂತಕ ಚಿದಂಬರರಾವ್ ಜಂಬೆ (77) (Chidambara Rao Jambe) ಅವರು ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. ಇವರ ಅಗಲಿಕೆಗೆ ನಾಡಿನ ರಂಗಕರ್ಮಿಗಳು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

ಚಿದಂಬರರಾವ್ ಜಂಬೆ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ 1949ರ ಜನವರಿ 3ರಂದು ಜನಿಸಿದರು. ಕೆಳದಿ, ಸಾಗರದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಒಂದು ವರ್ಷ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆದರು.

ಅಪಾರ ರಂಗಭೂಮಿ ತುಡಿತವುಳ್ಳ ಚಿದಂಬರರಾವ್ ಜಂಬೆ ಅವರು 80ರ ದಶಕದ ಆರಂಭದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು. ಅಲ್ಲಿ ಶಿಕ್ಷಣ ಪೂರೈಸಿದ ನಂತರ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣದ ಕೇಂದ್ರದ ಪ್ರಾಂಶುಪಾಲರಾಗಿ ತಮ್ಮ ರಂಗ ಕಾಯಕವನ್ನು ಆರಂಭಿಸಿದರು.

ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿ, ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಜಂಬೆ ಅವರು ಕರ್ನಾಟಕವಲ್ಲದೆ ಹೊರ ರಾಜ್ಯಗಳಲ್ಲೂ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಚೆರ್ರಿ ಹಣ್ಣಿನ ತೋಟ’, ‘ಚಾಣಕ್ಯ ಪ್ರಪಂಚ’, ‘ಪುಂಟಿಲ’, ‘ಆ ಊರು-ಈ ಊರು’, ‘ಅಥೆನ್ಸಿನ ಅರ್ಥವಂತ’, ‘ಲೋಕ ಶಾಕುಂತಲ’, ‘ತಲೆದಂಡ’ ಹೀಗೆ 100ಕ್ಕೂ ಹೆಚ್ಚು ನಾಟಕಗಳನ್ನು ಜಂಬೆ ನಿರ್ದೇಶಿಸಿದ್ದಾರೆ. ಸಂಸ್ಕೃತ ನಾಟಕಗಳಲ್ಲದೆ, ಪಾಶ್ಚಿಮಾತ್ಯ, ಆಧುನಿಕ ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಚಿದಂಬರರಾವ್ ಜಂಬೆ ಅವರ ಹೆಗ್ಗಳಿಕೆ.

ಇವರ ಅಪಾರ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2014ರಲ್ಲಿ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಡಿಸಿಎಂ ಪರಮೇಶ್ವರ್‌ ಸಂತಾಪ ಸೇರಿ ಗಣ್ಯರ ಸಂತಾಪ

ಚಿದಂಬರರಾವ್ ಜಂಬೆ ಅವರ ನಿಧನಕ್ಕೆ ಡಿಸಿಎಂ‌ ಡಾ.ಜಿ.ಪರಮೇಶ್ವರ್ ಅವರು ಸೇರಿ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಸಿಎಂ, ಖ್ಯಾತ ರಂಗ ನಿರ್ದೇಶಕರು, ಚಿಂತಕರು ಆದ ಶ್ರೀ ಚಿದಂಬರರಾವ್ ಜಂಬೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ತಮ್ಮ ಪ್ರಯೋಗಶೀಲತೆ, ರಂಗಚಿಂತನೆಗಳ ಮೂಲಕ ಕನ್ನಡದ ರಂಗಭೂಮಿಯ ಅನನ್ಯ ಪರಂಪರೆಗೆ ಕಸುವು ತುಂಬಿದ ಅಗ್ರಗಣ್ಯರ ಸಾಲಿನಲ್ಲಿ ಜಂಬೆಯವರ ಹೆಸರು ಅಜರಾಮರ.



ಪ್ರಾಧ್ಯಾಪಕರಾಗಿ, ರಂಗ ಶಿಕ್ಷಕರಾಗಿ, ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ನಾಡಿನಾದ್ಯಂತ ನೂರಾರು ಪ್ರತಿಭೆಗಳಿಗೆ ರಂಗ ದೀಕ್ಷೆ ಕೊಟ್ಟ ಮಹನೀಯರು. ಶ್ರೀಯುತರನ್ನು ಕಳೆದುಕೊಂಡು ನಾಡಿನ ಕಲಾಲೋಕ ಇಂದು ಬಡವಾಗಿದೆ. ಚಿದಂಬರರಾವ್ ಜಂಬೆ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಶೋಕತಪ್ತ ಕುಟುಂಬದವರ ದುಃಖದಲ್ಲಿ ನಾನೂ ಭಾಗಿ ಎಂದು ಡಿಸಿಎಂ ತಿಳಿಸಿದ್ದಾರೆ.