ರಾಜ್ಯವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವುದೇ ನಮ್ಮ ಗುರಿ: ಎಚ್.ಕೆ. ಪಾಟೀಲ್
HK Patil: ಅಂಕಿ ಅಂಶಗಳ ಪ್ರಕಾರ ಶೇಕಡಾ 80-85ರಷ್ಟು ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ತೆರಳುತ್ತಿದ್ದು, ಅವರಿಗೆ ಉತ್ತಮ ಗುಣಮಟ್ಟದ ಹೋಟೆಲ್ ಸೌಲಭ್ಯ, ಹೋಂ ಸ್ಟೇ, ಕಮ್ಯೂನಿಟಿ ಸ್ಟೇ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಕಡೆ ಈ ಉದ್ಯಮ ಯೋಜನೆ ರೂಪಿಸಬೇಕಿದೆ. ಒಬ್ಬ ದೇಶೀಯ ಪ್ರವಾಸಿಗ 6,178 ರುಪಾಯಿ ಮತ್ತು ಒಬ್ಬ ವಿದೇಶಿ ಪ್ರವಾಸಿಗ 2,87,261 ರುಪಾಯಿ ವೆಚ್ಚ ಮಾಡುತ್ತಿದ್ದು, ಈ ವೆಚ್ಚದ ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ ಅಭಿವೃದ್ಧಿ ಮಾಡುವ ಕಡೆ ಯೋಜನೆ ರೂಪಿಸಬೇಕಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ʼಕನೆಕ್ಟ್-2026' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಚ್.ಕೆ. ಪಾಟೀಲ್. -
ಬೆಂಗಳೂರು, ಫೆ. 19: ಪ್ರವಾಸೋದ್ಯಮವು ಅಡೆತಡೆಗಳನ್ನು ನಿವಾರಿಸುವ ಒಂದು ಸಾಮಾಜಿಕ ಶಕ್ತಿ. ಅನುಭವದ ಗುಣಮಟ್ಟ ಮತ್ತು ಸುಸ್ಥಿರತೆಯ ಮೇಲೆ ಪ್ರಗತಿಯ ಪಾಲುದಾರರು, ಪ್ರವಾಸೋದ್ಯಮ ಕ್ಷೇತ್ರದ ಎಲ್ಲ ವಿಭಾಗದ ಅಧಿಕಾರಿಗಳು, ನೌಕರರು, ವಿವಿಧ ಪ್ರವಾಸಿ ಪ್ರಿಯರು ಗಮನ ಹರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ (HK Patil) ಹೇಳಿದರು. ನಗರದ ರೆಸಿಡೆನ್ಸಿ ರಸ್ತೆಯ ಮೈಸೂರು ಹಾಲ್‌ನಲ್ಲಿ ಆಯೋಜಿಸಿದ್ದ ʼಕನೆಕ್ಟ್-2026' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ವಲಯದ ಬೆಳವಣಿಗೆಯ ಪ್ರಯೋಜನಗಳು ಬೆಂಗಳೂರಿನ ಜನನಿಬಿಡ ಬೀದಿಗಳಿಂದ ಹಿಡಿದು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಶಾಂತ ಹಳ್ಳಿಗಳವರೆಗೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಕರ್ನಾಟಕವನ್ನು ಶಾಂತಿ, ಕಲಿಕೆ ಮತ್ತು ಸಮೃದ್ಧಿಯ ದಾರಿದೀಪವನ್ನಾಗಿಸಬೇಕು. ಇಂದು ಪ್ರವಾಸಿಗರೆಂದರೆ ದೊಡ್ಡ ದೊಡ್ಡ ರೆಸಾರ್ಟ್‌ಗಳಿಗೆ ತೆರಳುವ ಪ್ರವಾಸಿಗರಷ್ಟೇ ಅಲ್ಲ. ಅಂಕಿ ಅಂಶಗಳ ಪ್ರಕಾರ 80-85% ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ತೆರಳುತ್ತಿದ್ದು, ಅವರಿಗೆ ಉತ್ತಮ ಗುಣಮಟ್ಟದ ಹೋಟೆಲ್ ಸೌಲಭ್ಯ, ಹೋಂ ಸ್ಟೇ, ಕಮ್ಯೂನಿಟಿ ಸ್ಟೇ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಕಡೆ ಈ ಉದ್ಯಮ ಯೋಜನೆ ರೂಪಿಸಬೇಕಿದೆ. ಒಬ್ಬ ದೇಶೀಯ ಪ್ರವಾಸಿಗ 6,178 ರುಪಾಯಿ ಮತ್ತು ಒಬ್ಬ ವಿದೇಶಿ ಪ್ರವಾಸಿಗ 2,87,261 ರುಪಾಯಿ ಪ್ರವಾಸಕ್ಕಾಗಿ ವೆಚ್ಚ ಮಾಡುತ್ತಿದ್ದು, ಇದನ್ನು ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ ಅಭಿವೃದ್ಧಿ ಮಾಡುವ ಕಡೆ ಯೋಜನೆ ರೂಪಿಸಬೇಕಿದೆ ಎಂದರು.
ರಾಜ್ಯವನ್ನು ʼಒಂದು ರಾಜ್ಯ, ಹಲವು ಜಗತ್ತುʼ ಎಂದು ಬಣ್ಣಿಸಲಾಗುತ್ತದೆ. ವಾಸ್ತುಶಿಲ್ಪದ ಅದ್ಭುತಗಳಾದ ಬೇಲೂರು ಹಳೇಬೀಡು, ಹಂಪಿ, ಲಕ್ಕುಂಡಿ, ಬಾದಾಮಿ, ಐಹೊಳೆ, ಪಟ್ಟದಕಲ್ಲಿನಿಂದ ಹಿಡಿದು, ಮಂಜಿನ ಬೆಟ್ಟಗಳು ಮತ್ತು 343 ಕಿಲೋ ಮೀಟರ್ ಉದ್ದದ ಸುಂದರ ಕರಾವಳಿಯವರೆಗೆ - ಈ ನುಡಿಗಟ್ಟು ನಮ್ಮ ನಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂದರು.
ಬಿಜೆಪಿ ಶಾಸಕರೇ ಕಸ ಇಟ್ಟುಕೊಳ್ಳಲಿ: ಡಿ.ಕೆ. ಶಿವಕುಮಾರ್ ವಾಗ್ದಾಳಿ
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತಂದಿದ್ದು ನಾವು ಉಲ್ಲೇಖಿಸಿರುವಂತೆ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದ್ದು ಕೇವಲ ಒಂದು ವಲಯವನ್ನು ನಿರ್ಮಿಸುತ್ತಿಲ್ಲ; ಬದಲಾಗಿ ಅಂತರ್ಗತ ಬೆಳವಣಿಗೆ, ಶಾಂತಿ ಮತ್ತು ಜ್ಞಾನೋದಯದ ಇಂಜಿನ್ ಅನ್ನು ನಿರ್ಮಿಸುತ್ತಿದ್ದೇವೆ. ನಮ್ಮ ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಗಣನೀಯ ಕೊಡುಗೆ ನೀಡುವ ಮೂಲಕ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವುದು ನಮ್ಮ ಗುರಿ. ಈಗ ನಡೆಯುತ್ತಿರುವ ಎಐ ಸಮ್ಮಿಟ್ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಹಲವು ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯಬೇಕು. ಬೆಂಗಳೂರು ಟೆಕ್ ಸಮ್ಮಿಟ್, ಇನ್ವೆಸ್ಟರ್ಸ್ ಮೀಟ್ ಹಾಗೂ ನಮ್ಮ ಕೆಐಟಿಇ ಸಮಾವೇಶದ ಯಶಸ್ಸಿನ ನಂತರ, ಐಐಟಿಎಂ, ಟಿಟಿಎಫ್ ಕಾರ್ಯಕ್ರಮಗಳ ನಂತರ ಇತರ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯೋನ್ಮುಖರಾಗಿ ಹೆಚ್ಚೆಚ್ಚು ಇವೆಂಟ್‌ಗಳನ್ನು ಆಯೋಜಿಸಬೇಕು. ಬ್ರ್ಯಾಂಡ್ ಬೆಂಗಳೂರು ಅಷ್ಟೇ ಅಲ್ಲದೇ ಬಿಯಾಂಡ್ ಬೆಂಗಳೂರಿಗೂ ಹೆಚ್ಚಿನ ಒತ್ತನ್ನು ಮತ್ತು ಸಮಯವನ್ನು ನಾವೆಲ್ಲರೂ ನೀಡಬೇಕಾಗಿದೆ. ಹೆಚ್ಚೆಚ್ಚು ಕನೆಕ್ಟ್ ಕಾರ್ಯಕ್ರಮಗಳನ್ನು ರಾಜ್ಯದೆಲ್ಲಡೆ ಆಯೋಜಿಸಬೇಕು ಎಂದರು.
ಧನಾತ್ಮಕ ಬದಲಾವಣೆ ತನ್ನಿ
ನೀವೆಲ್ಲರೂ ನಮ್ಮ ರಾಜ್ಯದ ರಾಯಭಾರಿಗಳಾಗಿ ಪ್ರತಿನಿಧಿಸಿ, ಈ ವಲಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವಂತಹ ಪ್ರಯತ್ನ ಮಾಡಬೇಕಿದೆ. ನಿಮ್ಮ ಬೆಳವಣಿಗೆಯನ್ನು ಬೆಂಬಲಿಸಲು, ಪ್ರವಾಸೋದ್ಯಮ ಇಲಾಖೆಯು ಪ್ರೋತ್ಸಾಹಕಗಳು ಮತ್ತು ಸಬ್ಸಿಡಿಗಳ ಬಲವಾದ ಚೌಕಟ್ಟನ್ನು ನೀಡಿ ಪ್ರವಾಸೋದ್ಯಮ ವಲಯಕ್ಕೆ ಶಕ್ತಿ ನೀಡಬೇಕಿದೆ. ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿಯವರೆಗೆ 2,091.46 ಕೋಟಿ ರುಪಾಯಿ ಮೊತ್ತದ 122 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ 11,200 ನೇರ ಉದ್ಯೋಗ ಸೃಷ್ಟಿಯಾಗಿದೆ. ಇದೊಂದು ರಾಜ್ಯ ಪ್ರವಾಸೋದ್ಯಮ ವಲಯದಲ್ಲಿ ಹೊಸ ಮೈಲಿಗಲ್ಲಾಗಿದೆ. ನಮ್ಮ 343 ಕಿಲೋ ಮೀಟರ್ ಉದ್ದದ ಸುಂದರ ಕರಾವಳಿಯ ಸಂಪೂರ್ಣ ಲಾಭ ನಮ್ಮ ವಲಯಕ್ಕೆ ತಲುಪಿಸಲು ಈಗಾಗಲೇ ಮಂಗಳೂರಿನಲ್ಲಿ ಕರಾವಳಿ ಭಾಗಿದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿ, ನಮ್ಮ ಸರ್ಕಾರವು ಈ ವಲಯದ ಅಭಿವೃದ್ದಿಗೆ ವೇಗ ನೀಡುವ ಸಂದೇಶವನ್ನು ನೀಡಲಾಗಿದೆ ಎಂದರು.
ಕಳೆದ ವರ್ಷ ನಿಮ್ಮೆಲ್ಲರ ಸಹಕಾರದಿಂದ ದಕ್ಷಿಣ ಭಾರತ ರಾಜ್ಯಗಳ ಹೂಡಿಕೆ ಸಮಾವೇಶ ನಡೆದು 3,000 ಕೋಟಿ ರುಪಾಯಿ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಂದ ನಡೆದಿದೆ. ಇಲ್ಲಿಯವರೆಗೂ ಒಂದು ಯೋಜನೆಯು ಸಾಕಾರಗೊಳ್ಳದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದ ಅವರು, ನೀವುಮುಂದೆ ಬಂದು ಬಂಡವಾಳ ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಷ್ಟೇ ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಇತರ ಬಂಡವಾಳ ಹೂಡಿಕೆದಾರರನ್ನು ಕರೆತರಬೇಕು ಎಂದು ಸಲಹೆ ನೀಡಿದರು.
ಇಂದಿನಿಂದ ಹಂತ ಹಂತವಾಗಿ ಸರಾಗ ಸಫಾರಿ
ಕೆಪಿಎಸ್ ಅಧ್ಯಕ್ಷ ಶಾಮರಾಜು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕ್ ಚಂದ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಜೆಎಲ್‌ಆರ್ ವ್ಯವಸ್ಥಾಪಕ ನಿರ್ದೇಶಕ ಮನು ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು, ಹೂಡಿಕೆದಾರರು, ಹೋಂ ಸ್ಟೇ ಮತ್ತು ಪ್ರವಾಸಿ ರೆಸಾರ್ಟ್‌ಗಳ ಉದ್ಯಮಿಗಳು ಮತ್ತು ಪ್ರವಾಸಿಗರು ಉಪಸ್ಥಿತರಿದ್ದರು.