ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗಲ್ಲ: ಡಿಕೆಶಿ ಭರವಸೆ

Hemavathi Link Canal project: ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವೀಕ್ಷಿಸಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಯಾವುದೇ ರೈತರು ಗಾಬರಿಯಾಗುವುದು ಬೇಡ. ನಾನು ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗಲ್ಲ

-

Prabhakara R Prabhakara R Sep 12, 2025 4:53 PM

ಬೆಂಗಳೂರು, ಸೆ.12: “ಹೇಮಾವತಿ ಲಿಂಕ್ ಕೆನಾಲ್ ಯೋಜನೆ (Hemavathi Link Canal project) ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜತೆ ಚರ್ಚೆ ಮಾಡಿ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಶುಕ್ರವಾರ ವೀಕ್ಷಿಸಿದ ನಂತರ ಮಾತನಾಡಿದರು.

“ಈ ವಿಚಾರದಲ್ಲಿ ಯಾವುದೇ ರೈತರು ಗಾಬರಿಯಾಗುವುದು ಬೇಡ. ನಾನು ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಕೇವಲ ಕುಣಿಗಲ್ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳ ಹಿತ ನಮಗೆ ಮುಖ್ಯ. ನಾವೆಲ್ಲರೂ ಸೇರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ನಿಮ್ಮ ಸಮಸ್ಯೆ ಏನೇ ಇದ್ದರೂ ನಾನು ಅದನ್ನು ಬಗೆಹರಿಸುತ್ತೇನೆ” ಎಂದು ಧೈರ್ಯ ತುಂಬಿದರು.

“ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಶಾಸಕರ ಸಲಹೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾದವನಲ್ಲ. ಕರ್ನಾಟಕ ರಾಜ್ಯದ ನೀರಾವರಿ ಮಂತ್ರಿಯಾಗಿದ್ದೇನೆ. ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ನಮ್ಮ ಜವಾಬ್ದಾರಿ. ತುಮಕೂರಿನ ಜನರು ಪ್ರತಿ ಸಂದರ್ಭದಲ್ಲಿಯೂ ನಮಗೆ ಸಂಯಮದಿಂದ ಸಹಕಾರ ನೀಡಿದ್ದಾರೆ” ಎಂದರು.

“ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ನಾನು ನೀರಾವರಿ ಸಚಿವನಾಗಿದ್ದ ವೇಳೆ ಈ ಯೋಜನೆ ಪ್ರಾರಂಭಿಸಲಾಯಿತು. ನಂತರ ಬಿಜೆಪಿ ಸರ್ಕಾರ ಈ ಯೋಜನೆ ನಿಲ್ಲಿಸಿತ್ತು. ಪರಿಣಾಮ 600 ಕೋಟಿಯಿದ್ದ ಯೋಜನಾ ವೆಚ್ಚ ಇಂದು ಒಂದು ಸಾವಿರ ಕೋಟಿಗೆ ಏರಿಕೆಯಾಗಿದೆ. ವೈ.ಕೆ ರಾಮಯ್ಯ ಅವರ ಕಾಲದಿಂದ ಈ ಹೋರಾಟ ನಡೆದಿದ್ದು, ಇದಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಪೈಪ್‌ಗಳ ಖರೀದಿ ಹಾಗೂ ಕೆಲಸ ಆರಂಭಿಸಿ 400 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಇದು ನಾಲ್ಕೈದು ತಿಂಗಳಲ್ಲಿ ಮುಗಿಯುವ ಕೆಲಸ” ಎಂದು ಹೇಳಿದರು.

“ಕಾವೇರಿಯಿಂದ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಈ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಈ ವರ್ಷ ಈಗಾಗಲೇ 220 ಟಿಎಂಸಿ ನೀರು ಹೋಗಿದೆ. ಇನ್ನು ನಾಲ್ಕೈದು ತಿಂಗಳು ಮಳೆ ಬರುವ ಸಾಧ್ಯತೆ ಇದೆ. ಸುಮಾರು 200 ಟಿಎಂಸಿ ನೀರು ಸಮುದ್ರ ಸೇರುವ ನಿರೀಕ್ಷೆ ಇದೆ. ಇದನ್ನು ತಡೆದು ನಮ್ಮ ರೈತರಿಗೆ ಸಹಾಯ ಮಾಡಬೇಕು. ಇದಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಸಬೇಕು. ನೀರು ಹೆಚ್ಚಾಗಿದ್ದಾಗ ಮಾತ್ರ ಬಳಸಲು ಈ ಯೋಜನೆ ತಂದಿದ್ದೇವೆ, ನಮಗೆ ಎಲ್ಲಾ ತಾಲೂಕುಗಳು ಒಂದೇ” ಎಂದು ತಿಳಿಸಿದರು.

“ನಾನು ಕಾಮಗಾರಿ ಸ್ಥಳವನ್ನು ಪರಿಶೀಲನೆ ಮಾಡಿದೆ. ಯಾವುದೇ ಕಾರಣಕ್ಕೂ ನೀರನ್ನು ಕಾಲುವೆಗಳಿಗಿಂತ ಕೆಳಗೆ ಸಾಗಿಸುವುದಿಲ್ಲ. ಒಂದೇ ಎತ್ತರ ಕಾಯ್ದುಕೊಂಡು ಸ್ಕಾಡಾ ಹಾಕಿ ನೀರಿನ ಹರಿವು ಪರಿಶೀಲನೆ ಮಾಡಬಹುದು. ನಾವು ತಮಿಳುನಾಡು, ಮಹಾರಾಷ್ಟ್ರ ಜೊತೆಗಿನ ಜಲ ವಿವಾದದಂತೆ ನಮ್ಮೊಳಗೆ ವಿವಾದಗಳಾಗಬಾರದು. ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸಿದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರಂತೆ ನಮ್ಮ ಸ್ಥಳೀಯರು ಅಡ್ಡಿಪಡಿಸಬಾರದು. ನಾನು ಎಲ್ಲಾ ಶಾಸಕರಿಗೆ ಈ ವಿಚಾರವಾಗಿ ಹೇಳಿದ್ದೇನೆ.

ತುಮಕೂರಿನ ಎಲ್ಲಾ ಕ್ಷೇತ್ರಗಳ ಹಿತ ಕಾಯ್ದು, ಗೌರವ ನೀಡಲು ನಾವು ಬದ್ಧ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ. ಕಳೆದ 20 ವರ್ಷಗಳಿಂದ ಈ ಯೋಜನೆಯ ಕೊನೆ ಭಾಗದ ರೈತರಿಗೆ ಸರಿಯಾಗಿ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಯೋಜನೆ ತಂದಿದ್ದೇವೆ” ಎಂದರು.

ನಿಮ್ಮ ಹಿತ ಕಾಯಲು ಎತ್ತಿನಹೊಳೆ ಯೋಜನೆಯಡಿ ಕೆರೆ ತುಂಬಿಸಲಿದ್ದೇವೆ

“ನಾವು ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೊಂಡಿದ್ದು, ಹೆಚ್ಚಿನ ನೀರು ಸಂಗ್ರಹವಾದಾಗ ಈ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲಾಗುವುದು. ನಾವು ಈ ಯೋಜನೆ ಕೇವಲ ಕುಡಿಯುವ ನೀರಿಗೆ ಮಾತ್ರ, ಕೆರೆಗಳಿಗೆ ನೀರು ಹರಿಸುವುದಿಲ್ಲ ಎಂದು ತೀರ್ಮಾನ ಮಾಡಬಹುದಾಗಿತ್ತು. ಆದರೆ ನೀರು ಹೆಚ್ಚಾಗಿದ್ದಾಗ ನಾವು ವ್ಯರ್ಥ ಮಾಡಬಾರದು ಎಂದು ಈ ಯೋಜನೆ ಮಾಡಿದ್ದೇವೆ. ಇದಕ್ಕಾಗಿ 20 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಆಮೂಲಕ ನಾವು ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

ಪ್ರಶ್ನೋತ್ತರ:

ಈ ನೀರನ್ನು ಮುಖ್ಯ ಕಾಲುವೆಗಳ ಮೂಲಕ ತೆಗೆದುಕೊಂಡು ಹೋಗಬೇಕು ಎಂಬ ಸ್ಥಳೀಯರ ಆಗ್ರಹದ ಬಗ್ಗೆ ಕೇಳಿದಾಗ, “ನಾನು ಈಗಾಗಲೇ ತೀರ್ಮಾನ ಮಾಡಿರುವ ಯೋಜನೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬೇರೆ ತಾಲೂಕುಗಳಿಗೆ ಸಿಗಬೇಕಾದ ನೀರಿನಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗುವುದು. ಕುಣಿಗಲ್‌ಗೆ ಮೀಸಲಾಗಿರುವಷ್ಟು ನೀರನ್ನು ಮಾತ್ರ ನಾವು ನೀಡುತ್ತೇವೆ. ನಿಮಗೆ ಕಡಿಮೆ ಮಾಡಿ, ಅವರಿಗೆ ಹೆಚ್ಚಿನ ನೀರು ನೀಡುವ ಪ್ರಶ್ನೆ ಇಲ್ಲ. ನೀರು ಕಡಿಮೆ ಇದ್ದ ಸಂದರ್ಭದಲ್ಲಿ ಎಲ್ಲರಿಗೂ ಸಮಾನವಾಗಿ ನೀರನ್ನು ಹರಿಸಲಾಗುವುದು. ಸರ್ವರಿಗೂ ಸಮಬಾಳು, ಸಮಪಾಲು” ಎಂದು ತಿಳಿಸಿದರು.

ನೀರು ಹೆಚ್ಚುವರಿಯಾಗಿ ಬಂದರೆ ಮಾತ್ರ ಹರಿಸಲಾಗುವುದೇ ಎಂದು ಕೇಳಿದಾಗ, “ಹೌದು, ನೀರು ಯಾವುದೇ ರೀತಿ ಹೆಚ್ಚುವರಿಯಾಗಿ ಹರಿಯದಂತೆ ಸ್ಕಾಡಾ ವ್ಯವಸ್ಥೆ ಅಳವಡಿಸಲಾಗುವುದು. ಈ ನೀರಿನ ಪಾಲನ್ನು ಸಮವಾಗಿ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.

ಮತ್ತೆ ಈ ಕಾಮಗಾರಿ ಯಾವಾಗ ಆರಂಭಿಸುತ್ತೀರಿ ಎಂದು ಕೇಳಿದಾಗ, “ನೀವೇ ಶುಭ ಗಳಿಗೆ, ಶುಭ ಮುಹೂರ್ತ ನೋಡಿ” ಎಂದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರಿಯಾಗಿ ಪರಿಹಾರ ನೀಡಲಾಗಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಕಾನೂನು ಪ್ರಕಾರ ಯಾರಿಗೆ ಏನು ಪರಿಹಾರ ನೀಡಬೇಕೋ ಅದನ್ನು ನೀಡಲಾಗುವುದು” ಎಂದು ತಿಳಿಸಿದರು.

ಹೋರಾಟಗಾರರಿಗೆ ನಿಮ್ಮ ಸಲಹೆ ಏನು ಎಂದು ಕೇಳಿದಾಗ, “ನಾನು ಅವರಿಗೆ ಕೈ ಮುಗಿದು ಕೇಳಿಕೊಳ್ಳುವುದೇನೆಂದರೆ. ನಾವು ನೆರೆ ರಾಜ್ಯಗಳ ಜೊತೆಗಿನ ಜಲ ಸಂಘರ್ಷದಂತೆ ನಮ್ಮೊಳಗೆ ನಾವೇ ಜಗಳವಾಡುವುದು ಬೇಡ. ನಾವು ರಕ್ತ, ಸಂಬಂಧ ಹಂಚಿಕೊಂಡು ಹುಟ್ಟಿದ್ದೇವೆ, ನೀರು ಹಂಚಿಕೊಂಡು ಬದುಕುತ್ತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Caste Census: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ; ಡಿಸೆಂಬರ್ ಒಳಗೆ ವರದಿ ಸಲ್ಲಿಸಲು ಸಿಎಂ ಸೂಚನೆ

ಪ್ರಾಣ ಹೋದರೂ ಸರಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ನಾವು ಅವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಈ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂದು ಕೇಳಿದಾಗ, “ನಿಮ್ಮ (ಮಾಧ್ಯಮಗಳ) ಹಾಗೂ ಅವರ ಅನುಗ್ರಹದಿಂದ ಈ ಕಾಮಗಾರಿ ಪೂರ್ಣಗೊಳ್ಳಲಿದೆ” ಎಂದರು.