CM Siddaramaiah: ಅಸ್ಪೃಶ್ಯತೆಯಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿ: ಸಿಎಂ ಸಿದ್ದರಾಮಯ್ಯ
CM Siddaramaiah: ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು. ಪ್ರಗತಿಪರ ವಿಚಾರಗಳ ಜತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ತುಮಕೂರು: ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ ಇವತ್ತಿಗೂ ಅಸ್ಪೃಶ್ಯತೆ ಹೋಗದಿರುವುದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ರಾಜಕೀಯ ಅಸಮಾನತೆ ಮೂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ನಗರದ ಶ್ರೀದೇವಿ ಕಾಲೇಜಿನಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಕುರುಬರ ಸಂಸ್ಕೃತಿ ದರ್ಶನ ಜನಪ್ರಿಯ ಮಾಲೆಯ 31 ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ಧಿಕ್ಕರಿಸುವ ವೈಜ್ಞಾನಿಕ, ವೈಚಾರಿಕ ಚಿಂತನೆ ಇರಬೇಕು ಎಂದು ಹೇಳಿದರು.
ಹಿಂದೆ ಸಂಸ್ಕೃತ ಕಲಿಯುವ ಶೂದ್ರರಿಗೆ ಕಾದ ಸೀಸದ ಶಿಕ್ಷೆ ನಿಗದಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ ಜೀವನಾನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದು ಅವರು ಹೇಳಿದರು.
ಬಸವಣ್ಣನವರು 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ, ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು. ಪ್ರಗತಿಪರ ವಿಚಾರಗಳ ಜತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ ಎಂದರು. ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರಿಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ. ಕಾಯಕ, ದಾಸೋಹ ಬಸವಣ್ಣನವರ ತತ್ವ. ಇದನ್ನು ಎಲ್ಲರೂ ಪಾಲಿಸಬೇಕು. ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ | BIS Recruitment 2025: ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ
ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ
ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಜನರ ಆರ್ಥಿಕ ಸಬಲತೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರ್ಥಿಕವಾಗಿ, ಸಾಮಾಜಕವಾಗಿ ಶಕ್ತಿ ಬಂದರೆ, ಸಮಾನತೆ ಬರಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಬಹಳ ಉಪಯೋಗವಾಗಿದೆ. ಇದನ್ನು ಸಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.