ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Impact: ಇಂದಿನಿಂದ ಹಂತ ಹಂತವಾಗಿ ಸರಾಗ ಸಫಾರಿ

‘ವಿಶ್ವವಾಣಿ’ ಯ ನಿರಂತರ ವರದಿಗೆ ಎಚ್ಚೆತ್ತಿರುವ ಅರಣ್ಯ ಇಲಾಖೆ ರಚಿಸಿದ್ದ ತಾಂತ್ರಿಕ ಸಮಿತಿ ಯ ಮಧ್ಯಂತರ ವರದಿಯ ಆಧಾರದ ಮೇಲೆ, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವು ದನ್ನು ಒಪ್ಪಿಕೊಂಡಿದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Vishwavani Impact: ಇಂದಿನಿಂದ ಹಂತ ಹಂತವಾಗಿ ಸರಾಗ ಸಫಾರಿ

-

Ashok Nayak
Ashok Nayak Feb 19, 2026 8:36 AM

ಹುಲಿಗೆ ಹೆದರಿದ ಅರಣ್ಯ ಇಲಾಖೆ

ತಜ್ಞರ ಸಮಿತಿಯಿಂದ ಪ್ರಾಥಮಿಕ ವರದಿ ಸಲ್ಲಿಕೆ

ವನ್ಯಜೀವಿಗಳು ಕಾಡಿನಿಂದ ನಾಡಿಗೆ

ಬರಲು ಸಫಾರಿ ಕಾರಣವಲ್ಲ

ವಿಶ್ವವಾಣಿ ನಿರಂತರ ವರದಿಗೆ ಎಚ್ಚೆತ್ತ ಅರಣ್ಯ ಇಲಾಖೆ

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ

ಸಮನ್ವಯ ಕೊರತೆ ಹಾಗೂ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೀಡಾಗಿ ಮುಖಭಂಗ ಅನುಭವಿಸಿದ್ದ ಅರಣ್ಯ ಇಲಾಖೆ ನಾಗರಹೊಳೆ, ಬಂಡೀಪುರ ಅಭಯಾರಣ್ಯ ದಲ್ಲಿ ಇಂದಿನಿಂದಲೇ ಸಫಾರಿ ಪುನಾರಂಭಕ್ಕೆ ನಿರ್ಧರಿಸಿದೆ.

‘ವಿಶ್ವವಾಣಿ’ ಯ ನಿರಂತರ ವರದಿಗೆ ಎಚ್ಚೆತ್ತಿರುವ ಅರಣ್ಯ ಇಲಾಖೆ ರಚಿಸಿದ್ದ ತಾಂತ್ರಿಕ ಸಮಿತಿಯ ಮಧ್ಯಂತರ ವರದಿಯ ಆಧಾರದ ಮೇಲೆ, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿ ಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ ಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿಯ ಪರಾಮರ್ಶೆ ನಡೆಸಲಾಯಿತು.

ಅದರಂತೆ ಸಫಾರಿಯಲ್ಲಿ ಈ ಮೊದಲು ಬಳಕೆ ಮಾಡುತ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ಮಾತ್ರ ನಿರ್ಧರಿಸಲಾಗಿದ್ದು, ಅವಧಿಯಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ 8 ಗಂಟೆಯ ಬದಲಿಗೆ ಒಟ್ಟು 5 ಗಂಟೆ ಅವಧಿಗೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: Safari Begins today: ಇಂದಿನಿಂದಲೇ ಸಫಾರಿ ಶುರು

ಇನ್ನು ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ಅಲ್ಲದೆ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್ ಫಾರ್ ನಿರ್ಬಂಧಿಸಿಯೂ ಸೂಚನೆ ನೀಡಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7 ರಿಂದ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಆರಂಭಿಸಲಾಗುತ್ತಿದೆ ಎಂದರು.

ವಾಹನಕ್ಕೆ ಡ್ಯಾಷ್ ಕ್ಯಾಮ್, ಜಿಪಿಎಸ್: ಪ್ರಸ್ತುತ ಪರಿಸರ ಪ್ರವಾಸೋದ್ಯಮ ಅಂದರೆ ಸಫಾರಿ ಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯ ದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿಗಾಗಿ, ಜಾನುವಾರು ಗಳಿಗೆ ಮೇವು ಬೆಳೆಸಲು ಮತ್ತು ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿ ನೊಂದಿಗೆ ಆರಂಭಿಸಲು ಮತ್ತು ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಷರತ್ತಿನೊಂದಿಗೆ ಆರಂಭಿಸಲು ಸಮ್ಮತಿಸಲಾಗಿದೆ.

ಇದರ ಜೊತೆಗೆ ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಓಡಿಸುವುದು, ಹೆಚ್ಚುವರಿ ಅವಧಿಗೆ ಓಡಿಸುವುದೇ ಮೊದಲಾದ ದುರ್ಬಳಕೆ ತಡೆಗಟ್ಟಲು ಕಡ್ಡಾಯವಾಗಿ ಮುಂದಿನ 2 ತಿಂಗಳೊಳಗಾಗಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್ ಕ್ಯಾಮ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರಾ ಮತ್ತಿತರರು ಪಾಲ್ಗೊಂಡಿದ್ದರು.‌

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036 ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್ ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿಲೋ ಮೀಟರ್ ಅಂದರೆ ಶೇ.7.5 ಮಾತ್ರ.

ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ವಿವರಿಸಿದರು.

ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ

ಜನವರಿ 2ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿಯ ಆಧಾರ ದಲ್ಲಿ ಹಂತ ಹಂತ ವಾಗಿ ಸಫಾರಿ ಆರಂಭಿಸುವ ನಿರ್ಧಾರ ಕೈಗೊಳ್ಳ ಲಾಗಿತ್ತು. ಅದರಂತೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಭಾರ ತೀಯ ವನ್ಯ ಜೀವಿ ಸಂಸ್ಥೆ, ಡೆಹ್ರಾಡೂನ್ ವಿಜ್ಞಾನಿ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ, ಭೋಪಾಲ್ ಪ್ರಾಧ್ಯಾಪಕರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ಮಧ್ಯಂತರ ವರದಿಯ ಬಗ್ಗೆ ಇಂದು ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.

ಸಫಾರಿ ಪುನಾರಂಭಕ್ಕೆ ತಜ್ಞರ ಸಲಹೆ

ಹಿಂದಿನ ಮುಖ್ಯ ವನ್ಯಜೀವಿ ಪರಿಪಾಲಕರು ಕಳೆದ ಡಿಸೆಂಬರ್ 28ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ, ಸರಗೂರು ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಮಾನವ-ವನ್ಯಜೀವಿ ನಿರ್ವಹಣಾ ಶಿಬಿರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ 2 ತಿಂಗಳಲ್ಲಿ ಯಾವುದೇ ಪ್ರಮುಖ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆ ಯಲ್ಲಿ ಹಂತಹಂತವಾಗಿ ಸಫಾರಿ ಪುನಾರಂಭಿಸಬಹುದು ಎಂದು ಶಿಫಾರಸು ಮಾಡಿದ್ದರು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಎನ್‌ಟಿಸಿಎಗೆ ತಿಳಿಸಿಯೇ ಹುಲಿ ಸೆರೆ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ-ಎನ್‌ಟಿಸಿಎ ರಾಜ್ಯದಲ್ಲಿ ಹುಲಿಗಳನ್ನು ಹಿಡಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಆದರೆ, ನಮ್ಮ ಇಲಾಖೆ ಪ್ರತಿಯೊಂದು ಹುಲಿ ಹಿಡಿಯುವಾಗಲೂ ಎನ್ʼಟಿಸಿಎ ಪ್ರಮಾಣಿತ ಮಾನದಂಡ (ಎಸ್‌ಓಪಿ) ಅನುಸರಿಸಿ, ಸಮಿತಿ ರಚಿಸಿ, ಸಮಿತಿ ಶಿಫಾರಸಿನಂತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿದೆ. ಈ ಸಮಿತಿಯಲ್ಲಿ ಎನ್‌ಟಿಸಿಎ ಪ್ರತಿನಿಧಿ ಸಹ ಇರುತ್ತಾರೆ ಎಂದು ಸ್ಪಷ್ಟಪಡಿಸಿ ದರು.

ಹುಲಿಗಳ ಬಗ್ಗೆ ವಿಶ್ವವಾಣಿ ಕಾಳಜಿ

ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರ ಪರಿಣಾಮ ವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್, ಕಾರ್ಬೆಟ್ ಸೇರಿದಂತೆ ಇತರ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ ದೂರಿತ್ತು. ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರೆಸಾರ್ಟ್‌ಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರುಪಾಯಿ ನಷ್ಟವಾಗುತ್ತಿದೆ. ಸುಮಾರು 8000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬಿದ್ದಿರುವುದು ಸೇರಿದಂತೆ ವಿಶ್ವವಾಣಿ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿತ್ತು.

*

Eshwar Khandre (1)

ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯ ಮೃಗಗಳು ನಾಡಿಗೆ ಬಾರದಂತೆ ತಡೆಯಲು ಸೂಚಿಸಲಾಗಿದೆ. ಅಲ್ಲದೆ ಅರಣ್ಯದಂಚಿನ ಜನರಿಗೆ ಕಾಡುಮಿತ್ರ ಯೋಜನೆಯಡಿ ತರಬೇತಿ ನೀಡಲಾಗಿದ್ದು, ಇವರ ವನ್ಯಜೀವಿಗಳ ಚಲನವಲನದ ಬಗ್ಗೆ ಇಲಾಖೆಯೊಂದಿಗೆ ಸಂಪರ್ಕದಲ್ಲಿರುತ್ತಾರೆ.

-ಈಶ್ವರ ಖಂಡ್ರೆ, ಅರಣ್ಯ ಸಚಿವ