ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿವಾದದ ಲೇಪ: 'ಮದ್ಯ ಮಾಫಿಯಾ'ಗೆ ಪ್ರೋತ್ಸಾಹಿಸಿ ಹರಾಜು ಮೂಲಕ ಹಣ ಸಂಗ್ರಹ!
ಕಂದಿಕೆರೆಯ ಯಲ್ಲಮ್ಮ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದರೂ, ಜೀರ್ಣೋದ್ಧಾರ ಸಮಿತಿ ಸದಸ್ಯರು ಖಾಸಗಿಯಾಗಿ ಸಭೆ ನಡೆಸಿ ಒಂದು ಅಚ್ಚರಿಯ ಮತ್ತು ಕಾನೂನುಬಾಹಿರ ನಿರ್ಧಾರ ಕೈಗೊಂಡಿ ದ್ದಾರೆ. ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಯಸುವವರಿಗೆ 'ನಿರ್ಬಂಧವಿಲ್ಲದ ಹಕ್ಕನ್ನು' ನೀಡುವ ಒಂದು ವಿಶಿಷ್ಟ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

-

ಧನಂಜಯ್, ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಗ್ರಾಮದ ಶ್ರೀ ಯಲ್ಲಮ್ಮ ದೇವಾಲಯದ ಜೀರ್ಣೋ ದ್ಧಾರ ಕಾರ್ಯವು ಇದೀಗ ಗಂಭೀರ ವಿವಾದದ ಸುಳಿಗೆ ಸಿಲುಕಿದೆ. ದೇವಾಲಯದ ಪುನರುಜ್ಜೀವನಕ್ಕೆ ಆರ್ಥಿಕ ನೆರವು ಪಡೆಯುವ ನೆಪದಲ್ಲಿ, ದೇವಸ್ಥಾನದ ಸಮಿತಿಯು ಗ್ರಾಮದಲ್ಲಿ 'ಅಕ್ರಮ ಮದ್ಯ ಮಾರಾಟ' ದಂಧೆಗೆ ಪ್ರೋತ್ಸಾಹ ನೀಡಿ, ಹರಾಜು ಮೂಲಕ ಹಣ ಸಂಗ್ರಹಿಸಿದೆ ಎಂಬ ಸೀರಿಯಸ್ ಆರೋಪಗಳು ಕೇಳಿಬಂದಿವೆ.
ನಿಯಮ ಉಲ್ಲಂಘಿಸಿ ಹರಾಜು, ₹5.8 ಲಕ್ಷ ಸಂಗ್ರಹ: ಕಂದಿಕೆರೆಯ ಯಲ್ಲಮ್ಮ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದರೂ, ಜೀರ್ಣೋದ್ಧಾರ ಸಮಿತಿ ಸದಸ್ಯರು ಖಾಸಗಿಯಾಗಿ ಸಭೆ ನಡೆಸಿ ಒಂದು ಅಚ್ಚರಿಯ ಮತ್ತು ಕಾನೂನುಬಾಹಿರ ನಿರ್ಧಾರ ಕೈಗೊಂಡಿದ್ದಾರೆ. ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಯಸುವವರಿಗೆ 'ನಿರ್ಬಂಧವಿಲ್ಲದ ಹಕ್ಕನ್ನು' ನೀಡುವ ಒಂದು ವಿಶಿಷ್ಟ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಈ ಅಕ್ರಮ ಹರಾಜಿನಿಂದ ಸುಮಾರು ₹5.8 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಹೇಳಲಾಗು ತ್ತಿದೆ. ರಾಜ್ಯದ ಅಬಕಾರಿ ನಿಯಮಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಕಾನೂನುಬಾಹಿರ ಮಾರ್ಗಗಳಿಂದ ಹಣ ಸಂಗ್ರಹಿಸಿ, ಅದನ್ನು ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿರುವುದು ಸ್ಥಳೀಯ ಭಕ್ತರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: Chikkanayakanahalli News: ಸಂತರ ಜಯಂತಿ ಒಂದೇ ದಿನ ಆಚರಣೆಗೆ ತೀವ್ರ ವಿರೋಧ
ಅಕ್ರಮಕ್ಕೆ 'ದೈವದ ಪ್ರಭಾವ'ವೇ ಗುರಾಣಿ: ಜೀರ್ಣೋದ್ಧಾರ ಕಾರ್ಯದ ಪ್ರಭಾವವನ್ನು ಗುರಾಣಿಯನ್ನಾಗಿ ಬಳಸಿಕೊಂಡಿರುವ ಹರಾಜು ಕೂಗಿದ ವ್ಯಕ್ತಿಗಳು, ಇದೀಗ ಗ್ರಾಮದಲ್ಲಿ ಪರವಾನಿಗೆ ಇಲ್ಲದ ಮದ್ಯವನ್ನು ದುಬಾರಿ ಬೆಲೆಗೆ ನಿರಾತಂಕವಾಗಿ ಮಾರುತ್ತಿದ್ದಾರೆ. ದೇವಸ್ಥಾನದ ಕಾರ್ಯದ ನೆಪ ಇರುವುದರಿಂದ, ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಅದೇ ಸಮಯದಲ್ಲಿ, ಹರಾಜಿನಲ್ಲಿ ಪಾಲ್ಗೊಳ್ಳದ ಇತರರು ಗ್ರಾಮದಲ್ಲಿ ಮದ್ಯ ಮಾರಾಟ ಮಾಡಲು ನಿಷೇಧ ಹೇರಲಾಗಿದೆ.
ರಾಜಕಾರಣಿಗಳು, ಮದ್ಯ ಮಾಫಿಯಾದ ಕೈವಾಡ?: "ಒಂದು ಪವಿತ್ರ ಕಾರ್ಯಕ್ಕೆ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ವಿವಾದಾತ್ಮಕ ಮಾರ್ಗವನ್ನು ಅನುಸರಿಸಬಾರದು" ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ಸ್ಥಳೀಯ ರಾಜಕಾರಣಿ ಗಳು ಮತ್ತು ಮದ್ಯದ ಮಾಫಿಯ ನಡುವಿನ ಅಕ್ರಮ ಒಳಸಂಚನ್ನು ಸೂಚಿಸುತ್ತದೆ ಎಂಬ ಬಲವಾದ ಅನುಮಾನಗಳು ವ್ಯಕ್ತವಾಗಿವೆ.

ಗ್ರಾಮಗಳಲ್ಲಿ ಮದ್ಯದ ಸುಲಭ ಲಭ್ಯತೆಯು ಯುವಜನರು ಮತ್ತು ಕುಟುಂಬಗಳ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಹರಾಜು ಪ್ರಕ್ರಿಯೆ ನಡೆಸಿದ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸ ಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ದೇವಸ್ಥಾನದ ಪಾವಿತ್ರ್ಯ ಮತ್ತು ಸಾರ್ವಜನಿಕ ಸ್ವಾಸ್ಥ್ಯದ ನಡುವೆ ಉದ್ಭವಿಸಿರುವ ಈ ಸಂಘರ್ಷವು ಸವಾಲಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಇಲಾಖೆಗಳು ಯಾವ ಕ್ರಮ ಕೈಗೊಳ್ಳಲಿವೆ ಎಂಬು ದನ್ನು ಕಾದು ನೋಡಬೇಕಿದೆ.