Gubbi News: ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ : ಅಧಿಕಾರಿಗಳಿಗೆ ಧೈರ್ಯ ತುಂಬಿದ ಪಪಂ ಸದಸ್ಯರು
ಕಳೆದ ಸಭೆಯಲ್ಲಿ ನಾವು ಚರ್ಚೆ ಮಾಡಿದ ವಿಚಾರ ಈ ಸಭೆಯ ನಡಾವಳಿಯಲ್ಲಿ ಮುದ್ರಣವೇ ಮಾಡಿಲ್ಲ. 4 ನೇ ವಾರ್ಡ್ ನಲ್ಲಿ ನಡೆದ ಪೈಪ್ ಲೈನ್ ಬಿಲ್ ಪಾವತಿ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಆದರೆ ನಡಾವಳಿ ಯಲ್ಲಿ ಕೈ ಬಿಡಲಾಗಿದೆ ಎಂದು ಕಿಡಿಕಾರಿದ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಕಾಂಪೌಂಡ್ ಬಿದ್ದು ಬಹಳ ವರ್ಷವಾಗಿದೆ. ಬಾಕಿ ಇರುವ ಹಳೇಯ ತಡೆ ಗೋಡೆ ತೆರವು ಮಾಡಬೇಕು.
-
Ashok Nayak
Oct 30, 2025 9:28 PM
ಗುಬ್ಬಿ: ಪಟ್ಟಣದ ಎಲ್ಲಾ ಬಡಾವಣೆಯಲ್ಲಿ ರಸ್ತೆ ಬದಿ ಒತ್ತುವರಿ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಸ್ಥಳದಲ್ಲಿ ಯಾವುದೇ ಶಿಫಾರಸ್ಸಿಗೆ ತಲೆ ಕೆಡಿಸಿಕೊಳ್ಳದೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ಎಂದು ಪಪಂ ಸದಸ್ಯರು ಅಧಿಕಾರಿಗಳಿಗೆ ಧೈರ್ಯ ತುಂಬಿದ ಘಟನೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ನೇತೃತ್ವದ ಸಭೆಯ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷೆ ಆಯಿಷಾ ತಾಸೀನ್ ವಹಿಸಿದ್ದರು. ಕಳೆದ ಬಾರಿ ಒತ್ತುವರಿ ತೆರವು ವಿಚಾರ ಕೈಗೆತ್ತಿಕೊಂಡು ಅರ್ಧಕ್ಕೆ ಕೆಲಸ ಕೈಬಿಟ್ಟ ಬಗ್ಗೆ ಪ್ರಸ್ತಾಪ ಮಾಡಿದ ಸದಸ್ಯರು ಯಾರೇ ಒತ್ತುವರಿ ಮಾಡಿದ್ದರೂ ನಿರ್ಭೀತಿಯಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.
ಸಭೆಯ ಆರಂಭದಲ್ಲಿ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಬಾಡಿಗೆ ಬಾಕಿ ವಸೂಲಿ ವಿಚಾರ ಪ್ರಸ್ತಾಪ ಮಾಡಲಾಯಿತು. ಒಂದು ಲಕ್ಷದೊಳಗೆ ಬಾಕಿ ಇದ್ದಾಗಲೇ ವಸೂಲಿ ಮಾಡಬೇಕು. 2026 ಕ್ಕೆ ಕರಾರು ಮುಗಿಯುವ ಕಾರಣ ಬಾಕಿ ವಸೂಲಿ ತುರ್ತು ಮಾಡಬೇಕು. ಹತ್ತು ಲಕ್ಷ ಹಣ ಬಾಡಿಗೆ ಬಾಕಿ ಇರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯಮಶೀಲತೆ ಸಮಾವೇಶ
ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ, ಕಳೆದ ಸಭೆಯಲ್ಲಿ ನಾವು ಚರ್ಚೆ ಮಾಡಿದ ವಿಚಾರ ಈ ಸಭೆಯ ನಡಾವಳಿಯಲ್ಲಿ ಮುದ್ರಣವೇ ಮಾಡಿಲ್ಲ. 4 ನೇ ವಾರ್ಡ್ ನಲ್ಲಿ ನಡೆದ ಪೈಪ್ ಲೈನ್ ಬಿಲ್ ಪಾವತಿ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಆದರೆ ನಡಾವಳಿಯಲ್ಲಿ ಕೈ ಬಿಡಲಾಗಿದೆ ಎಂದು ಕಿಡಿಕಾರಿದ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಕಾಂಪೌಂಡ್ ಬಿದ್ದು ಬಹಳ ವರ್ಷವಾಗಿದೆ. ಬಾಕಿ ಇರುವ ಹಳೇಯ ತಡೆ ಗೋಡೆ ತೆರವು ಮಾಡಬೇಕು. ಇಲ್ಲವಾದಲ್ಲಿ ಜೀವಹಾನಿ ಆಗುವ ಸಂಭವ ಇದೆ. ಈ ಹಿನ್ನಲೆ ಅನುದಾನ ಬಿಡುಗಡೆ ಮಾಡಿ ಹೊಸದಾಗಿ ಕಾಂಪೌಂಡ್ ನಿರ್ಮಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಕೂಡಲೇ ಸ್ಪಂದಿಸಿದ ಶಾಸಕರು ಎಚ್ ಎಎಲ್ ಘಟಕದ ಸಿಎಸ್ಆರ್ ಫಂಡ್ ಮೂಲಕ ಕಾಂಪೌಂಡ್ ನಿರ್ಮಿಸುವ ಭರವಸೆ ನೀಡಿದರು.
ಬಡಾವಣೆಯ ರಸ್ತೆಗಳಿಗೆ ಶೀಟ್ ಹಾಕಿಕೊಂಡು ಕಾರುಗಳನ್ನು ನಿಲ್ಲಿಸುವುದು, ಹೂವಿನಗಿಡ ಬೆಳೆದು ಬೇಲಿ ಹಾಕಿರುವುದು ತೆರವು ಮಾಡಲು ಸ್ಥಳೀಯ ಸದಸ್ಯರನ್ನು ಮುಂದಿಟ್ಟುಕೊಂಡು ಕೆಲಸ ಮಾಡಿ ಎಂದು ಸದಸ್ಯ ಸಿ.ಮೋಹನ್ ಆಗ್ರಹಿಸಿದರು. ತೆರವು ಕಾರ್ಯಾಚರಣೆಗೆ ಯಾರೂ ಅಡ್ಡಿಪಡಿಸ ಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ ಶಾಸಕರು ವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳು ಕೆಲಸ ಮಾಡುವಾಗ ಸದಸ್ಯರೇ ಅಡ್ಡಿ ಮಾಡುವ ಬಗ್ಗೆ ಕೇಳಿದ್ದೇನೆ. ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಒತ್ತುವರಿ ತೆರವು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಹೇರೂರು ಕೆರೆಗೆ ತೆರಳುವ ಮಾರ್ಗದಲ್ಲಿ ಕೋಳಿ ಮತ್ತು ಮೀನಿನ ತ್ಯಾಜ್ಯ ಎಸೆಯುತ್ತಿರುವುದು ಸರಿಯಲ್ಲ. ಈ ಬಗ್ಗೆ ಹಲವು ಬಾರಿ ಕೇಳಿದರೂ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಲೈಬ್ರರಿ ಪಕ್ಕದ ರಸ್ತೆ ಡಾಂಬರ್ ಕಂಡಿಲ್ಲ. ವಾಹನ ಸಂಚಾರ ಅತಿಯಾದ ಈ ರಸ್ತೆಗೆ ಡಾಂಬರು ಹಾಕಲು ಆಗ್ರಹಿಸಿದರು. ಈ ವಿಚಾರಕ್ಕೆ ಸಾಥ್ ನೀಡಿದ ಸದಸ್ಯ ಸಿ.ಮೋಹನ್ ಒಂದು ಬದಿ ಚರಂಡಿ ಇದ್ದು ಮತ್ತೊಂದು ಬದಿಗೆ ಚರಂಡಿ ಕಡಿ ಸಿಸಿ ರಸ್ತೆ ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಪಾರ್ಕ್ ನಿರ್ವಹಣೆ ಮಾಡಲು ಬರುವ ಯಾರೇ ಆಗಿರಲಿ ಪಟ್ಟಣ ಪಂಚಾಯಿತಿಗೆ ಕಟ್ಟ ಬೇಕಾದ ಬಾಕಿ ತೆರಿಗೆ ಅಥವಾ ಬಾಡಿಗೆ ಕಟ್ಟಿ ಮುಂದುವರೆಯಲು ಸದಸ್ಯ ಶಶಿಕುಮಾರ್ ಚರ್ಚಿಸಿದರು.
ಮಳೆ ಬಂದಾಗ ಎಪಿಎಂಸಿ ಮುಂಭಾಗ ಚರಂಡಿ ನೀರು ರಸ್ತೆಗೆ ಹಾಗೂ ಪಪಂ ಅಂಗಡಿ ಮಳಿಗೆಗಳಿಗೆ ನುಗ್ಗುತ್ತಿದೆ. ದೊಡ್ಡ ಚರಂಡಿ ಹಾಗೂ ಸೇತುವೆ ಮರು ನಿರ್ಮಾಣ ಮಾಡಬೇಕಿದೆ. ಹಾಗೂ ಬಸ್ ನಿಲ್ದಾಣದಲ್ಲಿ ಸಹ ನೀರು ನಿಲ್ಲುತ್ತಿದೆ. ಈ ಜಾಗವನ್ನು ಅಚ್ಚಕಟ್ಟು ಮಾಡಿ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಲು ಸದಸ್ಯ ಜಿ.ಆರ್.ಶಿವಕುಮಾರ್ ಮನವಿ ಮಾಡಿದರು.
ಅಧ್ಯಯನ ಪ್ರವಾಸ ಕೈಗೊಂಡ ಪಟ್ಟಣ ಪಂಚಾಯಿತಿ ಸದಸ್ಯರ ಜೊತೆ ಬೇರೆಯವರ ಪ್ರವಾಸ ಅಗತ್ಯವಿಲ್ಲ ಎಂದು ಸದಸ್ಯೆ ಸವಿತಾ ಎಸ್.ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳಾ ಸದಸ್ಯರ ಜೊತೆ ಅವರ ಗಂಡಂದಿರ ಪ್ರವಾಸ ಮಾಡಿದ್ದಲ್ಲಿ ಪ್ರತ್ಯೇಕ ಹಣ ನೀಡಬೇಕಿದೆ ಎಂದು ಹಿರಿಯ ಸದಸ್ಯ ಮಹಮದ್ ಸಾದಿಕ್ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾದ ಯುಜಿಡಿ ಒಳಚರಂಡಿ ಕೊಳವೆ ಮಾರ್ಗದ ಒಟ್ಟು 1600 ಚೆಂಬರ್ ಹಾಗೂ ಮ್ಯಾನ್ ಹೋಲ್ ಪರಿಶೀಲನೆ ಹಾಗೂ ಸ್ವಚ್ಛತೆಗೆ ಹಣ ಬಿಡುಗಡೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಯಿತು.
ಹೀಗೆ ಹತ್ತು ಹಲವು ಸಮಸ್ಯೆ ಆಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕಿದೆ. ಅವಧಿಯ ಅಂತ್ಯದ ವೇಳೆ ಯಾವುದೇ ಗೊಂದಲ ಮಾಡಿಕೊಳ್ಳದೆ ಅಧ್ಯಯನ ಪ್ರವಾಸ ಮುಗಿಸಿ ಬಂದು ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಮ್ಮತದ ಸಹಕಾರ ನೀಡುವಂತೆ ಸೂಚಿಸಿದರು. ನಂತರ ಮತ್ತಷ್ಟು ಅಭಿವೃದ್ದಿ ವಿಚಾರ ಹಾಗೂ ರಸ್ತೆ ಅಭಿವೃದ್ಧಿ ಪಟ್ಟಿ ಮಾಡಲಾಯಿತು.
ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಬಿಂದುಸಾರ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.