ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Transfer of Judges: ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ಪ್ರತಿವರ್ಷದಂತೆ ನಡೆಯುವ ಸಾಮಾನ್ಯ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವರ್ಗಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ಹೈಕೋರ್ಟ್ -

ಹರೀಶ್‌ ಕೇರ
ಹರೀಶ್‌ ಕೇರ Apr 17, 2026 9:46 AM

ಬೆಂಗಳೂರು, ಏ.17: ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ (Judicial System) ಬಹು ದೊಡ್ಡ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದೆ. ಒಟ್ಟು 365 ನ್ಯಾಯಾಧೀಶರ ವರ್ಗಾವಣೆ (Transfer of Judges) ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್ (High Court Registrar) ಆದೇಶ ಹೊರಡಿಸಿದೆ. 111 ಜಿಲ್ಲಾ ನ್ಯಾಯಾಧೀಶರು, 115 ಹಿರಿಯ ಸಿವಿಲ್ ನ್ಯಾಯಾಧೀಶರು, 139 ಸಿವಿಲ್ ಜಡ್ಜ್​​ಗಳ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ, ಯೋಗೀಶ್​ ಗೌಡ ಕೊಲೆ ಪ್ರಕರಣದ (Yogish Gowda Murder Case) ಅಂತಿಮ ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ (Justice Santosh Gajanana Bhat) ಕೂಡ ವರ್ಗಾವಣೆ ಆಗಿದ್ದಾರೆ.

ಬುಧವಾರ ಯೋಗೀಶ್​ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದರು. ನಿನ್ನೆ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅಪರಾಧಿಗಳ ಹೇಳಿಕೆ ದಾಖಲಿಸಿಕೊಂಡು ಶಿಕ್ಷೆ ಪ್ರಕಟದ ಆದೇಶವನ್ನು ಇಂದಿಗೆ (ಏ.17) ಕಾಯ್ದಿರಿಸಿದ್ದಾರೆ. ಈ ಮಧ್ಯೆ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಮೀಡಿಯೇಷನ್ ಸೆಂಟರ್ ನಿರ್ದೇಶಕರಾಗಿ‌ ವರ್ಗಾವಣೆಗೊಳಿಸಲಾಗಿದೆ. ಜೂನ್ 1ರಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

3 ವರ್ಷ ಕಾಲ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ. ಸಂತೋಷ್ ಗಜಾನನ ಭಟ್ ಅವರ ಸ್ಥಾನಕ್ಕೆ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಕೆ.ಬಿ ಶಿವಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಶಿವಪ್ರಸಾದ್ ಅವರು ಪ್ರಸ್ತುತ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಜೂನ್‌ನಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಈ ಹುದ್ದೆಯ ನೇಮಕಾತಿ ಅತ್ಯಂತ ಪ್ರಮುಖವಾಗಿದೆ.

ಕಸ್ಟಡಿಯಲ್ಲಿ ತಂದೆ-ಮಗ ಸಾವು: 9 ಪೊಲೀಸರಿಗೆ ಮರಣದಂಡನೆ; ಮಧುರೈ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು

ಪ್ರತಿವರ್ಷದಂತೆ ನಡೆಯುವ ಸಾಮಾನ್ಯ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವರ್ಗಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಹೈಕೋರ್ಟ್‌ ಆಡಳಿತಾತ್ಮಕ ವಿಭಾಗದಲ್ಲೂ ಬದಲಾವಣೆಗಳಾಗಿದ್ದು, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿದ್ದ ಕೆ.ಎಸ್. ಭರತ್ ಕುಮಾರ್ ಅವರನ್ನು ಬೆಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಇವರ ವರ್ಗಾವಣೆಯಿಂದ ತೆರವಾದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹುದ್ದೆಗೆ ಎಂ. ಚಂದ್ರಶೇಖರ ರೆಡ್ಡಿ ಅವರನ್ನು ನೇಮಿಸಿ ಹೈಕೋರ್ಟ್ ಆದೇಶಿಸಿದೆ. ಈ ಇಬ್ಬರೂ ಹಿರಿಯ ಅಧಿಕಾರಿಗಳು ನ್ಯಾಯಾಂಗದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಹೃದಯಾಘಾತದಿಂದ ನ್ಯಾಯಾಧೀಶೆ ಸಾವು

ತುಮಕೂರು ಜಿಲ್ಲೆಯಲ್ಲಿ ಹೃದಯಾಘಾತದಿಂದ ನ್ಯಾಯಾಧೀಶೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನ್ಯಾಯಾಧೀಶೆ ಕಾಂತಮ್ಮ (43) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧುಗಿರಿಯ ಹೆಚ್ಚುವರಿ ಸಿವಿಲ್ ಮತ್ತು JMFC ನ್ಯಾಯಾಧೀಶರಾಗಿದ್ದ ಕಾಂತಮ್ಮ ಅವರು ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ವಾಸವಿದ್ದರು. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದವರಾಗಿದ್ದ ನ್ಯಾ. ಕಾಂತಮ್ಮ ಅವರು ಕಳೆದ ಒಂದು ವರ್ಷದಿಂದ ಮಧುಗಿರಿಯಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.